ಮಡಿಕೇರಿ, ಜೂ. 16: ಮುಂಗಾರಿನ ಈ ಸಮಯದಲ್ಲಿ ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಫಾರಂಗಳಲ್ಲಿ ಬೆಳೆಸಿರುವ ವಿವಿಧ ಗಿಡಗಳನ್ನು ರೈತರಿಗೆ ವಿತರಿಸಲಾಗುತ್ತದೆ. ಈ ಎರಡು ಇಲಾಖೆಗಳು ವಿವಿಧ ತಳಿಯ ಗಿಡಗಳನ್ನು ಬೆಳೆದಿದ್ದು, ಈ ಗಿಡಗಳು ಈಗಾಗಲೇ ವಿತರಣೆಗೆ ಸಿದ್ಧವಾಗಿವೆ. ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವೀರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಕದನೂರು ಸಸ್ಯ ಕ್ಷೇತ್ರ ಸೋಮವಾರಪೇಟೆ ತಾಲೂಕಿನ ಹುದುಗೂರು ಸಸ್ಯ ಕ್ಷೇತ್ರ ಹಾಗೂ ಮಡಿಕೇರಿ ತಾಲೂಕಿನ ಹೊದ್ದೂರು - ವಾಟೆಕಾಡು ಸಸ್ಯಕ್ಷೇತ್ರವನ್ನು ಹೊಂದಿದೆ.ತೋಟಗಾರಿಕಾ ಇಲಾಖೆ ರಾಜ್ಯ ವಲಯ ಹಾಗೂ ಜಿಲ್ಲಾ ಪಂಚಾಯತ್ ವಲಯಕ್ಕೆ ಸಂಬಂಧಿಸಿದಂತೆ ಹಲವು ಫಾರಂಗಳನ್ನು ಹೊಂದಿದೆ. ರಾಜ್ಯ ವಲಯದಲ್ಲಿ ಹಾರಂಗಿ, ಮಾದಾಪುರ, ಪೊನ್ನಂಪೇಟೆ ಹಾಗೂ ಮದಲಾಪುರ ಫಾರಂ ಒಳಗೊಂಡಿವೆ. ಜಿ.ಪಂ. ವಲಯದಲ್ಲಿ ನಾಪೋಕ್ಲು, ಅರುವತೊಕ್ಕಲು, ಬಳಗುಂದ ಹಾಗೂ ಕೂಡಿಗೆ ಫಾರಂಗಳು ಒಳಪಡಲಿವೆ.

ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸಿಲ್ವರ್, ಸಂಪಿಗೆ, ಮಹಾಗನಿ, ಹೆಬ್ಬೇವು, ಕಹಿಬೇವು, ಬಸವನಪಾದ, ಮಾವು, ಹಲವು, ಸೀತಾಫಲದಂತಹ ಗಿಡಗಳು ಬೆಳೆಯಲ್ಪಟ್ಟರೆ, ತೋಟಗಾರಿಕಾ ಇಲಾಖೆ ವತಿಯಿಂದ ಕರಿಮೆಣಸು ಹಾಗೂ ಕಿತ್ತಳೆ ಸಸಿಗಳನ್ನು ಬೆಳೆಯಲಾಗುತ್ತದೆ. ಈ ಗಿಡಗಳನ್ನು ಸರಕಾರದ ನಿಯಮಾವಳಿ ಯಂತೆ ನಿರ್ದಿಷ್ಟ ದರ ಹಾಗೂ ಯೋಜನೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವದು.

ಸಾಮಾಜಿಕ ಅರಣ್ಯ ಇಲಾಖೆ

ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ 2018ನೇ ಸಾಲಿನಲ್ಲಿ ಸಾರ್ವಜನಿಕರಿಗೆ ಗಿಡ ವಿತರಿಸಲು ಸಿದ್ಧತೆ ನಡೆಸಿದ್ದು, ಜೂನ್ 18 ರಿಂದ ಈ ಕಾರ್ಯ ಪ್ರಾರಂಭಗೊಳ್ಳಲಿದೆ. ಮೂರು ಸಸ್ಯ ಕ್ಷೇತ್ರಗಳಲ್ಲಿ ಸೇರಿ 5ಘಿ8 ಅಳತೆಯ 5.25 ಲಕ್ಷ ಸಸಿಗಳು ಹಾಗೂ 6ಘಿ9 ಅಳತೆಯ 3.25 ಲಕ್ಷ ಸಸಿಗಳನ್ನು ವಿತರಿಸ ಲಾಗುವದು. ಇದರಲ್ಲಿ ಹೆಚ್ಚಿನ ಪಾಲು ಸಿಲ್ವರ್ ಗಿಡಗಳಾಗಿವೆ.

ರೈತರು ತಮ್ಮ ಆರ್‍ಟಿಸಿ, ಆಧಾರ್‍ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕಿದೆಯಲ್ಲದೆ, ಜಿ.ಪಂ. ಸದಸ್ಯರು ಹಾಗೂ ಶಾಸಕರ ಶಿಫಾರಸ್ಸು ಪತ್ರವಾದರೆ ಅವರ ನೇರ ಸಹಿ ಹೊಂದಿರುವ ಪತ್ರವನ್ನು ತಂದು ಗಿಡಗಳನ್ನು ಪಡೆಯಬಹುದಾಗಿದೆ. ಶಿಫಾರಸ್ಸು ಜೆರಾಕ್ಸ್ ಪ್ರತಿಯಲ್ಲಿದ್ದರೆ ಅದನ್ನು ಪರಿಗಣಿಸಲಾಗುವದಿಲ್ಲ ಎನ್ನಲಾಗಿದೆ. ಏಕೆಂದರೆ ಇದರಲ್ಲಿ ಎಲ್ಲಾ ರೈತರಿಗೂ ಅವಕಾಶವಾಗಬೇಕು ಎಂಬ ಉದ್ದೇಶವಿರುವದಾಗಿ ಹೇಳಲಾಗಿದೆ.

(ಮೊದಲ ಪುಟದಿಂದ) ತೋಟಗಾರಿಕಾ ಇಲಾಖೆಯು ರಾಜ್ಯವಲಯ ಹಾಗೂ ಜಿ.ಪಂ. ವಲಯಗಳಲ್ಲಿ ಸುಮಾರು 9 ಲಕ್ಷ ಕರಿಮೆಣಸು ಹಾಗೂ 35 ಸಾವಿರ ಕಿತ್ತಳೆ ಗಿಡಗಳನ್ನು ಬೆಳೆಯಲಾಗಿದ್ದು, ಈ ಗಿಡಗಳ ವಿತರಣೆ ಬಹುತೇಕ ಜುಲೈ ಮೊದಲ ವಾರದಿಂದ ಪ್ರಾರಂಭಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳೊಂದಿಗೆ ಚರ್ಚೆ ನಡೆಸಿದ್ದು, ಜಿ.ಪಂ. ಸಭೆಯ ಬಳಿಕ ಇದು ಕಾರ್ಯಗತವಾಗುವ ಸಾಧ್ಯತೆಯಿದೆ. ರಾಜ್ಯವಲಯಕ್ಕೆ ಸಂಬಂಧಿಸಿದ ನರ್ಸರಿಗಳಾದ ಹಾರಂಗಿ, ಮಾದಾಪುರ, ಪೊನ್ನಂಪೇಟೆ ಹಾಗೂ ಮದಲಾಪುರದಲ್ಲಿ ಸೇರಿ 4.75 ಲಕ್ಷ ಕರಿಮೆಣಸು ಹಾಗೂ 5 ಸಾವಿರದಷ್ಟು ಕಿತ್ತಳೆ ಗಿಡಗಳನ್ನು ರೈತರಿಗೆ ವಿತರಿಸಲಾಗುವದು.

ಉಳಿದ ಗಿಡಗಳು ಜಿ.ಪಂ. ವಲಯದ ನರ್ಸರಿ ಮೂಲಕ ವಿತರಣೆಗೊಳ್ಳಲಿರುವದಾಗಿ ‘ಶಕ್ತಿ’ಗೆ ತಿಳಿದು ಬಂದಿದೆ. ಇಲ್ಲಿಯೂ ಇಲಾಖಾ ನಿಬಂಧನೆಗಳು ಅನ್ವಯವಾಗಲಿದ್ದು, ಇದರಂತೆ ಅರ್ಹ ಫಲಾನುಭವಿಗಳು ಗಿಡಗಳನ್ನು ಪಡೆಯಬಹುದಾಗಿದೆ. ಈ ಇಲಾಖೆಗಳು ವಿವಿಧ ಯೋಜನೆಗಳಂತೆ ವರ್ಷಂಪ್ರತಿ ಗಿಡಗಳನ್ನು ಬೆಳೆದು ರೈತರಿಗೆ ವಿತರಿಸುವದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಕುರಿತು ಸೂಕ್ತ ಮಾಹಿತಿಗಳು ಜನರಿಗೆ ತಿಳಿಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿರುವದನ್ನು ಇಲ್ಲಿ ಸ್ಮರಿಸಬಹುದು.