ಮಡಿಕೇರಿ, ಜೂ. 17: ಪ್ರಾಕೃತಿಕ ವಿಕೋಪದಿಂದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಅತಿವೃಷ್ಟಿ ದುರಂತವನ್ನು ರಾಜ್ಯ ಸರಕಾರವು ಗಣನೆಗೆ ತೆಗೆದುಕೊಂಡು, ಮಾನವೀಯ ನೆಲೆಯಲ್ಲಿ ಅಗತ್ಯ ಪರಿಹಾರ ಒದಗಿಸುವದಾಗಿ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಘೋಷಿಸಿದರು. ಇಂದು ಸಂಜೆ ಕೆದಕಲ್ ಬಳಿಯ ಖಾಸಗಿ ರೆಸಾರ್ಟ್‍ಗೆ ಆಗಮಿಸಿರುವ ಸಚಿವರನ್ನು ‘ಶಕ್ತಿ’ ಸಂದರ್ಶಿಸಿದಾಗ ಮೇಲಿನಂತೆ ನುಡಿದರು.ವಿಶೇಷವಾಗಿ ಕೊಡಗಿನ ಗಡಿ ಮಾಕುಟ್ಟ ಅಂತರರಾಜ್ಯ ಹೆದ್ದಾರಿ ಯಲ್ಲಿ ಉಂಟಾಗಿರುವ ಭೂಕುಸಿತ ದಿಂದ ಎದುರಾಗಿರುವ ಅನಾಹುತವನ್ನು ಕೇರಳ ಸರಕಾರ ಹಾಗೂ ಕಣ್ಣೂರು ಜಿಲ್ಲಾಡಳಿತದ ಸಹಕಾರದೊಂದಿಗೆ ಜಂಟಿಯಾಗಿ ಸರಿಪಡಿಸಲು ಗಮನ ಹರಿಸಲಾಗು ವದು ಎಂದು ಸಚಿವರು ಮಾರ್ನುಡಿದರು.ಮಾಕುಟ್ಟ ವಿಭಾಗದಲ್ಲಿ ಸಂಭವಿಸಿರುವ ಅನಾಹುತ ಸರಿಪಡಿಸಲು ಕೇರಳ ಸರಕಾರದ ಕೊಡುಗೆಯನ್ನು ಸ್ಮರಿಸಿದ ಅವರು ಯಂತ್ರೋಪಕರಣ ಸಹಿತ ಕೇರಳ - ಕರ್ನಾಟಕ ಸಂಪರ್ಕ ಪುನರ್‍ಕಲ್ಪಿಸಲು ಸಹಕಾರ ನೀಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಎಲ್ಲವನ್ನು ಪರಿಶೀಲಿಸಿ ಕ್ರಮ : ತಾ. 18 ರಂದು (ಇಂದು) ಕೊಡಗಿನ ವೀರಾಜಪೇಟೆ ತಾಲೂಕಿನ ಮಾಕುಟ್ಟ ಹಾಗೂ ತಿತಿಮತಿ ಹೆದ್ದಾರಿ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ಆ ಬಳಿಕ ಜಿಲ್ಲಾ ಆಡಳಿತ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಣೆಗೆ ಸೂಚಿಸಲಾಗುವದು ಎಂದ ದೇಶಪಾಂಡೆ, ಜಿಲ್ಲಾಧಿಕಾರಿಗಳಿಗೆ ಈ ನಿಟ್ಟಿನಲ್ಲಿ ತಾವು ನಿರ್ದೇಶಿಸುವದಾಗಿ ಸ್ಪಷ್ಟಪಡಿಸಿದರು.

ಹಣದ ಕೊರತೆ ಇಲ್ಲ : ಕೊಡಗಿನಲ್ಲಿ ಮಳೆ ಹಾನಿಯಿಂದ ಮೂವರ ಸಾವು ಸಂಭವಿಸಿರುವದಾಗಿ ಮಾಹಿತಿ ಲಭಿಸಿದೆ ಎಂದ ಸಚಿವರು, ಜನರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ ಸೇರಿದಂತೆ ಅತಿವೃಷ್ಟಿಯಿಂದ ಎದುರಾಗಿರುವ ಪರಿಸ್ಥಿತಿಯನ್ನು ಎದುರಿಸಲು ಹಣದ ಕೊರತೆ ಇಲ್ಲವೆಂದು ನುಡಿದರಲ್ಲದೆ, ಎಲ್ಲಾ ಇಲಾಖೆಗಳು ಸಂಬಂಧಿಸಿದ ನಷ್ಟ ಪರಿಹಾರಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಪರಿಶೀಲನಾ ಸಭೆಯಲ್ಲಿ ತಾವು ನಿರ್ದೇಶಿಸಿರು ವದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಸಂಭವಿಸಿರುವ ಮಳೆ ನಷ್ಟ ಪರಿಹಾರವನ್ನು ಸಮರ್ಪಕವಾಗಿ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಹಣವನ್ನು ಸರಕಾರ ಬಿಡುಗಡೆ ಮಾಡುತ್ತಿದೆ ಎಂದು ಮಾಹಿತಿಯಿತ್ತರು.

ಜಮ್ಮಾ ಸಮಸ್ಯೆ ಅಧ್ಯಯನ : ಕೊಡಗಿನಲ್ಲಿ ಜಮ್ಮಾ ಸಮಸ್ಯೆ ಹಾಗೂ ಬಾಣೆ ಜಾಗ ಗೊಂದಲ ಕುರಿತು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ಈಗಷ್ಟೇ ಕಂದಾಯ ಇಲಾಖೆಯ ಹೊಣೆಗಾರಿಕೆ ವಹಿಸಿ ಕೊಂಡಿರುವದಾಗಿ ಉಲ್ಲೇಖಿಸಿದರು. ತಾನು ಮಳೆ ಪರಿಹಾರ ಕಲ್ಪಿಸಲು ಉಡುಪಿ, ದಕ್ಷಿಣಕನ್ನಡ, ಬೆಳಗಾವಿ ಜಿಲ್ಲೆಗಳ ಪ್ರವಾಸ ಮುಗಿಸಿ ಕೊಡಗು ಮುಖಾಂತರ ಮೈಸೂರು ಜಿಲ್ಲೆ ಹಾಗೂ ಇತರೆಡೆ ಮಾಹಿತಿ ಕಲೆ ಹಾಕುವ ಜವಾಬ್ದಾರಿಕೆ ಹೊತ್ತಿದ್ದು, ಆ ಕಾರ್ಯವನ್ನು ಪ್ರಥಮವಾಗಿ ಪೂರೈಸು ವದಾಗಿ ತಿಳಿಸಿದರು. 1 ವಾರದ ಬಳಿಕ ತಾನು ಪರಿಣಿತರೊಂದಿಗೆ ಚರ್ಚಿಸಿ ಕೊಡಗಿನ ಜಮ್ಮಾ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುವದಾಗಿ ಅವರು ಈ ಸಂದರ್ಭ ಆಶ್ವಾಸನೆಯಿತ್ತರು.

ನಗರೋತ್ಥಾನದಡಿ ಕ್ರಮ : ಜಿಲ್ಲಾ ಕೇಂದ್ರ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದೊಂದಿಗೆ ರಸ್ತೆ ಸಮಸ್ಯೆ, ಒಳಚರಂಡಿ ಇತ್ಯಾದಿ ಕುರಿತು ಗಮನ ಸೆಳೆದಾಗ, ಇಂತಹ ಸಮಸ್ಯೆಗಳನ್ನು ನಗರಸಭೆ ನಗರೋತ್ಥಾನ ನಿಧಿಯಿಂದ ಸಮರ್ಪಕ ರೀತಿಯಲ್ಲಿ ನಿಭಾಯಿಸುವ ಅಗತ್ಯವಿದೆ ಎಂದು ಸೂಚ್ಯವಾಗಿ ನುಡಿದ ಸಚಿವರು,

(ಮೊದಲ ಪುಟದಿಂದ) ಸರಕಾರದಿಂದ ಎಲ್ಲವನ್ನು ಸೂಕ್ತ ರೀತಿ ಬಗೆಹರಿಸಲು ಕಾಳಜಿ ವಹಿಸುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಉಸ್ತುವಾರಿ ನೇಮಕ : ಕೊಡಗು ಜಿಲ್ಲೆಗೆ ಇನ್ನು ಉಸ್ತುವಾರಿ ಸಚಿವರ ನಿಯೋಜನೆಗೊಳ್ಳದಿರುವ ಬಗ್ಗೆ ‘ಶಕ್ತಿ’ ಪ್ರಸ್ತಾಪಿಸುತ್ತಾ, ಆ ಹೊಣೆಗಾರಿಕೆ ತಾವು ವಹಿಸಿಕೊಳ್ಳಬಹುದಲ್ಲವೇ? ಎಂದು ಪ್ರಶ್ನಿಸಿದಾಗ ಸದ್ಯದಲ್ಲೇ ಈ ಬಗ್ಗೆ ಸರಕಾರ ನೇಮಕಾತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಗುಳ್ನಗೆ ಬೀರಿದರು.

ಜಿಲ್ಲೆಗೆ ಭೇಟಿ ನೀಡಿರುವ ಸಚಿವರು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಸೇರಿದಂತೆ ಪ್ರೊಬೆಷನರಿ ಎಸ್‍ಪಿ ಯತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಹಾಗೂ ಉಪವಿಭಾಗಾಧಿಕಾರಿ ಆರ್.ಕೆ. ಕೋನಾರೆಡ್ಡಿ ಅವರುಗಳೊಂದಿಗೆ ಕೊಡಗಿನ ಸ್ಥಿತಿಗತಿ ಬಗ್ಗೆ ಸಮಾಲೋಚನೆ ನಡೆಸಿದರು. ಆ ಮುನ್ನ ಸಚಿವರನ್ನು ಜಿಲ್ಲಾಡಳಿತದಿಂದ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.