ಚೆಟ್ಟಳ್ಳಿ, ಜೂ. 17: ಪ್ರಸಕ್ತ ಸಾಲಿನಲ್ಲಿ ಕಾಫಿ ಬೆಳೆಯುವ ಬಹುತೇಕ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದ ಹೂವಾಗಿ, ಬೆಳೆದ ಕಾಯಿಗಳಲ್ಲಿ ಕಾಯಿ ಕೊರಕವು ಕಂಡು ಬಂದಿದೆ. ಈ ಸಮಯದಲ್ಲಿ ಕಾಫಿ ಕಾಯಿಯು ಇನ್ನೂ ಮೃದುವಾಗಿರುವ ಕಾರಣ, ಪ್ರೌಢ ಕಾಯಿ ಕೊರಕವು ಕಾಯಿಯ ತುದಿಯ ಭಾಗದಲ್ಲಿ ಕಾಯುತ್ತಿರುತ್ತವೆ. ಮೇಲಾಗಿ, ಚದುರಿದ ಮಳೆ (ಮೇ-ಜೂನ್) ಮತ್ತು ತಡವಾದ ಮುಂಗಾರು ಮಳೆಯಿಂದಾಗಿ (ಜುಲೈ-ಆಗಸ್ಟ್), ಕಾಫಿಯ ಬೀಜವು ಮುಂಚಿತವಾಗಿ ಬಲಿಯುವ ಸಾಧ್ಯತೆಗಳಿವೆ. ಈ ಪರಿಸ್ಥಿತಿಯು, ಪ್ರೌಢ ಕೀಟದ ಹಾವಳಿಗೆ ಅನುಕೂಲಕರವಾಗಿರುತ್ತದೆ. ಅಕಾಲಿಕವಾಗಿ ಬೆಳೆದ ಕಾಯಿಗಳು ಮತ್ತು ಗಿಡಗಳಲ್ಲಿ ಕುಯ್ಯದೆ ಉಳಿಸಿದ ಕಾಯಿಯಿಂದ ಈ ಕೀಟವು ಹೊರಬಂದು ಹೊಸ ಫಸಲನ್ನು ಹಾನಿಗೊಳಿಸಲು ಪ್ರಾರಂಭಿಸುತ್ತದೆ. ಆದುದರಿಂದ, ಎಲ್ಲಾ ಕಾಫಿ ಬೆಳೆಗಾರರು ಸಮಯಪ್ರಜ್ಞೆಯಿಂದ ಸೂಕ್ತವಾದ ಹತೋಟಿ ಕ್ರಮಗಳನ್ನು ಅನುಸರಿಸಿದರೆ, ಕಾಫಿ ಕಾಯಿ ಕೊರಕವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ. ಆ ದಿಸೆಯಲ್ಲಿ ಸೂಚಿಸಿರುವ ಹತೋಟಿ ಕ್ರಮಗಳನ್ನು ತಕ್ಷಣವೇ ಅನುಸರಿಸಬೇಕೆಂದು ಸಲಹೆ ನೀಡಲಾಗಿದೆ:
ಅಕಾಲಿಕವಾಗಿ ಬೆಳೆದ ಕಾಯಿಗಳನ್ನು ಮತ್ತು ಹಣ್ಣಾಗಿರುವ ಕಾಫಿಯನ್ನು ಹುಡುಕಿ ಕುಯ್ದಲ್ಲಿ, ಕೀಟದ ಹರಡುವಿಕೆಯನ್ನು ತಡೆಯಬಹುದಾಗಿದೆ.
ಬ್ರೋಕ ಟ್ರ್ಯಾಪ್ಗಳನ್ನು ಎಕರೆಗೆ 10 ರಂತೆ ತೋಟಗಳಲ್ಲಿ ಸೆಪ್ಟೆಂಬರ್ ತಿಂಗಳೊಳಗಾಗಿ ಅಳವಡಿಸಬೇಕು.
600 ಮಿ.ಲೀ. ಕ್ಲೋರೋಪೈರಿಫಾಸ್ 20 ಇಸಿ ಕೀಟನಾಶಕವನ್ನು 200 ಲೀಟರ್ ನೀರಿನಲ್ಲಿ 200 ಮಿ.ಲೀ. ಯಾವದೇ ಅಂಟುದ್ರಾವಣ ಬೆರೆಸಿ, ತೋಟದಲ್ಲಿ ಕೀಟಗ್ರಸ್ಥ ಕಾಯಿಗಳ ಮೇಲೆ ಬ್ಯಾಕ್ ಪ್ಯಾಕ್ ಸ್ಪ್ರೆಯರ್ಗಳನ್ನು ಬಳಸಿ (ಮಾನವ ಚಾಲಿತ ಅಥವಾ ಬ್ಯಾಟರಿ ಚಾಲಿತ) ನೇರವಾಗಿ ಬೀಳುವಂತೆ ಸಿಂಪಡಿಸಿದಾಗ ನಿರೀಕ್ಷಿತ ಯಶಸ್ಸು ಪಡೆಯಬಹುದಾಗಿದೆ.
40 ಗ್ರಾಂ. ಜೈವಿಕ ಶಿಲೀಂಧ್ರ, ಬೆವೇರಿಯಾ ಬಾಸ್ಸಿಯಾನ ಬೀಜಾಣುಗಳನ್ನು 200 ಲೀಟರ್ ನೀರಿನಲ್ಲಿ 200 ಮಿ.ಲೀ. ಯಾವದೇ ಅಂಟುದ್ರಾವಣ ಬೆರೆಸಿ, ತೋಟದಲ್ಲಿ ಕೀಟಗ್ರಸ್ಥ ಕಾಯಿಗಳ ಮೇಲೆ ನೇರವಾಗಿ ಬೀಳುವಂತೆ ಸಿಂಪಡಿಸಿದಾಗ ನಿರೀಕ್ಷಿತ ಯಶಸ್ಸು ಪಡೆಯಬಹುದಾಗಿದೆ.
ಕೀಟನಾಶಕ ಸಿಂಪರಣೆಯು ತಡವಾದಲ್ಲಿ, ಕಾಯಿ ಕೊರಕಗಳು ಕಾಫಿ ಬೀಜದ ಒಳಭಾಗದಲ್ಲಿ ಸೇರುವದರಿಂದ ಕೀಟನಾಶಕ ಸಿಂಪರಣೆಯಿಂದ ಯಾವದೇ ಉಪಯೋಗವಿಲ್ಲ.
ಕಾಫಿ ಬೆಳೆಗಾರರು ಈ ಶಿಲೀಂಧ್ರ ಬೆಳೆಸಲು ಆಸಕ್ತಿ ಹೊಂದಿದ್ದಲ್ಲಿ, ಕಾಫಿ ಸಂಶೋಧನ ಕೇಂದ್ರ ಅಥವಾ ಸಮೀಪದ ವಿಸ್ತರಣಾ ವಿಭಾಗವನ್ನು ಸಂಪರ್ಕಿಸಲು ಕಾಫಿ ಮಂಡಳಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.