ಕೂಡಿಗೆ, ಜೂ. 16: ರಾಷ್ಟ್ರೀಯ ಪಂಚಾಯತ್ ರಾಜ್ಯ ಇಲಾಖೆಯ (ಎನ್.ಐ.ಆರ್.ಡಿ.) ತಂಡ ಕೊಡಗು ಜಿಲ್ಲೆಯ ಪ್ರಶಸ್ತಿ ಪುರಸ್ಕøತ ಸಂಪಾಜೆ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಜನಸಂಖ್ಯೆಯನ್ನು ಹೆಚ್ಚು ಹೊಂದಿರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ 14ನೇ ಹಣಕಾಸಿನ ಯೋಜನೆಯ ಕಾಮಗಾರಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲು ರಾಜ್ಯದ ಉಸ್ತುವಾರಿ ವಹಿಸಿರುವ ಶ್ರೀಕಂಠೇಗೌಡ ಅವರ ನೇತೃತ್ವದ ನಾಲ್ಕು ಜನರ ತಂಡ ಈ ಮೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ 14ನೇ ಹಣಕಾಸಿನ ಯೋಜನೆಗೆ ಬೇಕಾದಂತಹ ಮಾಹಿತಿಯನ್ನು ಪಡೆಯುತ್ತಿದೆ. 14ನೇ ಹಣಕಾಸಿನ ಯೋಜನೆಯು 2021ರ ವರೆಗೆ ಚಾಲ್ತಿಯಲ್ಲಿದ್ದು, 2015-16, 2016-17ನೇ ಸಾಲಿನಲ್ಲಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವದು. ಸಣ್ಣ ಮತ್ತು ದೊಡ್ಡ ಗ್ರಾಮ ಪಂಚಾಯಿತಿಗಳ ಅಬಿವೃದ್ಧಿಗೆ ಮತ್ತು ಕಾಮಗಾರಿಗೆ ಬೇಕಾಗುವ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ಈ ತಂಡ ಕೊಡಗಿನ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆಯುತ್ತಿದೆ.
ಅದರಂತೆ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಭೇಟಿ ಮಾಡಿರುವ ನಾಲ್ಕು ಅಧಿಕಾರಿಗಳ ತಂಡವು ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರನ್ನು ಪ್ರತ್ಯೇಕವಾಗಿ ಸಂದರ್ಶನ ಮಾಡಿ ಅವರ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಕಲೆಹಾಕಿದರು. ಅಲ್ಲದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದೊಂದು ಗ್ರಾಮಗಳಿಗೂ ಭೇಟಿ ನೀಡಿ, ನಡೆದಿರುವ ಕಾಮಗಾರಿ, ನಡೆಯಬೇಕಾದ ಕಾಮಗಾರಿಗಳ ಬಗ್ಗೆ, ಸ್ವ-ಸಹಾಯ ಗುಂಪುಗಳು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಈ ತಂಡವು ಕರ್ನಾಟಕದ ರಾಜ್ಯದಲ್ಲಿ ರಾಜ್ಯ ಮುಖ್ಯಕಾರ್ಯದರ್ಶಿ ಆದೇಶದನ್ವಯ ರಾಜ್ಯದ ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಉಡುಪಿ, ತುಮಕೂರು ಜಿಲ್ಲೆಗಳಲ್ಲಿ ಮಾಹಿತಿ ಪಡೆದು ಇದೀಗ ಕೊಡಗು ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಕಲೆ ಹಾಕಿ, ರಾಜ್ಯ ಮುಖ್ಯಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯತ್ ರಾಜ್ಯ ಇಲಾಖೆಗೆ ಮಾಹಿತಿಯ ಮುಖ್ಯ ಪ್ರತಿಗಳನ್ನು ಒದಗಿಸುವದು ಇದರ ಉದ್ದೇಶವಾಗಿದೆ.
ಎನ್.ಐ.ಆರ್.ಡಿ. ತಂಡದಲ್ಲಿ ರಾಜ್ಯದ ಮೂವರು ಮತ್ತು ಹೈದರಾಬಾದ್‍ನ ಒಬ್ಬರು ಇದ್ದರು.