ಮಡಿಕೇರಿ, ಜೂ. 17: ಜಿಲ್ಲೆಯ ವಿವಿಧ ಕಾರಣಗಳಿದ ತೆರವಾಗಿದ್ದ ಮದೆ, ಕಣ್ಣಂಗಾಲ, ಹಾತೂರು ಹಾಗೂ ಎಮ್ಮೆಮಾಡುವಿನಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸಂಬಂಧಿಸಿದಂತೆ ತಾ. 14 ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ.
ಮದೆ ಪಂಚಾಯಿತಿಯ ಜೋಡುಪಾಲ ಕ್ಷೇತ್ರ, ಕಣ್ಣಂಗಾಲ, ಹಾತೂರು ಗ್ರಾ.ಪಂ.ನ ಕೈಕೇರಿ ಕ್ಷೇತ್ರ ಹಾಗೂ ಎಮ್ಮೆಮಾಡು ಗ್ರಾ.ಪಂ.ನ ಎರಡು ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಎಮ್ಮೆಮಾಡು ಗ್ರಾ.ಪಂ.ನ ಎರಡು ಸ್ಥಾನಕ್ಕೂ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇಲ್ಲಿ ಚುನಾವಣೆ ನಡೆದಿರಲಿಲ್ಲ. ಕೈಕೇರಿ ಕ್ಷೇತ್ರದಲ್ಲಿ ಪಿ.ಎ. ಮಾಲಿನಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮದೆ ಗ್ರಾ.ಪಂ.ನ ಜೋಡುಪಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಮೇಶ್ವರಿ 334 ಮತ ಪಡೆದು ಚುನಾಯಿತರಾಗಿದ್ದಾರೆ. ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಮಲ 162 ಮತ ಗಳಿಸಿ ಪರಾಭವಗೊಂಡಿದ್ದಾರೆ.
ಕಣ್ಣಂಗಾಲ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ 354 ಮತ ಗಳಿಸಿ ಜಯಗಳಿಸಿದ್ದರೆ, ಇತರ ಸ್ಪರ್ಧಿಗಳಾದ ರಾಕೇಶ್ (234) ಹಾಗೂ ಬಿ.ವಿ. ಗಿರೀಶ್ (40) ಮತ ಪಡೆದು ಸೋಲು ಕಂಡಿದ್ದಾರೆ. ಇಂದು ಆಯಾ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ನಡೆಯಿತು.