ಕುಶಾಲನಗರ, ಜೂ. 17: ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬೆಳೆಸಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್‍ಸಿಂಹ ಕರೆ ನೀಡಿದ್ದಾರೆ.
ಕುಶಾಲನಗರ ಸಮೀಪ ಬೈಲುಕುಪ್ಪೆಯ ಕಗ್ಯು ನಳಂದ ಬೌದ್ಧ ವಿಶ್ವವಿದ್ಯಾಲಯದಲ್ಲಿ 17ನೇ ಕರ್ಮಪ ಅವರ 33ನೇ ಜನ್ಮದಿನಾಚರಣೆ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಕೃತಿಯನ್ನು ಪೂಜಿಸುವ ಸಂಸ್ಕಾರವನ್ನು ಪ್ರತಿಯೊಬ್ಬರೂ ಹೊಂದಬೇಕಾಗಿದೆ ಎಂದ ಪ್ರತಾಪ್ ಸಿಂಹ, ಮರ, ಗಿಡ, ನದಿಯಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದ್ದಾಗಿದೆ ಎಂದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಳಂದ ಸಂಸ್ಥೆಯ ಆವರಣದಲ್ಲಿ ಹಾಗೂ ಕಾವೇರಿ ನದಿ ಜಲಮೂಲದ ವ್ಯಾಪ್ತಿಯಲ್ಲಿ ನೂರಾರು ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಗ್ಯು ನಳಂದ ಸಂಸ್ಥೆಯ ಮುಖ್ಯಸ್ಥ ಕರ್ಮಪ ಗುರುಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್, ಜಲತಜ್ಞ ಪ್ರೊ. ರವಿಕುಮಾರ್, ಜಿಪಂ ಸದಸ್ಯ ರಾಜೇಂದ್ರ, ರೆ. ಫಾ.ಸಿ. ರಾಯಪ್ಪ, ಎಸ್‍ಎಲ್‍ಎನ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥನ್, ಎ.ಜೆ. ಬಸವೇಗೌಡ, ಟಿಬೇಟಿಯನ್ ಪ್ರತಿನಿಧಿಗಳು ಮತ್ತು ಬೌದ್ದ ಧರ್ಮಗುರುಗಳು ಉಪಸ್ಥಿತರಿದ್ದರು.