ಚೆಟ್ಟಳ್ಳಿ, ಜೂ. 17: ವೀರಾಜಪೇಟೆ ಸಮೀಪದ ಬೇತ್ರಿ ಸೇತುವೆಯಲ್ಲಿ ಭದ್ರತೆಯ ಕೊರತೆ ಎದ್ದು ಕಾಣುತ್ತಿದೆ. ಕಳೆದೆರಡು ವಾರಗಳಿಂದ ಪ್ರಾರಂಭಿಕ ಮಳೆಯೇ ರಭಸವಾಗಿ ಸುರಿಯುತ್ತಿರುವದರ ಫಲವಾಗಿ ಕೊಡಗಿನ ಹಲವೆಡೆ ಅಪಾರ ನಷ್ಟ-ಕಷ್ಟಗಳು ಸಂಭವಿಸಿದೆ. ಸೇತುವೆಗಳಲ್ಲೆಲ್ಲ ನೀರಿನ ಮಟ್ಟ ದಿನೇ ದಿನೇ ಹೆಚ್ಚತೊಡಗಿ ಅಪಾಯದ ಮಟ್ಟ ತಲಪುವಂತಾಗಿದೆ.

ಅದೇ ರೀತಿ ಕಳೆದ ಮೂರು ವರ್ಷಗಳಿಂದ ತುಂಬದ ಮೂರ್ನಾಡು ಸಮೀಪದ ಬೇತ್ರಿ ಸೇತುವೆಯಲ್ಲಿಯೂ ಕೂಡ ಈ ವರ್ಷದ ಮಳೆಯ ರಭಸಕ್ಕೆ ಸೇತುವೆಯ ಮಟ್ಟದವರೆಗೂ ನೀರು ಏರತೊಡಗುತ್ತಿರುವದು ಕಂಡು ಬರುತ್ತಿದೆ. 2017 ರ ಡಿಸೆಂಬರ್‍ನಲ್ಲಿ ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದ ಪ್ರವಾಸಿಗರ ಕಾರೊಂದು ಸೇತುವೆಯ ಕೆಳಗೆÉ ಉರುಳಿ ಅಪಾಯದಿಂದ ಪಾರಾದ ಘಟನೆ ನಡೆದಿತ್ತು. ಹಿಂದೆ ಮಡಿಕೇರಿಯಿಂದ ವೀರಾಜಪೇಟೆಗೆ ತೆರಳುತ್ತಿದ್ದ ಜಿಲ್ಲಾಪಂಚಾಯಿತಿಗೆ ಸೇರಿದ ಅಂಬಾಸಿಡರ್ ಕಾರೊಂದು ಹೊಳೆಗೆ ಹಾಕಲಾದ ಕಬ್ಬಿಣದ ಸಲಾಖೆಯನ್ನು ಬೇಧಿಸಿ ಸುಮಾರು 40 ಅಡಿ ಆಳದ ಹೊಳೆಗೆ ಬಿದ್ದಿತ್ತು. ನೀರು ಕಡಿಮೆ ಇದ್ದ ಪರಿಣಾಮ ಕಾರಿನಲ್ಲಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ನಡೆದಿದೆ. ಹೀಗೆ ಬೇತ್ರಿ ಸೇತುವೆಯ ಬಳಿ ಹಲವು ಅಪಘಾತಗಳಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಹೊಳೆಯ ಬದಿಗಳಲ್ಲಿ ನಿರ್ಮಿಸಿದಂತ ಮನೆಗಳ ಸಮೀಪ ನೀರು ಬಂದಿದ್ದು, ಮತ್ತೆ ಹೆಚ್ಚಿನ ಮಳೆಯಾದರೆ ಮನೆಗಳಿಗೆ ಹಾನಿಯಾಗುವ ಸಂಭವವಿದೆ. ರಸ್ತೆಗಳೆಲ್ಲ ನೀರು ತುಂಬಿ ರಸ್ತೆ ಸಂಪರ್ಕವೇ ಕಡಿದುಹೋಗಿದೆ. ಹೊಳೆಯ ಮಧ್ಯೆ ಹಾದುಹೋದ ವಿದ್ಯುತ್ ಸಂಪರ್ಕದ ಕಂಬಗಳು ಹೊಳೆಯೊಳಗೆ ಬಿದ್ದು ವಿದ್ಯುತ್ ಇಲಾಖೆಯವರು ಕÀಂಬಗಳನ್ನು ತಂತಿಗಳನ್ನು ಮೇಲೆತ್ತಲು ಹರಸಾಹಸ ಪಡುವ ದೃಶ್ಯ ಕಂಡುಬರುತ್ತಿದೆ.

ಸೇತುವೆಯ ಕಬ್ಬಿಣದ ಸಲಾಖೆಗಳನ್ನು ಸರಿಪಡಿಸಲಾಗಿದ್ದು, ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ವಾಹನಗಳು ಅತೀ ವೇಗವಾಗಿ ಬಂದು ಸೇತುವೆಯಲ್ಲಿ ಚಲಿಸುತ್ತಿರುವದರಿಂದ ಎರಡು ಬದಿಗಳಲ್ಲಿ ಹಂಪ್(ದಿಣ್ಣೆ)ಗಳನ್ನು ಹಾಕಿ ವಾಹನಗಳ ವೇಗವನ್ನು ನಿಯಂತ್ರಿಸಿ ಸೇತುವೆಯ ಮೇಲೆ ನಿಧಾÀನವಾಗಿ ಚಲಿಸುವಂತೆ ಮಾಡುವದು, ಅಪಾಯದ ಅರಿವಿನ ಬಗ್ಗೆ ಸೇತುವೆಯ ಬದಿಯಲ್ಲೆ ನಾಮಫಲಕವನ್ನು ಅಳವಡಿಸುವದು. ಸೇತುವೆಯ ಎರಡು ಕಡೆ ಕೆಂಪು ಬಣ್ಣದ ಪಟ್ಟಿಯನ್ನು ಅಳವಡಿಸುವದು, ಪ್ರವಾಸಿಗರು ಮಳೆಗಾಲದ ಸಮಯದಲ್ಲಿ ವಾಹನವನ್ನು ಸೇತುವೆಯ ಮೇಲೆ ನಿಲ್ಲಿಸದಂತೆ ಹಾಗೂ ಸೇತುವೆ ಬದಿಗಳಲ್ಲಿ ನಿಂತು ಫೋಟೋ ತೆಗೆಯುವದನ್ನು ನಿಷೇಧಿಸುವದರ ಮೂಲಕ ಯಾವದೇ ದುರ್ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕೆಂಬದು ಗ್ರಾಮಸ್ಥರ ಒತ್ತಾಯವಾಗಿದೆ.

- ಕರುಣ್ ಕಾಳಯ್ಯ, ಪಪ್ಪು ತಿಮ್ಮಯ್ಯ