ಕುಶಾಲನಗರ, ಜೂ. 17: ಕುಶಾಲನಗರ ಒಳಚರಂಡಿ ಕಾಮಗಾರಿ ಕಳಪೆಯಾದ ಹಿನ್ನೆಲೆ ರಥಬೀದಿಯ ಉದ್ದಕ್ಕೂ ನಿರ್ಮಿಸಿದ ಆಳುಗುಂಡಿಗಳು ಕುಸಿದು ನಿಂತಿರುವ ದೃಶ್ಯ ಕಂಡುಬಂದಿದೆ.
ಕುಶಾಲನಗರ ಪಟ್ಟಣದ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯ ಸಹಾಯಕ ಅಭಿಯಂತರ ಆನಂದ್ ಅವರ ಉಸ್ತುವಾರಿಯಲ್ಲಿ ಪಟ್ಟಣದ ಎಲ್ಲೆಡೆ ಕಾಮಗಾರಿ ನಡೆದಿದ್ದು ಬಹುತೇಕ ಕಳಪೆಯಾಗಿರುವ ಬಗ್ಗೆ ನಾಗರಿಕರಿಂದ ಆರೋಪಗಳು ಕೇಳಿಬರುತ್ತಿವೆ.
ರಥಬೀದಿಯಲ್ಲಿ ಹಲವು ಡ್ರಮ್ಪಿಟ್ಗಳು ಕುಸಿದಿದ್ದು ಸಂಚಾರಕ್ಕೆ ಅಡ್ಡಿಯಾಗುವದರೊಂದಿಗೆ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಾಜಕಾಲುವೆಯಲ್ಲಿ ಇಂತಹ ಕಾಮಗಾರಿ ನಡೆದಿದ್ದು ಬಹುತೇಕ ಯೋಜನೆ ನೀರುಪಾಲಾಗುತ್ತಿರುವದು ಕಂಡುಬಂದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಂಡು ಮುಂದೆ ಉಂಟಾಗಲಿರುವ ಅಪಾಯವನ್ನು ತಪ್ಪಿಸಬೇಕೆಂದು ಪತ್ರಿಕೆ ಮೂಲಕ ಕೋರಿದ್ದಾರೆ.