ಮಡಿಕೇರಿ, ಜೂ. 17: ಕೇರಳ ರಾಜ್ಯದ ಹಿತ ಕಾಯುವದಕ್ಕಾಗಿ ಕೊಡಗು ಜಿಲ್ಲೆಯನ್ನು ನಿರಂತರವಾಗಿ ಬಲಿಪಶು ಮಾಡಲಾಗುತ್ತಿದ್ದು, ಹೈ-ಟೆನ್ಷನ್ ವಿದ್ಯುತ್ ಮಾರ್ಗದ ನಂತರ ಇದೀಗ ರೈಲು ಮಾರ್ಗದ ಮೂಲಕ ಕೊಡಗನ್ನು ಬಲಿ ಕೊಡುವ ಹುನ್ನಾರ ನಡೆಯುತ್ತಿದೆ ಎಂದು ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ಆರೋಪಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ದಕ್ಷಿಣ ಕೊಡಗಿನ ಪರಿಸರ ಹಾಗೂ ಮೂಲನಿವಾಸಿಗಳ ಭೂಮಿಗೆ ಹಾನಿ ಉಂಟು ಮಾಡುವ ರೈಲು ಮಾರ್ಗದ ಯೋಜನೆಗೆ ಅವಕಾಶ ಕಲ್ಪಿಸಿದರೆ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.