ಮಡಿಕೇರಿ, ಜೂ. 16: ಜಗತ್ತಿನ ಪ್ರಮುಖ ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ರೋಟರಿ ಜೀವನದ ಹಲವು ಪಾಠಗಳನ್ನು ತಿಳಿಸುವ ಅಪೂರ್ವ ವಿಶ್ವವಿದ್ಯಾನಿಲಯ ದಂತಿದೆ ಎಂದು ರೋಟರಿ ಜಿಲ್ಲೆ 3181ನ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ಹೇಳಿದ್ದಾರೆ.
ಮಡಿಕೇರಿ ರೋಟರಿ ಕ್ಲಬ್‍ಗೆ ಅದಿಕೃತ ಭೇಟಿ ನೀಡಿದ ಸಂದರ್ಭ ಮಾತನಾಡಿದ ಸುರೇಶ್ ಚಂಗಪ್ಪ, ಜೀವನದ ಆಗುಹೋಗುಗಳೊಂದಿಗೆ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಬಲ್ಲ ಶಕ್ತಿ ರೋಟರಿ ಸಂಸ್ಥೆಗಿದೆ ಎಂದು ಶ್ಲಾಘಿಸಿದರು. ಯಾವದೇ ಕ್ಷೇತ್ರದಲ್ಲಿಯೂ ಅಧಿಕಾರ ದೊರಕಿದಾಗ ಅಂಥ ವ್ಯಕ್ತಿಯ ನೈಜ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ. ಆದರೆ ರೋಟರಿಯಲ್ಲಿ ಅಧಿಕಾರ ದೊರಕಿದಾಗ ಆತ ಸ್ವಪ್ರತಿಷ್ಟೆ ಬದಿಗೊತ್ತಿ ಸಮಾಜಮುಖಿಯಾಗಿ ಕಾರ್ಯೋನ್ಮುಖ ನಾಗುತ್ತಾನೆ ಎಂದೂ ಸುರೇಶ್ ಚಂಗಪ್ಪ ಅಭಿಪ್ರಾಯಪಟ್ಟರು.
ತಾಳ್ಮೆ, ಪರಿಶ್ರಮ, ಛಲ, ನಾಯಕತ್ವ ಗುಣಗಳನ್ನು ಕಲಿಸುವ ರೋಟರಿ ಸಂಸ್ಥೆಯು ಪ್ರತಿ ಸದಸ್ಯನಿಗೆ ಅತ್ಯುತ್ತಮ ಪಾಠಶಾಲೆಯಾಗಿದೆ ಎಂದು ಅವರು ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಕಂದಾಯ ಜಿಲ್ಲೆಗಳಲ್ಲಿನ 72 ರೋಟರಿ ಕ್ಲಬ್ ಗಳು ಹಲವಷ್ಟು ಸಾಮಾಜಿಕ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ ಸುರೇಶ್ ಚಂಗಪ್ಪ, ರೋಟರಿ ಜಿಲ್ಲೆಯ ಗವರ್ನರ್ ಆಗಿ 1 ಲಕ್ಷ ಸಸಿ ನೆಡುವ ಯೋಜನೆ ರೂಪಿಸಿದ್ದೆ. ಆದರೆ, 1 ವರ್ಷದಲ್ಲಿ 2.17 ಲಕ್ಷ ಸಸಿಗಳನ್ನು ನೆಡುವ ಮೂಲಕ ಎಲ್ಲಾ ರೋಟರಿ ಸಂಸ್ಥೆಗಳು ದಾಖಲೆ ಸಾಧಿಸಿವೆ ಎಂದು ಶ್ಲಾಘಿಸಿದರು.
ಸ್ವರ್ಗ ಸಮಾನವಾದ ಕೊಡಗಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲೇಬೇಕಾಗಿದೆ. ತ್ಯಾಜ್ಯ ರಹಿತ ಜಿಲ್ಲೆಯಾಗಿ ಪರಿವರ್ತನೆಯೊಂದಿಗೆ ಸ್ವಚ್ಛತೆಯ ಮಹತ್ವದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದೂ ಅವರು ಹೇಳಿದರು.
ರೋಟರಿ ವಲಯ ಸಹಾಯಕ ಗವರ್ನರ್ ಮಹೇಶ್ ನಲ್ವಾಡೆ ಕ್ಲಬ್ ಸದಸ್ಯರ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕಳೆದೊಂದು ವರ್ಷದಲ್ಲಿ ಹಲವಷ್ಟು ಕಾರ್ಯಯೋಜನೆಗಳ ಮೂಲಕ ರೋಟರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಿದ ರಾಜ್ಯಪಾಲ ಸುರೇಶ್ ಚಂಗಪ್ಪ ಅವರನ್ನು ಶ್ಲಾಘಿಸಿದರು.
ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ, ರೋಟರಿ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಮೂರನೇ ಅತಿ ಹಳೇ ಕ್ಲಬ್ ಆಗಿರುವ ಮಡಿಕೇರಿ ರೋಟರಿ ಕ್ಲಬ್ ಸಾಕಷ್ಟು ಯೋಜನೆಗಳ ಮೂಲಕ ಸಮಾಜದ ಜನತೆಗೆ ಉಪಯೋಗಕಾರಿಯಾದ ಕಾರ್ಯ ಹಮ್ಮಿಕೊಂಡಿದೆ ಎಂದು ಶ್ಲಾಘಿಸಿದರು. ರೋಟರಿ ಜಿಲ್ಲಾ ಸಮ್ಮೇಳನವನ್ನು ಮಡಿಕೇರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಕೀರ್ತಿಯೂ ಮಡಿಕೇರಿ ರೋಟರಿಗೆ ಸಲ್ಲಬೇಕೆಂದು ವಿನೋದ್ ಅಭಿನಂದಿಸಿದರು.
ಮಡಿಕೇರಿ ರೋಟರಿ ಅಧ್ಯಕ್ಷ ಪಿ.ಯು. ಪ್ರೀತಮ್ ಮಾತನಾಡಿ, ಜಿಲ್ಲಾ ಸಮ್ಮೇಳನವನ್ನು ನಾಲ್ಕು ಕಂದಾಯ ಜಿಲ್ಲೆಗಳ ನೂರಾರು ರೋಟರಿ ಸದಸ್ಯರ ಮೆಚ್ಚುಗೆಗೆ ಕಾರಣವಾಗುವಂತೆ ಆಯೋಜಿಸಲಾಗಿತ್ತು. ಅಂತೆಯೇ, ಕಿವುಡ, ಮೂಕ ವ್ಯಕ್ತಿಗಳಿಬ್ಬರಿಗೆ ಉಚಿತವಾಗಿ ವಿದೇಶಿ ಮೂಲದ ಉಪಕರಣಗಳನ್ನು ನೀಡಿ ಅವರು ಕೇಳುವಂತೆ ಮಾಡಿದ್ದು ತೃಪ್ತಿ ತಂದಿದೆ ಎಂದು ವರ್ಷದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಸೆಪ್ಟೆಂಬರ್‍ನಲ್ಲಿ ಸ್ಪೇನ್‍ನಲ್ಲಿ ಆಯೋಜಿತ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕೊಡಗಿನ ಅಥ್ಲೆಟ್ ಕೆಚ್ಚೆಟೀರ ರೇಶ್ಮಾದೇವಯ್ಯ ಅವರನ್ನು ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಮಡಿಕೇರಿ ರೋಟರಿ ಕ್ಲಬ್‍ಗೆ ಡಾ.ಅಜಿತ್‍ಕುಮಾರ್ ಹಾಗೂ ನಡಿಕೇರಿಯಂಡ ಅಚ್ಚಯ್ಯ ಅವರನ್ನು ಸದಸ್ಯರನ್ನಾಗಿ ಸೇರ್ಪಡೆ ಗೊಳಿಸಲಾಯಿತು. ಕ್ಲಬ್ ಕಾರ್ಯದರ್ಶಿ ರತನ್ ತಮ್ಮಯ್ಯ, ಮುಂದಿನ ಸಾಲಿನ ಅಧ್ಯಕ್ಷ ಮೇಜರ್ ಓ.ಎಸ್. ಚಿಂಗಪ್ಪ ವೇದಿಕೆಯಲ್ಲಿದ್ದರು. ಜಿಲ್ಲೆಯಾದ್ಯಂತ ರೋಟರಿ ಕ್ಲಬ್‍ಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.