ಸುಂಟಿಕೊಪ್ಪ, ಜೂ.16 : ಸತತ ಮಳೆಯಿಂದಾಗಿ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ಸಭಾಂಗಣದ ಮೇಲ್ಛಾವಣಿ ಕುಸಿದು ಹಾನಿಯಾಗಿದೆ. ಸಭಾಂಗಣದ ಮೇಲ್ಛಾವಣಿಯ ಮರಮುಟ್ಟು ಮುರಿದು ಬಿದ್ದ ಪರಿಣಾಮ ಹೆಂಚುಗಳು ನೆಲಕ್ಕುರುಳಿ ಹಾನಿ ಸಂಭವಿಸಿದೆ.

ಶಾಲೆ ಸಭಾಂಗಣದ ಮೇಲ್ಛಾವಣಿ ಕುಸಿದ ಪರಿಣಾಮ ಶಾಲಾ ಆವರಣದಲ್ಲಿ ಮಕ್ಕಳು ಭೀತಿಗೊಂಡಿದ್ದಾರೆ. ಮಳೆಯಿಂದ ಶಾಲಾ ಕಟ್ಟಡ ಹಾಗೂ ಮೇಲ್ಛಾವಣಿಗೆ ಹಾನಿಯಾಗಿರುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕಟ್ಟಡ ದುರಸ್ತಿ ಗೊಳಿಸಲು ಮನವಿ ಮಾಡಲಾಗುವದು ಎಂದು ಶಾಲಾ ಮುಖ್ಯ ಶಿಕ್ಷಕಿ ಸಿ.ಎ. ಗೀತಾ ತಿಳಿಸಿದ್ದಾರೆ.

ತಾ.ಪಂ.ಸದಸ್ಯರ ಭೇಟಿ: ಶಾಲಾ ಕಟ್ಟಡಕ್ಕೆ ಹಾನಿಯಾಗಿರುವ ವಿಷಯ ತಿಳಿದು ಶನಿವಾರ ಶಾಲೆಗೆ ಭೇಟಿ ನೀಡಿದ ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ ಅವರು ಕಟ್ಟಡ ಹಾನಿಯ ಬಗ್ಗೆ ಮುಖ್ಯ ಶಿಕ್ಷಕಿ ಗೀತಾ ಅವರಿಂದ ಮಾಹಿತಿ ಪಡೆದರು.

ಹಾನಿಗೊಂಡಿರುವ ಈ ಕಟ್ಟಡ ಹಾಗೂ ಮೇಲ್ಛಾವಣಿ ದುರಸ್ತಿಗೊಳಿಸಲು ತಾ.ಪಂ. ವತಿಯಿಂದ ಲಭ್ಯವಿರುವ ಅನುದಾನ ಮಂಜೂರುಗೊಳಿಸಲಾಗುವದು ಎಂದು ತಿಳಿಸಿದರು. ಅಂದಾಜು ಪಟ್ಟಿ ತಯಾರಿಸಿ ಗ್ರಾ.ಪಂ. ತಾ.ಪಂ, ಹಾಗೂ ಶಾಸಕರ ನಿಧಿಯಿಂದ ಸೂಕ್ತ ಪ್ರಮಾಣದಲ್ಲಿ ಹಣ ಮಂಜೂರು ಗೊಳಿಸಲು ಪ್ರಯತ್ನಿಸಲಾಗುವದು ಎಂದರು.

ಸರ್ಕಾರಿ ಶಾಲಾ ಜಾಗಕ್ಕೆ ಕೆಲವರು ಅತಿಕ್ರಮಣ ಪ್ರವೇಶ ಮಾಡಿ ಹಾಗೂ ಶಾಲಾ ಕಟ್ಟಡಕ್ಕ ಹಾನಿ ಮಾಡುವದು, ತರಗತಿ ಬೀಗ ಒಡೆದು ದಾಖಲೆ ಮತ್ತು ಪುಸ್ತಕಗಳನ್ನು ಹಾನಿ ಮಾಡಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಒತ್ತಾಯಿಸಲಾಗುವದು ಎಂದು ವಿಮಲಾವತಿ ತಿಳಿಸಿದರು.

ಯಾರೂ ಕೂಡ ಸರ್ಕಾರಿ ಶಾಲೆಯ ಕಟ್ಟಡವನ್ನು ಹಾನಿ ಮಾಡಬಾರದು. ಮೈದಾನದಲ್ಲಿ ಆಟವಾಡುವವರು ಶಾಲೆಗೆ ಯಾವದೇ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ನಗರ ಬಿಜೆಪಿ ಘಟಕ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹೇಳಿದರು. ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ಶಾಸಕರಿಗೆ ಮನವಿ ಸಲ್ಲಿಸಲಾಗುವದು ಎಂದರು. ಮುಖ್ಯ ಶಿಕ್ಷಕಿ ಗೀತಾ, ಜಿಲ್ಲಾ ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಶಿಕ್ಷಕ ಪಿ.ಇ. ನಂದ ಇದ್ದರು.