ಮಡಿಕೇರಿ, ಜೂ. 17: ವಿಶ್ವದ ನಾಲ್ಕನೇ ವರ್ಷದ ಯೋಗ ದಿನ ಅಂಗವಾಗಿ, ತಾ. 21 ರಂದು ಸಾಮೂಹಿಕ ಯೋಗ ಪ್ರದರ್ಶನ ಸಂಬಂಧ ಜಾಗೃತಿ ಮೂಡಿಸಲು ಇಂದು ನಗರದಲ್ಲಿ ವಿವಿಧ ಯೋಗ ಸಂಸ್ಥೆಗಳ ಆಶ್ರಯದಲ್ಲಿ ಆಯುಷ್ ಇಲಾಖೆ ನೇತೃತ್ವದೊಂದಿಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು.ನಗರದ ಗಾಂಧಿ ಮೈದಾನದಿಂದ ಆರಂಭಗೊಂಡ ಜಾಗೃತಿ ಜಾಥಾಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಮನುಷ್ಯ ಆರೋಗ್ಯವಂತನಾಗಿ ಬಾಳುವದಕ್ಕೆ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಯೋಗ ಸಾಧನೆ ಅವಶ್ಯಕವೆಂದು ಅಭಿಪ್ರಾಯಪಟ್ಟರು. ನಿತ್ಯ ಯೋಗ ಮಾಡುವದರಿಂದ ಶಾರೀರಿಕ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯದಿಂದ ಬಾಳಲು ಸಾಧ್ಯವೆಂದು ತಿಳಿ ಹೇಳಿದ ಅವರು, ತಾ. 21 ರಂದು ವಿಶ್ವಯೋಗ ದಿನದಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ರಾಮಚಂದ್ರ ಪ್ರಾಸ್ತಾವಿಕ ನುಡಿಯೊಂದಿಗೆ ಜಾಥಾದ ಉದ್ದೇಶ ವಿವರಿಸಿದರು. ಭಾರತೀಯ ವಿದ್ಯಾಭವನ ಯೋಗ ಕೇಂದ್ರದ ಕೆ.ಕೆ. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜಾಥಾವು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುವದರೊಂದಿಗೆ, ‘‘ಆರೋಗ್ಯಕ್ಕಾಗಿ ಯೋಗ - ಯೋಗದಿಂದ ಆರೋಗ್ಯ’’ ಸಂದೇಶದಿಂದ ಜಾಗೃತಿ ಮೂಡಿಸಲಾಯಿತು.
ಧರ್ಮಸ್ಥಳ ಯೋಗ ಸಂಸ್ಥೆ, ಆರ್ಟ್ ಆಫ್ ಲಿವಿಂಗ್, ಸ್ವಾಮಿ ವಿವೇಕಾನಂದ ಯೋಗ ಕೇಂದ್ರ, ಪತಂಜಲಿ ಸಂಸ್ಥೆ, ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಸಹಯೋಗ ನೀಡಿದರು. ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್, ಹಿರಿಯರಾದ ಡಾ. ಮನೋಹರ್ ಜಿ. ಪಾಟ್ಕರ್, ಡಾ. ಜಯಲಕ್ಷ್ಮಿ ಪಾಟ್ಕರ್, ವಕೀಲರುಗಳಾದ ಕೆ.ಡಬ್ಲ್ಯು. ಬೋಪಯ್ಯ, ರವಿ ಶಂಕರ್, ಕೆ.ಡಿ. ದಯಾನಂದ, ಜಯಚಂದ್ರ, ಗೀತಾ ಗಿರೀಶ್, ಡಾ. ಕಾವ್ಯ ಹೆಗಡೆ, ಅರುಣ್ ಕುಮಾರ್, ಡಾ. ಕುಲಕರ್ಣಿ ಸೇರಿದಂತೆ ಅನೇಕ ನಾಗರಿಕ ಪ್ರಮುಖರು ಪಾಲ್ಗೊಂಡಿದ್ದರು.
ಗಾಂಧಿ ಮೈದಾನದಿಂದ ಖಾಸಗಿ ಬಸ್ ನಿಲ್ದಾಣ, ಕಾಲೇಜು ರಸ್ತೆ, ಶಾಲಾ ರಸ್ತೆ ಮುಂತಾದೆಡೆಗಳಲ್ಲಿ ಭಿತ್ತಿ ಪತ್ರ, ಘೋಷಣೆಗಳೊಂದಿಗೆ ಸಾಗಿದ ಜಾಥಾವು
(ಮೊದಲ ಪುಟದಿಂದ) ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಮುಕ್ತಾಯಗೊಂಡಿತು. ಸಂಘಟಕರು ತಾ. 21ರ ಕಾರ್ಯಕ್ರಮದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಲಹೆ ನೀಡಿದರು.