ಗೋಣಿಕೊಪ್ಪಲು, ಜೂ. 17: ಕೊಟ್ಟಗೇರಿ ಗ್ರಾಮಸ್ಥರಿಗೆ ಬಾಳೆಲೆಯಿಂದ ಸುಮಾರು 2.6 ಕಿ.ಮೀ.ಅಂತರದಲ್ಲಿ ಸಂಪರ್ಕ ಕಲ್ಪಿಸುವ ದೋಣಿಕಡವು ರಸ್ತೆ ಲಕ್ಷ್ಮಣ ತೀರ್ಥ ಪ್ರವಾಹದಿಂದಾಗಿ ಕುಸಿತಗೊಂಡು ಒಂದು ವಾರವಾಗಿದ್ದರೂ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ಥಿ ಕಾರ್ಯಕೈಗೊಳ್ಳದ ಕುರಿತು ಈ ಭಾಗದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದ್ದಾರೆ. ದೋಣಿಕಡವು ರಸ್ತೆ ಮಾರ್ಗವಾಗಿ ಸುಮಾರು 5 ಶಾಲಾ ಬಸ್‍ಗಳು, ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿದ್ದು ಇದೀಗ ಕಾನೂರು ನಿಟ್ಟೂರು ಮಾರ್ಗ ಸುಮಾರು 10 ಕಿ.ಮೀ. ಸುತ್ತು ಬಳಸಿ ಬಾಳೆಲೆಯನ್ನು ಸಂಪರ್ಕಿಸುವಂತಾಗಿದೆ ಎಂದು ಆರೋಪ ವ್ಯಕ್ತವಾಗಿದೆ.

ಇಂದು ದೋಣಿಕಡವು ರಸ್ತೆಯ ನೈಜ ಪರಿಸ್ಥಿತಿಯನ್ನು ‘ಶಕ್ತಿ’ ಪ್ರತಿನಿಧಿಗೆ ಪರಿಚಯಿಸಿದ ಬಾಳೆಲೆ, ಕೊಟ್ಟಗೇರಿ ಗ್ರಾಮಸ್ಥರು ಕಳೆದ ಬಾರಿಯ ಮಳೆಗೆ ಇಲ್ಲಿನ ಸಂಪರ್ಕ ಸೇತುವೆಯ ಒಂದು ಬದಿಯಲ್ಲಿ ಭಾರೀ ಭೂಕುಸಿತ ಉಂಟಾಗಿತ್ತು. ಅದೇ ಸಂದರ್ಭ ಗುತ್ತಿಗೆದಾರ ಅಣ್ಣಪ್ಪ ಎಂಬವರ ಮೂಲಕ ಕುಸಿತದ ಜಾಗದಲ್ಲಿ ಮರಳು ತುಂಬಿದ ಚೀಲವನ್ನು ಅಟ್ಟಿ ತಾತ್ಕಾಲಿಕ ಉಪಶಮನ ನೀಡಲಾಗಿತ್ತು. ಬಳಿಕ ತಡೆಗೋಡೆ ನಿರ್ಮಾಣ ಅಗತ್ಯ ವಿದ್ದಾಗ್ಯೂ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ವರ್ಷಪೂರ್ತಿ ನೆನೆಗುದಿಗೆ ಬಿದ್ದಿತ್ತು.

ಇದೀಗ ಲಕ್ಷ್ಮಣ ತೀರ್ಥ ನದಿಪಾತ್ರದ ಒಂದು ಬದಿಯಲ್ಲಿ ಸುಮಾರು 40 ಅಡಿವರೆಗೆ ತಡೆಗೋಡೆ ನಿರ್ಮಾಣ ಮಾಡಬೇಕಾದ ಅಗತ್ಯ ಕಂಡು ಬಂದಿದೆ. ಇದೀಗ ಹೊಂಡ ಬಿದ್ದ ರಸ್ತೆಗೆ ಕಲ್ಲು ಮಣ್ಣು ತುಂಬಿ ತಾತ್ಕಾಲಿಕ ವ್ಯವಸ್ಥೆ ಮಾಡಲು ಸಾಧ್ಯವಿದ್ದರೂ ಇತ್ತ ಅಧಿಕಾರಿಗಳು ಸುಳಿದಿಲ್ಲ ಎಂದು ಆರೋಪಿಸಿದ್ದಾರೆ.

ಲಕ್ಷ್ಮಣ ತೀರ್ಥ ಪ್ರವಾಹ ಇಳಿಮುಖವಾಗಿದ್ದು, ತುರ್ತು ಕಾಮಗಾರಿ ಮಾಡಬಹುದಾಗಿದೆ. ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಹಾಗೂ ಎಪಿಎಂಸಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ ತಿಳಿಸಿದ್ದಾರೆ.

ತಿತಿಮತಿ ರಾಷ್ಟ್ರೀಯ ಹೆದ್ದಾರಿ ಕುಸಿತದ ವೀಕ್ಷಣೆಗೆ ಬಂದಿದ್ದ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವಿನಯ್‍ಕುಮಾರ್, ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಕಿರಿಯ ಅಭಿಯಂತರ ನವೀನ್ ಅವರು ಸಾರ್ವಜನಿಕರ ಒತ್ತಾಯದ ಮೇರೆ ದೋಣಿಕಡವು ರಸ್ತೆ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ದುರಸ್ತಿ ಸಾಧ್ಯ ಎಂದು ಅಂದು ಉಪಸ್ಥಿತರಿದ್ದ ಅಳಮೇಂಗಡ ಬೋಸ್‍ಮಂದಣ್ಣ, ಸತೀಶ್ ದೇವಯ್ಯ, ಸುಜಾ ಪೂಣಚ್ಚ, ಕಾಡೇಮಾಡ ಶರೀನ್, ಮಾಚಂಗಡ ಉಮೇಶ್ ಮುತ್ತಣ್ಣ ಅವರಲ್ಲಿ ಮಾಹಿತಿ ನೀಡಿದ್ದರು.

ಸತೀಶ್ ದೇವಯ್ಯ ಅವರ ಪ್ರಕಾರ ಕಳೆದ ಬಾರಿ ಭೂಕುಸಿತ ಸಂದರ್ಭ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಿದ್ದ ಗುತ್ತಿಗೆದಾರ ಅಣ್ಣಪ್ಪ ಅವರಿಗೆ ಇನ್ನೂ ಬಿಲ್ ಪಾವತಿಯನ್ನು ಪೆÇನ್ನಂಪೇಟೆ ಇಂಜಿನಿಯರಿಂಗ್ ವಿಭಾಗದಿಂದ ಮಾಡಲಾಗಿಲ್ಲ. ಈ ಹಿನ್ನೆಲೆ ಯಾವದೇ ಗುತ್ತಿಗೆದಾರರು ತಾತ್ಕಾಲಿಕ ಕಾಮಗಾರಿಗೆ ಇಲ್ಲಿಗೆ ಬರಲು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.

ಮುಂದಿನ 5 ದಿನದ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೆÇನ್ನಂಪೇಟೆಯಲ್ಲಿರುವ ಸಹಾಯಕ ಕಾರ್ಯಪಾಲಕ ಅಭಿಯಂತರರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಹೋದಲ್ಲಿ ಯಾವದೇ ಮಳೆ ಇದ್ದರೂ ಪೆÇನ್ನಂಪೇಟೆ ಜಿ.ಪಂ. ಇಂಜಿನಿಯರಿಂಗ್ ಕಚೇರಿ ಮುಂದೆ ಬಾಳೆಲೆ, ಕೊಟ್ಟಗೇರಿ, ನಿಟ್ಟೂರು ಗ್ರಾಮಸ್ಥರು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

ಲಕ್ಷ್ಮಣ ತೀರ್ಥ ಪ್ರವಾಹದಿಂದಾಗಿ ಇನ್ನು ಮುಂದೆ ಮತ್ತಷ್ಟು ಭೂ ಕುಸಿತ ಸಾಧ್ಯತೆ ಇದ್ದು ದೋಣಿಕಡವು ಸಂಪರ್ಕ ಸೇತುವೆ ಹಾಗೂ ಕಾಂಕ್ರೀಟ್ ರಸ್ತೆಗೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇರುವದಾಗಿ ಆತಂಕ ವ್ಯಕ್ತವಾಗಿದೆ. ಎರಡು ಬದಿಯಲ್ಲಿ ಉತ್ತಮ ತಡೆಗೋಡೆ ನಿರ್ಮಾಣ ಮಾಡದ ಹೊರತು ಭವಿಷ್ಯದಲ್ಲಿ ಮತ್ತಷ್ಟು ನಷ್ಟವಾಗಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇಂದು ಅರಮಣಮಾಡ ಸತೀಶ್ ದೇವಯ್ಯ, ಮಾಚಂಗಡ ಸುಜಾಪೂಣಚ್ಚ ಅವರೊಂದಿಗೆ ಅಳಮೇಂಗಡ ಧಿಲ್ಲು, ಸತೀಶ್, ಮಾಪಂಗಡ ಮುದ್ದಯ್ಯ, ಮಚ್ಚಾಮಾಡ ಅಯ್ಯಪ್ಪ, ಅಳಮೇಂಗಡ ದರ್ಶನ್, ಮಾಚಂಗಡ ಉಮೇಶ್ ಮುತ್ತಣ್ಣ, ಮಾದಕಮಾಡ ನರೇಂದ್ರ, ಅರಮಣಮಾಡ ದಿನು, ಒಕ್ಕಲಿಗರ ಮೋಹನ್ ಮತ್ತು ಪ್ರಕಾಶ್ ಉಪಸ್ಥಿತರಿದ್ದರು.

ವರದಿ: ಟಿ.ಎಲ್. ಶ್ರೀನಿವಾಸ್