ಇತ್ತೀಚೆಗೆ ಕೊನೆಗೊಂಡ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಾಗ ಯಾವ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ವಿಧಾನಸಭೆ ಸೃಷ್ಠಿಯಾಯಿತು. ಅಂದರೆ, ಯಾವದೇ ಒಂದು ಪಕ್ಷಕ್ಕೆ ರಾಜ್ಯ ಆಳುವ ಹಕ್ಕಿಲ್ಲ, ಮೈತ್ರಿ ಸರಕಾರವೇ ರಚನೆಯಾಗಬೇಕೆಂಬದು ಈ ಸಂದರ್ಭದ ಜನಾದೇಶವೆಂದು ಬೇರೆ ಹೇಳಬೇಕಾದ ಅಗತ್ಯವಿಲ್ಲ. ಮೈತ್ರಿ ಸರಕಾರವೆಂದರೆ ಯಾರ ನಡುವೆ ಮೈತ್ರಿಯಾಗಬೇಕಿತ್ತೆಂಬದು ಬೇರೆ ಪ್ರಶ್ನೆ.
ಈ ಬಾರಿಯ ವಿಧಾನಸಭಾ ಚುನಾವಣಾ ಪ್ರಚಾರ ಕೇವಲ ರಾಜಕೀಯ ಪಕ್ಷಗಳ ನಡುವೆ ಮಾತ್ರ ನಡೆಯಲಿಲ್ಲ. ಒಂದು ಕಡೆ ಬಿ.ಜೆ.ಪಿ. ಕೇಂದ್ರದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕವನ್ನು ವಶಪಡಿಸಿಕೊಳ್ಳಬೇಕೆಂದು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಹೋರಾಡಿದರೆ ಇನ್ನೊಂದೆಡೆ, ಯಾವದೇ ಕಾರಣಕ್ಕೆ ಕೋಮುವಾದಿ ಬಿ.ಜೆ.ಪಿ. ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಲು ರಾಜಕೀಯ ಪಕ್ಷಗಳ ಜೊತೆ ಸಂಬಂಧವೇ ಇಲ್ಲದಿರುವ ಪ್ರಖರ ಜಾತ್ಯಾತೀತ ಶಕ್ತಿಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರದ ಕಣಕ್ಕೆ ಧುಮುಕಿದ್ದವು. ಕರ್ನಾಟಕದ ಪ್ರಗತಿಪರ ಬುದ್ಧಿಜೀವಿಗಳೂ ಸಹ ಕಳೆದ ಚುನಾವಣೆಯ ಸಂದರ್ಭದಲ್ಲಿ ‘ಬಿ.ಜೆ.ಪಿ.ಯನ್ನು ಸೋಲಿಸಿ ಅಭಿಯಾನ’ ದಲ್ಲಿ ಸಕ್ರಿಯರಾಗಿದ್ದದ್ದು ಗಮನಾರ್ಹವಾಗಿತ್ತು.
ಚುನಾವಣೆಯ ಪಲಿತಾಂಶ ಜಾತ್ಯತೀತ ಶಕ್ತಿಗಳ ಪರವಾಗಿ ಬಂದಿದ್ದು, ಅದರ ಪ್ರತಿನಿಧಿಗಳಾದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಸೇರಿ ಸಮ್ಮಿಶ್ರ ಸರಕಾರ ರಚಿಸಿಕೊಳ್ಳಬೇಕೆಂಬುದೇ ಸ್ಪಷ್ಟ ಜನಾದೇಶವಾಗಿತ್ತು. ತಕ್ಷಣವೇ ಇದನ್ನು ಅರ್ಥಮಾಡಿಕೊಂಡ ಕಾಂಗ್ರೆಸ್ ಪಕ್ಷದ ವರಿಷ್ಠರು ಹಿಂದಿನದೆಲ್ಲವನ್ನು ಬದಿಗಿಟ್ಟು ಮುಖ್ಯಮಂತ್ರಿ ಸ್ಥಾನ ಜೆ.ಡಿ.ಎಸ್.ಗೆ ಬಿಟ್ಟುಕೊಡಲು ಮುಂದೆ ಬರುವದರ ಮೂಲಕ ಜನಾದೇಶಕ್ಕೆ ತಲೆಬಾಗಿ ಬುದ್ಧಿ ಪ್ರೌಢಿಮೆ ಹಾಗೂ ಮುತ್ಸದ್ದಿತನ ಪ್ರದರ್ಶಿಸಿದರು. ಇದನ್ನು ಕಂಡ ಇಡೀ ರಾಷ್ಟ್ರದ ಜಾತ್ಯತೀತ ಶಕ್ತಿಗಳು ಖುಷಿಪಟ್ಟು ಸಂಭ್ರಮಿಸಿದವು. ದೇಶದಲ್ಲಿನ ವಿನಾಶಕಾರಿ ಕೋಮುಶಕ್ತಿ ಬಿ.ಜೆ.ಪಿ ವಿರುದ್ಧ ರಾಷ್ಟ್ರವ್ಯಾಪಿ ಒಕ್ಕೂಟ ಅಸ್ತಿತ್ವಕ್ಕೆ ಬರಲು ಕರ್ನಾಟಕದ ಈ ಬೆಳವಣಿಗೆ ಮುನ್ನುಡಿಯೆಂದು ಪರಿಗಣಿಸಲಾಯಿತು.
ಪರಿಣಾಮವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಕೂಟದ ಸರಕಾರ ಅಸ್ಥಿತ್ವಕ್ಕೆ ಬಂತು. ಮೈತ್ರಿ ಸರಕಾರ ಅಸ್ಥಿತ್ವಕ್ಕೆ ಬಂದು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ, ಮಂತ್ರಿಮಂಡಲದ ರಚನೆಯೂ ಆಗಿ ನೂತನ ಸರಕಾರ ಅಂಬೆಗಾಲಿಕ್ಕುತ್ತಿದೆ. ಈ ಮೈತ್ರಿ ಸರಕಾರ ನಿಜವಾದ ಮೈತ್ರಿಯಿಂದ ಕೂಡಿ ನೆಮ್ಮದಿಯಿಂದ ರಾಜ್ಯದ ಆಡಳಿತ ನಡೆಸಬೇಕೆಂಬುದೇ ಎಲ್ಲರ ಆಶಯವಾಗಿದೆ.
ಮಂತ್ರಿ ಮಂಡಲದಲ್ಲಿ ಮುಖ್ಯಮಂತ್ರಿ ಸೇರಿದಂತೆ ಇರಬಹುದಾದ ಮಂತ್ರಿಗಳ ಗರಿಷ್ಟ ಸಂಖ್ಯೆ 34. ಅವುಗಳಲ್ಲಿ ಕಾಂಗ್ರೆಸ್ಗೆ 22 ಸ್ಥಾನ ಮತ್ತು ಜೆ.ಡಿ.ಎಸ್.ಗೆ 12 ಸ್ಥಾನ ಎಂದು ನ್ಯಾಯ ಸಮ್ಮತವಾಗಿ ಹಂಚಿಕೆಯಾಗಿದೆ. ಕಾಂಗ್ರೆಸ್ನಲ್ಲಿ 79 ಜನ ಶಾಸಕರಿದ್ದಾರೆ. ಎಲ್ಲರನ್ನು ಮಂತ್ರಿ ಮಾಡಲಿಕ್ಕಾಗುವದಿಲ್ಲ. ಜೆ.ಡಿ..ಎಸ್. ನಲ್ಲಿರುವ 37 ಶಾಸಕರನ್ನು ಮಂತ್ರಿ ಮಾಡಲಿಕ್ಕಾಗುವದಿಲ್ಲ. ಆದರೆ ಎಲ್ಲರಿಗೂ ಮಂತ್ರಿ ಪದವಿಯ ಮೇಲೆಯೇ ಕಣ್ಣು. ಅದು ಸಿಗದಿದ್ದರೆ ಆಕಾಶವೇ ಕಳಚಿ ಬಿದ್ದು ಹೋಯಿತೆಂದು ಹಲುಬುತ್ತಿರುವವರು ಕೆಲವರು. ಹೀಗಾಗಿ ಎಲ್ಲವೂ ಆಯೋಮಯ. ಇದನ್ನು ಉಪಯೋಗಿಸಿಕೊಂಡು ಗೊಂದಲ ಸೃಷ್ಠಿಸುತ್ತಿರುವ ಮಾಧ್ಯಮಗಳು ಒಂದೆಡೆಯಾದರೆ ಇನ್ನೊಂದೆಡೆ, ಸರಕಾರ ಇವತ್ತು ಅಥವಾ ನಾಳೆ ಬಿದ್ದು ಹೋಗುತ್ತದೆಂದು ಭ್ರಮಿಸುತ್ತಾ ಕಾಯುತ್ತಿರುವ ಬಿ.ಜೆ.ಪಿಯ ಮುಖಂಡರುಗಳು. ಈ ನಡುವೆ ಪ್ರಭುವೆಂದು ಭ್ರಮಿಸುತ್ತಿರುವ ಪ್ರಜೆ ಮಾತ್ರ ನೀತಿ ಭ್ರಷ್ಟ ಶಾಸಕರನ್ನು ಆರಿಸಿದ ತಪ್ಪಿಗಾಗಿ ತನ್ನನ್ನು ತಾನೇ ಶಪಿಸಿಕೊಳ್ಳುವಂತಾಗಿದೆ.
ಎಲ್ಲರಿಗೂ ಮಂತ್ರಿಯಾಗಬೇಕು ಎನ್ನುವ ಆಸೆ, ಆದರೆ ಅದು ಸಾಧ್ಯವಿಲ್ಲ ಎಂಬದು ಅಷ್ಟೆ ಸತ್ಯ. ಈ ಮೊದಲು ಮಂತ್ರಿಯಾದವನಿಗೆ ಈಗ ಶಾಸಕನಾಗಿ ಕೂತುಕೊಂಡು ಕರ್ತವ್ಯ ನಿರ್ವಹಿಸುದು ಸಾಧ್ಯವಿಲ್ಲ ಎಂಬ ಕೀಳರಿಮೆ. ಆದ್ದರಿಂದ ಮಂತ್ರಿ ಪದವಿಗಾಗಿ ಕೆಲ ಶಾಸಕರುಗಳು ಬೀದಿ ರಂಪಾಟದಲ್ಲಿ ತೊಡಗಿ ಮೈತ್ರಿ ಸರಕಾರ ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಅಡ್ಡಿ ಪಡಿಸುತ್ತಿರುವುದು ಇವರ ಘನತೆಗೆ ತಕ್ಕುದಲ್ಲವೆಂದು ಇವರಿಗೆ ತಿಳಿಸಿ ಹೇಳುವದಾದರೂ ಹೇಗೇ? ಮಂತ್ರಿ ಪದವಿ ನೀಡಬೇಕೆಂದು ಬೀದಿ ರಂಪಾಟದಲ್ಲಿ ತೊಡಗಿರುವ ಇವರು ತಮ್ಮ ಮಾನವನ್ನೇ ಹರಾಜಿಗೆ ಬಿಟ್ಟಂತಾಗಿದೆಯೆಂದು ಅವರಿಗೆ ಮನವರಿಕೆ ಮಾಡಿಕೊಡುವದಾದರೂ ಹೇಗೆ?. ಮಂತ್ರಿ ಪದವಿ ಯಾರ ಪಿತ್ರಾರ್ಜಿತ ಆಸ್ಥಿಯೂ ಅಲ್ಲ, ಅದು ಜನ್ಮಸಿದ್ಧ ಹಕ್ಕು ಅಲ್ಲ. ಅದೊಂದು ಜವಾಬ್ದಾರಿ. ಅದು ದೊರೆತರೆ ನಿಭಾಯಿಸುವದು, ಇಲ್ಲವಾದರೆ ಶಾಸಕನಾಗಿ ತನ್ನ ಕರ್ತವ್ಯ ಮಾಡಿ ಪ್ರತಿನಿಧಿಸುವ ಜನತೆಯ ಹಿತ ಕಾಪಾಡುವದೇ ಶಾಸಕನೊಬ್ಬನಿಗೆ ಗೌರವ ತರುವಂತ ನಡಾವಳಿಕೆ ವಿನಹ ಮಂತ್ರಿ ಸ್ಥಾನ ಬೇಕೆಂದು ಬೆತ್ತಲೆ ಮೆರವಣಿಗೆಗೆ ಇಳಿಯುವದಲ್ಲ. ಯಾರನ್ನು ಮಂತ್ರಿ ಮಾಡಬೇಕೆಂಬದು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರ. ಅದನ್ನು ಪ್ರಶ್ನೆ ಮಾಡುವದು ಹೊಣೆಗೇಡಿತನವಾಗುತ್ತದೆ.
ಹೌದು, ಶ್ರೀ ಆರ್.ವಿ. ದೇಶಪಾಂಡೆಯವರನ್ನು ಯಾಕಾದರೂ ಮತ್ತೆ ಮಂತ್ರಿ ಮಾಡಬೇಕಾಗಿತ್ತು? ಶ್ರೀ. ಎಂ.ಬಿ. ಪಾಟೀಲರನ್ನು ಕೆೃಬಿಟ್ಟಿದ್ದು ಏಕೆ? ಎಂಬುದು ನಮ್ಮಂಥವರಿಗೂ ಅರ್ಥವಾಗುತ್ತಿಲ್ಲ. ಅದು ವರಿಷ್ಠರ ವಿವೇಚನೆಗೆ ಬಿಟ್ಟದ್ದು. ಅದನ್ನು ಪ್ರಶ್ನೆ ಮಾಡಬೇಕಾದ ಅಗತ್ಯವಿಲ್ಲ. ಮಂತ್ರಿ ಪದವಿ ಸಿಗದವರು ಬೀದಿ ರಂಪಾಟ ಮಾಡಬೇಕಾದ ಅಗತ್ಯವೂ ಇಲ್ಲ. ಎಲ್ಲರಿಗೂ ಮೈತ್ರಿ ಸರಕಾರ ನೆಮ್ಮದಿಯಿಂದ ಆಡಳಿತ ನಡೆಸುವಂತೆ ಸಹಕರಿಸಬೇಕಾದುದೇ ಇಂದಿನ ಅವಶ್ಯಕತೆ ಮತ್ತು ಜವಾಬ್ದಾರಿಯಾಗಿದೆ ಎಂದು ನಾನು ಇಲ್ಲಿ ಒತ್ತಿ ಹೇಳುತ್ತೇನೆ.
ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯಾಗದಿದ್ದರೆ ಈಗ ಮಂತ್ರಿ ಪದವಿಗಾಗಿ ಮಾನ-ಮರ್ಯಾದೆ ಬಿಟ್ಟು ಬೆತ್ತಲೆ ಕುಣಿಯುತ್ತಿರುವ ಕಾಂಗ್ರೆಸ್ ಮತ್ತು ಜೆ.ಡಿ.(ಎಸ್) ಪಕ್ಷದ ಶಾಸಕರು ಏನು ಮಾಡುತ್ತಿದ್ದರು?. ಅಥವಾ ಒಂದು ವೇಳೆ ಇವರು ಕಳೆದ ಚುನಾವಣೆಯಲ್ಲಿ ಮಣ್ಣು ಮುಕ್ಕಿದ್ದರೆ ಏನು ಸಾಧಿಸುತ್ತಿದ್ದರು?. ಅನೇಕ ಮಂತ್ರಿಗಳೇ ಚುನಾವಣೆಯಲ್ಲಿ ಸೋತು ಇದೀಗ ತೆಪ್ಪಗೆ ಕುಳಿತಿಲ್ಲವೇ?. ಈ ನಡುವೆ ಸರಕಾರವನ್ನು ಅಸ್ಥಿರಗೊಳಿಸಲು ಬಿ.ಜೆ.ಪಿ. ಪಿತೂರಿ ನಡೆಸುತ್ತಿರುವದು, ಈ ಷಡ್ಯಂತ್ರದಲ್ಲಿ ವೀರಶೈವ ಮಠಾದೀಶರೂ ಸಹ ಮುಚ್ಚು ಮರೆಯಿಲ್ಲದೆ ಪಾಲ್ಗೊಂಡಿರುವುದು ಕೂಡ ಎಲ್ಲರೂ ಗಮನಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಮಂತ್ರಿ ಪದವಿ ಬೇಕೆಂದು ಬೀದಿ ರಂಪಾಟ ಮಾಡುವದನ್ನು ಬಿಟ್ಟು ಜವಾಬ್ದಾರಿಯಿಂದ ಇವರೆಲ್ಲರೂ ವರ್ತಿಸಲಿ ಎಂಬುದೇ ನಮ್ಮಂಥವರ ಆಶಯವಾಗಿದೆ. ಶಾಸಕರಾದ ಶ್ರೀ ಬೈರತಿ ಸುರೇಶ್ರವರ ನೇತೃತ್ವದಲ್ಲಿ 40 ಜನ ಶಾಸಕರು ಸಂಘಟಿತರಾಗಿ ಮೈತ್ರಿ ಸರಕಾರ ಮುಂಬರುವ 5 ವರ್ಷ ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಸಹಕರಿಸಬೇಕೆಂದು ಎಲ್ಲಾ ಶಾಸಕರಲ್ಲಿ ಅರಿಕೆ ಮಾಡಿದ್ದಾರೆಂದು ನನಗೆ ಬಂದ ಸುದ್ದಿ ಕಾರ್ಮೋಡದ ನಡುವಿನ ಬೆಳ್ಳಿ ಗೆರೆಯಂತಿದೆ.
- ಎ.ಕೆ. ಸುಬ್ಬಯ್ಯ, ಹಿರಿಯ ವಕೀಲರು.