ಮೂರ್ನಾಡು: ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾನಿಗಳಾದ ಕಟ್ರತನ ಬೆಳ್ಯಪ್ಪ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸರದ ಪ್ರಮುಖ್ಯತೆಯನ್ನು ತಿಳಿಸಿ ಅದರ ಉಳಿವಿಗಾಗಿ ನಾವುಗಳು ನಿರ್ವಹಿಸಬೇಕಾದ ಕರ್ತವ್ಯಗಳನ್ನು ತಿಳಿಸಿದರು.
ಶಾಲಾ ವಿಜ್ಞಾನ ಶಿಕ್ಷಕಿ ಪ್ರಣವಿ ದಿನದ ಮಹತ್ವ ಕುರಿತು ವಿವರಣೆ ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕಿ ದೇಚಮ್ಮ, ಸಿಸಿಲಿಯಾ ಡಿಸೋಜ, ವಿಜಯಲಕ್ಷ್ಮಿ, ಉಷಾ, ದೈಹಿಕ ಶಿಕ್ಷಕ ತಮ್ಮಯ್ಯ, ತೋಟಗಾರಿಕೆ ಶಿಕ್ಷಕ ಅರ್ಜುನ್ ನಾಯಕ್ ಹಾಜರಿದ್ದರು.ಸುಂಟಿಕೊಪ್ಪ: ನಿಸರ್ಗದ ದೃಷ್ಠಿಯಿಂದ ಅತ್ಯಂತ ಸೂಕ್ಷ್ಮ ಹಾಗೂ ಶ್ರೀಮಂತ ತಾಣಗಳಾದ ಜೀವಿ ವೈವಿಧ್ಯವು ಜೀವ ಸಂಪತ್ತಿನ ಖಜಾನೆಗಳು. ಅವುಗಳನ್ನು ಜೋಪಾನವಾಗಿ ಕಾಪಾಡಬೇಕಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕರೂ ಆದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್‍ನ ‘ಪರಿಸರ ಮಿತ್ರ’ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಹೇಳಿದರು.
ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಇಕೋ-ಕ್ಲಬ್‍ಗಳ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಸಪ್ತಾಹ ಅಂಗವಾಗಿ ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ‘ಜೀವಿ-ವೈವಿಧ್ಯ ಸಂರಕ್ಷಣೆ’ಯ ಮಹತ್ವ ಕುರಿತು ಮಾತನಾಡಿದ ಅವರು, ಇತ್ತೀಚಿನ ವರ್ಷಗಳಿಂದ ಪ್ರಕೃತಿಯ ಮೇಲೆ ಮನುಷ್ಯನಿಂದ ನಡೆಯುತ್ತಿರುವ ದಬ್ಬಾಳಿಕೆಯಿಂದ ಜೀವಿ ವೈವಿಧ್ಯ ಸಂರಕ್ಷಣೆಗೆ ತೊಂದರೆಯಾಗುತ್ತಿದೆ ಎಂದರು.
ಸ್ಪರ್ಧೆಗಳಲ್ಲಿ ವಿಜೇತಗೊಂಡವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎಂ. ಸುಮಲತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪುಷ್ಪಾವತಿ ಬಹುಮಾನ ವಿತರಿಸಿದರು. ಗ್ರಾ.ಪಂ. ಪಿಡಿಓ ವಿ.ಯು. ಅಸ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಕೆ. ಲೀಲಾವತಿ, ಇಕೋ ಕ್ಲಬ್‍ನ ಉಸ್ತುವಾರಿ ಶಿಕ್ಷಕಿಯರಾದ ಬಿಂದು ಕುಮಾರಿ, ಪಿ.ಆರ್. ದಿವ್ಯ ಮಾತನಾಡಿದರು.
ನಂತರ ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಹಸಿರೇ ಉಸಿರು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿ ಜನರ ಗಮನ ಸೆಳೆದರು.