ಕೂಡಿಗೆ, ಜೂ. 17: ಸಣ್ಣ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿ ಬಹಳ ವರ್ಷಗಳ ನಂತರ ಹಿಂದಿನ ಪೈಪ್‍ಲೈನ್ ದುರಸ್ತಿ ಕಾರ್ಯ ನಡೆದು ಬಹುತೇಕ ಒಡೆದು ಹೋಗಿರುವ ಪೈಪ್‍ಗಳನ್ನು ತೆಗೆದು ಹಾಕಿ ನೂತನ ಪೈಪ್‍ಗಳ ಅಳವಡಿಕೆ ಕಾಮಗಾರಿ ಕೂಡ್ಲೂರಿನಲ್ಲಿ ನಡೆಸಲಾಗುತ್ತಿದೆ.
ಈ ಕಾಮಗಾರಿಗೆ ಸುಮಾರು 50 ಲಕ್ಷ ರೂಪಾಯಿಗಳ ಕ್ರಿಯಾ ಯೋಜನೆಯನ್ನು ರೂಪಿಸಿದ್ದು, ಕಾವೇರಿ ನದಿಯ ಅಂಚಿನಲ್ಲಿ ಜಾಕ್ವೆಲ್ ನಿರ್ಮಿಸಿ ಮೂರು ಮೋಟಾರ್‍ಗಳನ್ನು ಅಳವಡಿಸಿ ಪೈಪ್‍ಗಳ ಮೂಲಕ ನಾಲೆಗೆ, ನೆಲಮಟ್ಟದಲ್ಲಿ ನಿರ್ಮಿಸಿರುವ ಟ್ಯಾಂಕ್‍ಗಳಿಗೆ ನೀರನ್ನು ಪಂಪ್ ಮಾಡಿ, ಉಪ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ.
40 ವರ್ಷಗಳ ಹಿಂದೆ ಪ್ರಾರಂಭವಾದ ಕೂಡುಮಂಗಳೂರು ಏತ ನೀರಾವರಿ ಯೋಜನೆ ಅಂದಿನ ಕಾಲಕ್ಕನುಗುಣವಾಗಿ ಸುಮಾರು 125 ಎಕರೆ ಕೃಷಿ ಬೆಳೆಗೆ ಕಾವೇರಿ ನದಿಯಿಂದ ನೀರು ಸರಬರಾಜು ಆಗುತ್ತಿತ್ತು. ದಿನ ಕಳೆದಂತೆ ಆ ವ್ಯಾಪ್ತಿಯಲ್ಲಿ ವಸತಿ ಪ್ರದೇಶದ ಕಾರಣದಿಂದಾಗಿ ಸುಮಾರು 25 ಎಕರೆ ಕೃಷಿ ಭೂಮಿ ಕಡಿಮೆಯಾಗಿ 100 ಎಕರೆಯಷ್ಟು ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. ನದಿ ಭಾಗದಿಂದ 340 ಮೀಟರ್ ಪೈಪ್‍ಲೈನ್ ಅಳವಡಿಸುವ ಕಾರ್ಯ ಕಳೆದ ಮೇ 20 ರಿಂದ ಪ್ರಾರಂಭವಾಗಿ ಮುಗಿಯುವ ಹಂತದಲ್ಲಿದೆ.
ನಾಲೆಯು ಕೆಲವು ಕಡೆ ಕಾಂಕ್ರಿಟ್‍ನಿಂದ ನಿರ್ಮಾಣವಾಗಿದೆ. ಮತ್ತೆ ಕೆಲವು ಕಡೆ ಕಾಂಕ್ರಿಟ್ ಕಾಮಗಾರಿ ನಡೆಯಬೇಕಿದೆ ಎಂದು ಮಡಿಕೇರಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಡಿ. ಸುರೇಶ್ ಮಾಹಿತಿ ನೀಡಿದ್ದಾರೆ.