ಶನಿವಾರಸಂತೆ, ಜೂ. 16: ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಮಹಮ್ಮದ್ ಗೌಸ್ ವಹಿಸಿದ್ದರು.

ಸಭೆಯಲ್ಲಿ ವಿವಾದಾಸ್ಪದ ವಾಣಿಜ್ಯ ಸಂಕೀರ್ಣ, ಜಮಾ ಖರ್ಚು, ಅಭಿವೃದ್ಧಿ ಕಾಮಗಾರಿ ಇತ್ಯಾದಿ ಸಮಸ್ಯೆಗಳನ್ನು ಗಂಭೀರವಾಗಿ ಚರ್ಚಿಸಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ವಿವಾದಾಸ್ಪದ ವಾಣಿಜ್ಯ ಸಂಕೀರ್ಣದ ಕೋರ್ಟ್ ಖರ್ಚು ರೂ. 25 ಸಾವಿರವಾಗಿದ್ದು, ಆ ವಿಷಯದಲ್ಲಿ ಅನಾವಶ್ಯಕ ಖರ್ಚು ಮಾಡುತ್ತಿರುವದು ಏಕೆ? ಎಂದು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಆರ್. ಹರೀಶ್ ಪ್ರಶ್ನಿಸಿದರು.

ಅಧ್ಯಕ್ಷ ಮಹಮ್ಮದ್ ಗೌಸ್ ಉತ್ತರಿಸುತ್ತಾ ನ್ಯಾಯಾಲಯದ ಆದೇಶ ಪಂಚಾಯಿತಿ ಪರವಾಗಿದೆ. ನ್ಯಾಯಾಲಯಕ್ಕೆ ಹೋಗದೇ ಲಕ್ಷಾಂತರ ರೂಪಾಯಿ ಆದಾಯ ತರುವ ವಾಣಿಜ್ಯ ಸಂಕೀರ್ಣವನ್ನು ಗುತ್ತಿಗೆದಾರರಿಗೆ ಬಿಡಬೇಕಿತ್ತಾ? ಎಂದು ಮರು ಪ್ರಶ್ನಿಸಿದರು. ಈ ಸಂದರ್ಭ ಮಾತನಾಡಿದ ಸದಸ್ಯ ಸರ್ದಾರ್ ಅಹಮ್ಮದ್, ವಾಣಿಜ್ಯ ಸಂಕೀರ್ಣ ವಿಷಯವಾಗಿ ವಕೀಲರಿಗೆ ಹಣ ಕೊಡ ಬೇಕಾಗುತ್ತದೆ. ಅದು ತಪ್ಪಾಗುವದಿಲ್ಲ. ನ್ಯಾಯಾಲಯ ಸ್ಪಷ್ಟವಾಗಿ ಆದೇಶ ನೀಡಿದೆ. ವಾಣಿಜ್ಯ ಸಂಕೀರ್ಣ ಇರುವ 4 ಸೆಂಟ್ ಜಾಗವನ್ನು ಪಂಚಾಯಿತಿ ಯವರು ವಶ ಪಡಿಸಿಕೊಂಡು ಉಳಿದ ಜಾಗವನ್ನು ತಹಶೀಲ್ದಾರ್ ಮುಖಾಂತರ ಕಾನೂನು ಸಲಹೆ ಪಡೆದು ವಶಪಡಿಸಿ ಕೊಳ್ಳಬಹುದು. ಮೇಲ್ಮನವಿದಾರರಿಗೂ ಆ ಜಾಗಕ್ಕೂ ಯಾವದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದರೂ ಮತ್ತೆ ನೋಟೀಸ್ ಕಳುಹಿಸಿದ್ದು ತಪ್ಪಾಗಿದೆ. ಇಂತಹ ಸೂಕ್ಷ್ಮ ವಿಚಾರವನ್ನು ಆಡಳಿತ ಮಂಡಳಿ ಗಮನಕ್ಕೆ ತರಬೇಕಿತ್ತು ಎಂದು ಅಭಿವೃದ್ಧಿ ಅಧಿಕಾರಿಯವರನ್ನು ಆಕ್ಷೇಪಿಸಿದರು. ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಉಡಾಫೆ ಉತ್ತರ ನೀಡುವ ನೀರು ನಿರ್ವಾಹಕರನ್ನು ಎಚ್ಚರಿಸಿ ಸಮಯಕ್ಕೆ ಸರಿಯಾಗಿ ನೀರು ಬಿಡುವಂತೆ ಮಾಡಬೇಕು. ಪಂಚಾಯಿತಿ ವತಿಯಿಂದ ಮತ್ತೆ 2 ಕೊಳವೆ ಬಾವಿ ತೆಗೆಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯಿತಿ ಖರ್ಚು ವೆಚ್ಚದ ಬಿಲ್ಲುಗಳನ್ನು ಸರಿಯಾಗಿ ಇಟ್ಟಿಲ್ಲ ಎಂದು ಕೆಲ ಸದಸ್ಯರು ಆರೋಪಿ ಸಿದರು. ಜನಸಾಮಾನ್ಯರ ಕೆಲಸಗಳನ್ನು ಶೀಘ್ರ ಮಾಡಿಕೊಡುವಂತೆಯೂ ದೂರುಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಪಿಡಿಓ ಅವರಿಗೆ ಸಲಹೆ ನೀಡಿದರು. ರಾಷ್ಟ್ರಮಟ್ಟದ ಹಾಕಿ ಕ್ರೀಡಾಪಟು ರಂಜಿತಾ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಅಭ್ಯಾಸ ನಿರತರಾಗಿದ್ದಾಗ ಬಿದ್ದು ಕಾಲಿಗೆ ಪೆಟ್ಟಾಗಿದ್ದು, ಅವರ ಕಾಲಿನ ಶಸ್ತ್ರ ಚಿಕಿತ್ಸೆಗೆ ಪಂಚಾಯಿತಿ ನಿಧಿಯಿಂದ ರೂ. 30 ಸಾವಿರ ನೀಡುವಂತೆ ತೀರ್ಮಾನಿಸಲಾಯಿತು. ಈ ಸಂದರ್ಭ ಸದಸ್ಯ ಸರ್ದಾರ್ ಅಹಮ್ಮದ್ ಕ್ರೀಡಾಪಟುವಿನ ಚಿಕಿತ್ಸೆಗಾಗಿ ವೈಯಕ್ತಿಕವಾಗಿ ರೂ. 10 ಸಾವಿರ ನೀಡಿ ಮಾನವೀಯತೆ ಮೆರೆದರು.

ಬೈಪಾಸ್ ರಸ್ತೆಯಲ್ಲಿ 3 ಮದ್ಯ ದಂಗಡಿಗಳಿದ್ದು, ರಸ್ತೆಯಲ್ಲಿ ವಾಹನ ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸು ತ್ತಿರುವದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ವಾಹನಗಳನ್ನು ವ್ಯವಸ್ಥಿತವಾಗಿ ನಿಲ್ಲಿಸುವಂತೆ ಎಚ್ಚರಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಜಿಲ್ಲಾಧಿಕಾರಿ ಅವರೇ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಎಕರೆ ಜಾಗವನ್ನು ಮೀಸಲಿರಿಸಿದ್ದು, ಆ ಜಾಗವನ್ನು ಕಾನೂನು ವ್ಯಾಪ್ತಿಯಲ್ಲಿ ಸರಿಪಡಿಸಿ ಕೊಳ್ಳುವಂತೆಯೂ ತೀರ್ಮಾನಿಸ ಲಾಯಿತು. ಪಂಚಾಯಿತಿಯಲ್ಲಿ ಈ ಹಿಂದೆ ಲೆಕ್ಕ ಸಹಾಯಕಿಯಾಗಿದ್ದ ಹರಿಣಿ ಅವರಿಗೆ ಕಾರ್ಯದರ್ಶಿ ತಮ್ಮಯ್ಯಾಚಾರ್ ಟ್ರ್ಯಾಕ್ಟರ್ ಚಾಲಕ ನಾಗೇಶ್ ಮಾನಸಿಕ ಹಿಂಸೆ ನೀಡುತ್ತಿದ್ದುದಾಗಿ ಕಳೆದ ವರ್ಷ ಡಿಸೆಂಬರ್‍ನಲ್ಲಿ ದೂರು ಅರ್ಜಿಯನ್ನು ಸಲ್ಲಿಸಲಾಗಿತ್ತು. ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟ್ರ್ಯಾಕ್ಟರ್ ಚಾಲಕನನ್ನು ಬದಲಾಯಿಸಿ ಸೂಕ್ತ ನಿರ್ದೇಶನ ನೀಡುವಂತೆ ಪಿಡಿಓ ಅವರಿಗೆ ಆದೇಶಿಸಿದ್ದರು. ಆದರೆ ಚಾಲಕ ನಾಗೇಶ್ ಒಳ್ಳೆಯ ಕೆಲಸಗಾರರಾಗಿದ್ದು, ವೈಯಕ್ತಿಕ ಆರೋಪಕ್ಕೂ ಪಂಚಾಯಿತಿಗೂ ಸಂಬಂಧವಿಲ್ಲ ಎಂದು ಸದಸ್ಯರೆಲ್ಲ ಒಮ್ಮತದಿಂದ ತೀರ್ಮಾನಿಸಿ ಆ ವಿಚಾರ ಕೈ ಬಿಡುವಂತೆ ನಿರ್ಣಯಿಸ ಲಾಯಿತು. ಪ್ರಸಕ್ತ ಸಾಲಿನ ಪಂಚಾಯಿತಿಯ ವಿವಿಧ ಕಾಮಗಾರಿ ಗಳಿಗೆ ಸಭೆಯಲ್ಲಿ ಅನುಮೋದನೆ ಮಾಡಲಾಯಿತು. ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಸೌಭಾಗ್ಯ ಲಕ್ಷ್ಮಿ, ಎಸ್.ಎ. ಆದಿತ್ಯ, ಸರ್ದಾರ್, ಉಷಾ, ರಜನಿ, ಹೇಮಾವತಿ, ಎಸ್.ಎನ್. ಪಾಂಡು, ಹರೀಶ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್, ಕಾರ್ಯದರ್ಶಿ ತಮ್ಮಯ್ಯಾಚಾರ್, ಲೆಕ್ಕ ಸಹಾಯಕ ಅಧಿಕಾರಿ ಶರಣಪ್ಪ, ಸಿಬ್ಬಂದಿ ವಸಂತ್, ಫೌಜಿಯಾ ಉಪಸ್ಥಿತರಿದ್ದರು.