ಸೋಮವಾರಪೇಟೆ, ಜೂ. 16: ಪರಿಶಿಷ್ಟ ಜಾತಿಗೆ ಒಳಪಡುವ ಭೋವಿ ಸಮುದಾಯದ ಜಾತಿ ಪ್ರಮಾಣ ಪತ್ರವನ್ನು ವ್ಯಕ್ತಿಯೋರ್ವರು ದುರ್ಬಳಕೆ ಮಾಡಿಕೊಂಡು ಸರ್ಕಾರದ ಸವಲತ್ತು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಜಿಲ್ಲಾ ಘಟಕ, ತಕ್ಷಣ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಸಂಘದ ಜಿಲ್ಲಾಧ್ಯಕ್ಷ ಸುಜಿತ್, ಹಾರಂಗಿ ಸಮೀಪದ ಹುಲುಗುಂದ ನಿವಾಸಿ ಚಿನ್ನಕಣ್ಣನ್ ಎಂಬವರು, ಗೊಂದಿಬಸವನಹಳ್ಳಿ ಗ್ರಾಮದ ಭೋವಿ ಸಮುದಾಯಕ್ಕೆ ಸೇರಿದ ರಾಜೇಂದ್ರ ಎಂಬವರ ಜಾತಿ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ತಾಲೂಕು ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವದೇ ಕ್ರಮ ಜರುಗಿಲ್ಲ ಎಂದು ದೂರಿದರು.ಇದೇ ವ್ಯಕ್ತಿ ರಾಜೇಂದ್ರ ಅವರ ವಂಶವೃಕ್ಷವನ್ನು ಪಡೆದು ತಮ್ಮ ಹೆಸರನ್ನು ಸೇರಿಸುವ ಮೂಲಕ ಭಾರೀ ಅಕ್ರಮ ಎಸಗಿದ್ದರೂ ತಾಲೂಕು ಕಚೇರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ತಮ್ಮ ಮಗನ ಶಾಲಾ ದಾಖಲಾತಿಯಲ್ಲೂ ಜಾತಿ ಯನ್ನು ತಿದ್ದುಪಡಿ ಮಾಡಲಾಗಿದೆ. ಈ ವ್ಯಕ್ತಿಯ ಹತ್ತಿರದ ಸಂಬಂಧಿಕರ ಜಾತಿ ಪ್ರಮಾಣ ಪತ್ರದಲ್ಲಿ ಪರಾಚಿ ಕೌಂಡರ್ ಎಂದು ನಮೂದಾಗಿದ್ದು, ಇವರ ಅಕ್ರಮದಿಂದಾಗಿ ಇವರ ಜಾತಿ ಪ್ರಮಾಣ ಪತ್ರದಲ್ಲಿ ಮಾತ್ರ ಭೋವಿ ಎಂದು ನಮೂದಿಸಲಾಗಿದೆ ಎಂದು ಮಾಹಿತಿ ಒದಗಿಸಿದರು. ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಸ್.ಸಿ.-ಎಸ್.ಟಿ. ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಆರ್.ಸಿ. ವಿಜಯ ಮಾತನಾಡಿ, ಇದೇ ಪ್ರಮಾಣಪತ್ರವನ್ನು ಬಳಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಎಸ್.ಸಿ. ಮತ್ತು ಎಸ್.ಟಿ.ಗಳಿಗೆ ಶೇ. 24 ರಷ್ಟು ಮೀಸಲಾತಿಯಿದ್ದು, ಇದೇ ಮೀಸಲಾತಿಯಡಿ ಈ ವ್ಯಕ್ತಿ 24 ಲಕ್ಷಕ್ಕೂ ಅಧಿಕ ವೆಚ್ಚದ ಕಾಮಗಾರಿ ಯನ್ನು ಲೋಕೋಪಯೋಗಿ ಇಲಾಖೆಯೊಂದರಲ್ಲೇ ಮಾಡಿದ್ದಾರೆ. ಇದರಿಂದಾಗಿ ಅರ್ಹ ಫಲಾನುಭವಿ ಗಳಿಗೆ ಅನ್ಯಾಯವಾಗಿದೆ ಎಂದರು.
ಇದರೊಂದಿಗೆ ಜಿಲ್ಲಾ ಪಂಚಾಯಿತಿ ಕಾಮಗಾರಿಯನ್ನೂ ನಿರ್ವಹಿಸಿದ್ದು, ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿಜಯ ಒತ್ತಾಯಿಸಿದರು.
ಕಳೆದ ತಾ.2 6.12.2017 ರಂದು ಚಿನ್ನಕಣ್ಣನ್ ಅವರಿಗೆ ಭೋವಿ ಜನಾಂಗದ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಕಚೇರಿಯಿಂದ ನೀಡಲಾಗಿದೆ. ಈ ಬಗ್ಗೆ ತಾ. 31.03.2018 ರಂದು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಕಚೇರಿಗೆ ಪತ್ರ ಬರೆದಿದ್ದರೂ, ಈವರೆಗೆ ಕ್ರಮ ಕೈಗೊಂಡಿಲ್ಲ. ಕಚೇರಿಗೆ ತೆರಳಿ ವಿಚಾರಿಸಿದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ತಕ್ಷಣ ನಕಲಿ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕು. ಈಗಾಗಲೇ ತಪ್ಪು ಮಾಹಿತಿ ನೀಡಿ ನಿರ್ವಹಿಸುವ ಕಾಮಗಾರಿಯ ಹಣವನ್ನು ಇವರಿಂದಲೇ ವಸೂಲಿ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ವಿಜಯ ಅವರು ಎಚ್ಚರಿಸಿದರು.
ಸಚಿವ ಸ್ಥಾನ ನೀಡಿರುವದು ಸ್ವಾಗತಾರ್ಹ: ಸಮ್ಮಿಶ್ರ ಸರ್ಕಾರದಲ್ಲಿ ಭೋವಿ ಸಮುದಾಯದ ಶಾಸಕ ವೆಂಕಟರಮಣಪ್ಪ ಅವರಿಗೆ ಸಚಿವ ಸ್ಥಾನ ನೀಡಿರುವದು ಸ್ವಾಗತಾರ್ಹ. ಆ ಮೂಲಕ ಸಮುದಾಯವನ್ನು ಗುರುತಿಸಿ, ಕಾರ್ಮಿಕ ಇಲಾಖಾ ಜವಾಬ್ದಾರಿ ನೀಡಿರುವದನ್ನು ಭೋವಿ ಯುವ ವೇದಿಕೆ ಸ್ವಾಗತಿಸುತ್ತದೆ ಎಂದು ಸುಜಿತ್ ತಿಳಿಸಿದರು.
ಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ನಿರ್ದೇಶಕ ಆರ್.ಸಿ. ಅಣ್ಣಪ್ಪ, ಯುವ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸುಬ್ರಮಣಿ ಉಪಸ್ಥಿತರಿದ್ದರು.