ಸೋಮವಾರಪೇಟೆ, ಜೂ. 17: ಸಮೀಪದ ಬಜೆಗುಂಡಿ ಗ್ರಾಮದಲ್ಲಿರುವ ಶ್ರೀ ಶನೀಶ್ವರ ದೇವಾಲಯ ರೂ.40ಲಕ್ಷ ವೆಚ್ಚದಲ್ಲಿ ಜೀರ್ಣೋದ್ದಾರಗೊಳ್ಳುತ್ತಿದ್ದು, ಮುಂದಿನ 6 ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ.

ಕಳೆದ 40 ವರ್ಷಗಳ ಹಿಂದೆ ಸಣ್ಣ ಗುಡಿಯಾಗಿದ್ದ ದೇವಾಲಯ ನಂತರದ ದಿನಗಳಲ್ಲಿ ಅಲ್ಪಪ್ರಮಾಣ ದಲ್ಲಿ ಜೀರ್ಣೋದ್ದಾರ ಗೊಂಡಿದ್ದರೂ, ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು.

ಈ ದೇವಾಲಯಕ್ಕೆ ಜಿಲ್ಲೆ ಮಾತ್ರವಲ್ಲದೇ ದೂರದ ಪ್ರದೇಶಗಳಿಂದಲೂ ಭಕ್ತಾದಿಗಳು ಆಗಮಿಸುತ್ತಿದ್ದು, ದಿನದಿಂದ ದಿನಕ್ಕೆ ಕ್ಷೇತ್ರದ ಮಹಿಮೆ ವಿಸ್ತಾರಗೊಳ್ಳುತ್ತಿದೆ. ವಾರಕ್ಕೆರಡು ದಿನ ನಡೆಯುವ ವಿಶೇಷ ಪೂಜೆಯಲ್ಲಿ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸುತ್ತಾರೆ.

ಇದೀಗ 2012ರಿಂದ ದೇವಾಲಯವನ್ನು ಪರಿಪೂರ್ಣ ವಾಗಿ ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಪಟ್ಟಣ ಪಂಚಾಯಿತಿ ವಾಹನ ಚಾಲಕ ಜಿ.ಸಿ. ರಾಜಶೇಖರ್, ದೇವರಾಜು, ಸುಧಾಕರ್, ಸಣ್ಣಮ್ಮ, ರಾಜಮ್ಮ, ಪ್ರಶಾಂತ್, ಸತೀಶ್, ಗಿರಿ ವ್ಯಾಲಿ ಎಸ್ಟೇಟ್‍ನ ಸೋಮಪ್ಪ ಮತ್ತಿತರರು ಶ್ರಮಿಸುತ್ತಿದ್ದಾರೆ.

ಆರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಸಾಗಿರಲಿಲ್ಲ. ಆದರೆ ಕಳೆದ ಮೂರು ತಿಂಗಳಿನಿಂದ ದೇವಾಲಯ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ದೇವಾಲಯದ ಮುಂಭಾಗದಲ್ಲಿ ಭವ್ಯವಾದ ಗೋಪುರವನ್ನು ನಿರ್ಮಿಸುತ್ತಿದ್ದು, ಗೋಪುರದಲ್ಲಿ ಪ್ರಮುಖವಾಗಿ ಸೂರ್ಯದೇವರ ರಥ, ಗಣಪತಿ, ಸುಬ್ರಮಣ್ಯ, ಅಯ್ಯಪ್ಪ, 9 ಅಡಿ ಎತ್ತರದ ಪಂಚಮುಖಿ ಆಂಜನೇಯನ ವಿಗ್ರಹ, ಲಕ್ಷ್ಮಿ ಮತ್ತು ಸರಸ್ವತಿಯ ವಿಗ್ರಹಗಳನ್ನು ನಿರ್ಮಿಸಲಾಗುತ್ತಿದೆ. ಗೋಪುರ ಹಾಗೂ ವಿಗ್ರಹಗಳನ್ನು ಶಿಲ್ಪಿಗಳಾದ ಶಿವಮೊಗ್ಗದ ಸಂತೋಷ್, ಮಂಜು, ಶ್ರೀನಿವಾಸ್ ಸಹೋದರರು ನಿರ್ಮಿಸುತ್ತಿದ್ದಾರೆ.

ಈಗಾಗಲೇ ನಿರ್ಮಾಣಗೊಂಡಿ ರುವ ದೇವಾಲಯ ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್‍ರವರ ಶಾಸಕರ ನಿಧಿಯಿಂದ ರೂ. 50 ಸಾವಿರ, ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿಯವರು ಬಹಳಷ್ಟು ಶ್ರಮಿಸಿದ್ದಾರೆ. ಅಲ್ಲದೇ ಉದ್ಯಮಿಗಳಾದ ನಾಪಂಡ ಮುತ್ತಪ್ಪ, ಬಿಬಿಎಂಪಿ ಮಾಜಿ ಸದಸ್ಯ ಎಂ. ನಾಗರಾಜ್, ಹರಪಳ್ಳಿ ರವೀಂದ್ರ, ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ಮತ್ತಿತರರ ಕೊಡುಗೆ ಅಪಾರವಾಗಿದೆ.

ಆರಂಭದಲ್ಲಿ ಸಣ್ಣ ಗುಡಿಯಾಗಿದ್ದ ದೇವಾಲಯವನ್ನು ಐಗೂರಿನ ಗಿರಿವ್ಯಾಲಿ ಎಸ್ಟೇಟ್‍ನಲ್ಲಿ ರೈಟರ್ ಆಗಿದ್ದ ವಾಸು, ಮಹದೇವಪ್ಪ, ಬಜೆಗುಂಡಿ ಗ್ರಾಮಸ್ಥರು ಹಾಗೂ ಭಕ್ತರ ನೆರವಿನಿಂದ ದೇವಾಲಯಕ್ಕೆ ಅಗತ್ಯವಿದ್ದ ಮರಮುಟ್ಟುಗಳು, ಹಂಚು ಹಾಗೂ ಇನ್ನಿತರೆ ಸಾಮಗ್ರಿಗಳನ್ನು ಕ್ರೋಡೀಕರಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಸಾವಿರಾರು ಭಕ್ತರು ಈ ಕ್ಷೇತ್ರದಿಂದ ಉತ್ತಮ ಬದುಕು ಸಾಗಿಸುತ್ತಿದ್ದಾರೆ ಎಂದು ದೇವಾಲಯದ ಪ್ರಧಾನ ಅರ್ಚಕ ಮೋಹನ್ ಸ್ವಾಮಿ ತಿಳಿಸಿದ್ದಾರೆ.

ಮುಂದಿನ ಶಿವರಾತ್ರಿಯೊಳಗೆ ದೇವಾಲಯ ಕಾರ್ಯವನ್ನು ಪೂರ್ಣ ಗೊಳಿಸಿ ಲೋಕಾರ್ಪಣೆ ಮಾಡುವ ಆಶಯವನ್ನು ದೇವಾಲಯ ಸಮಿತಿ ಹೊಂದಿದೆ. ಕೊನೆಯ ಹಂತದ ಕಾಮಗಾರಿಗೆ ನೆರವು ನೀಡುವ ಭಕ್ತಾದಿಗಳು ಹಾಗೂ ಸಹೃದಯ ದಾನಿಗಳು ಶನೀಶ್ವರಸ್ವಾಮಿ ದೇವಸ್ಥಾನ ಸೇವಾ ಸಮಿತಿ ಹೆಸರಿನಲ್ಲಿ ಸೋಮವಾರಪೇಟೆಯ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿರುವ ಉಳಿತಾಯ ಖಾತೆ ಸಂಖ್ಯೆ 003300101019019, ಐಎಫ್‍ಎಸ್‍ಸಿ ಕೋಡ್ ಸಿಓಆರ್‍ಪಿ 0000033 ಇಲ್ಲಿಗೆ ಜಮೆ ಮಾಡಬಹುದು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.