ಮಡಿಕೇರಿ, ಜೂ. 17: ಕಳೆದ ನಾಲ್ಕಾರು ತಿಂಗಳಿನಿಂದ ಸುಬ್ರಹ್ಮಣ್ಯ ವ್ಯಾಪ್ತಿಯ ಬಿಸಿಲೆ, ಸಂಪಾಜೆ ಬಳಿಯ ಗೂಡುಗದ್ದೆ, ಕಕ್ಕಬ್ಬೆ ಸಮೀಪದ ನಾಲಡಿಯಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು ಪ್ರಸಕ್ತ ಮಳೆಯ ನಡುವೆ ಮತ್ತೆ ಕೊಡಗು - ದಕ್ಷಿಣ ಕನ್ನಡ ಗಡಿಯಲ್ಲಿ ಕಾಣಿಸಿಕೊಂಡು ಗಡಿಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದಾರೆ. ಆ ಬೆನ್ನಲ್ಲೇ ಕೊಡಗು ಹಾಗೂ ಕಾರ್ಕಳದ ನಕ್ಸಲ್ ನಿಗ್ರಹ ದಳ ಜಂಟಿಯಾಗಿ ತಾ. 15 ರಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಜಿಲ್ಲೆಯ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಡಮಕಲ್ ಶ್ರೇಣಿಯ, ತುಳುನಾಡ ಗಡಿ ಮಡಪ್ಪಾಡಿ ಪಕ್ಕದ ಹಾದಿಗಲ್ಲು ಎಂಬಲ್ಲಿ ತಾ. 14 ರಂದು ಸಂಜೆಗತ್ತಲೆ ನಡುವೆ 7.45ರ ಸುಮಾರಿಗೆ ಮಧ್ಯ ವಯಸ್ಸಿನ ಅಂದಾಜು 45 ಅಸುಪಾಸಿನ ಓರ್ವ ಪುರುಷ ಹಾಗೂ 35 ವಯಸ್ಸಿ ರಬಹುದಾದ ಮಹಿಳೆಯೊಂದಿಗೆ ಸುಮಾರು 25ರ ಹರಯದ ಯುವತಿಯೊಬ್ಬಳು ಶಸ್ತ್ರ ಸಜ್ಜಿತರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ನಿವಾಸಿ, ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಂ ಎಂಬವರ ಮನೆಯ ಬಳಿ ರಬ್ಬರ್ ತೋಟದಲ್ಲಿ ಈ ನಕ್ಸಲರು ಪ್ರತ್ಯಕ್ಷಗೊಂಡಿದ್ದಾರೆ.ಅಲ್ಲಿ ಕೇರಳದ ಕಾಸರಗೋಡು ಮೂಲದ ಥಾಮಸ್ ಎಂಬ ಕಾರ್ಮಿಕನ ಬಿಡಾರಕ್ಕೆ ಬಂದಿರುವ ನಕ್ಸಲರು, ಆತ ರಾತ್ರಿ ಊಟಕ್ಕೆಂದು ತಯಾರಿಸಿ ಇಟ್ಟುಕೊಂಡಿದ್ದ ಗಂಜಿ ಅನ್ನ ಹಾಗೂ ಸಾಂಬಾರನ್ನು, ಬಂದೂಕು ತೋರಿಸಿ ಕಸಿದುಕೊಂಡು ಮೂವರು ಜಗಲಿಯಲ್ಲಿ ನಿಂತು ಕೊಂಡೇ ತಿಂದು ಹೋದರೆನ್ನಲಾಗಿದೆ. ಕೇವಲ ತಮ್ಮ ಬಳಿಯಿದ್ದ ಶಸ್ತ್ರಗಳನ್ನು ತೋರಿಸಿ ಬೆದರಿಸಿ ಊಟ ಮಾಡಿದ ಹೊರತು ಏನೂ ಮಾತನಾಡಲಿಲ್ಲ ವೆಂದು ಥಾಮಸ್ ತೋಟ ಮಾಲೀಕ ಜಯರಾಂ ಅವರಿಗೆ ಸುದ್ದಿ ಮುಟ್ಟಿಸಿದ್ದಾನೆ.

(ಮೊದಲ ಪುಟದಿಂದ)

ಆ ಮೇರೆಗೆ ಮಡಪ್ಪಾಡಿ ಜಯರಾಂ ಅವರು ಸುಳ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕೊಡಗು - ದಕ್ಷಿಣ ಕನ್ನಡ ಗಡಿ ಅರಣ್ಯಕ್ಕೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ನಕ್ಸಲರ ಸುಳಿವಿನ ಬೆನ್ನಲ್ಲೇ ನಕ್ಸಲ್ ನಿಗ್ರಹ ದಳ ಎಸ್‍ಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಿರುಸಿನ ತನಿಖೆ ಕೈಗೊಳ್ಳಲಾಗಿದೆ. ಅಲ್ಲದೆ ನಕ್ಸಲರು ಎದುರುಗೊಂಡಿದ್ದ ಥಾಮಸ್ ಬಳಿ ಮಾಹಿತಿ ಕಲೆ ಹಾಕಿದ್ದಾರೆ.

ಆತನ ಪ್ರಕಾರ ಒಬ್ಬಾತ ಪುರುಷ ಹಾಗೂ ಮಹಿಳೆ ಮತ್ತು ಯುವತಿ ತಲಾ ಎರಡೆರಡು ಪಿಸ್ತೂಲು ಗಳೊಂದಿಗೆ, ಒಂದು ಬಂದೂಕು ಕೂಡ ಇದ್ದುದಾಗಿ ಹೇಳಿಕೊಂಡಿರುವ ಥಾಮಸ್, ಪಿಸ್ತೂಲುಗಳಿಗೆ ಹೆದರಿ ತಾನೂ ಏನೂ ಮಾತನಾಡಲಿಲ್ಲ ವೆಂದು ತಿಳಿಸಿದ್ದಾನೆ. ಬದಲಾಗಿ ಮೂವರು ಶಸ್ತ್ರಧಾರಿಗಳು ಕೂಡ ಮೌನ ಮುರಿಯದೆ ಎಲ್ಲವನ್ನೂ ಸನ್ನೆ ಮಾಡಿ ತಿಂದು ಹೋದರೆಂದು ವಿವರಿಸಿದ್ದಾನೆ.

ಜಂಟಿ ಕಾರ್ಯಾಚರಣೆ

ಇದುವರೆಗೆ ಕೊಡಗಿನ ಭಾಗಮಂಡಲ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ ನಕ್ಸಲ್ ನಿಗ್ರಹ ದಳ ಮತ್ತು ಕಾರ್ಕಳದ ನಕ್ಸಲ್ ನಿಗ್ರಹ ಜಂಟಿ ಕೋಂಬಿಂಗ್ ನಡೆಸುತ್ತಿದ್ದು, ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಲ್ಲಿ ಜಿಗಣೆ ಕಾಟದಲ್ಲಿ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿದಿದೆ. ಗುರುವಾರ ತಡರಾತ್ರಿ ವಿಷಯ ಲಭಿಸಿದ ಬೆನ್ನಲ್ಲೇ ಕೋಂಬಿಂಗ್ ಮುಂದುವರಿದಿದೆ.

ಸುಳಿವು ಲಭಿಸಿಲ್ಲ: ಕೊಡಗಿನ ಗಡಿಯಂಚಿನಲ್ಲಿರುವ ಸುಟ್ಟಲ್‍ಮಲೆ, ಕೂಜಿಮಲೆ ಪ್ರದೇಶಕ್ಕೆ ಹೊಂದಿಕೊಂಡಿರುವ ರಬ್ಬರ್ ತೋಟ ಕಾರ್ಮಿಕರು ಸೇರಿದಂತೆ ಅರಣ್ಯ ತಪಾಸಣಾ ಬಿಡಾರಗಳ ಸಿಬ್ಬಂದಿಯಿಂದಲೂ ಮಾಹಿತಿ ಕಲೆ ಹಾಕಿದ್ದು, ಇದುವರೆಗೆ ಯಾವದೇ ಸುಳಿವು ಲಭಿಸಿಲ್ಲ ಎಂದು ನಕ್ಸಲ್ ನಿಗ್ರಹದಳ ಎಸ್‍ಪಿ ಲಕ್ಷ್ಮೀಪ್ರಸಾದ್ ‘ಶಕ್ತಿ’ ಸಂಪರ್ಕಿಸಿದಾಗ ಸುಳಿವು ನೀಡಿದ್ದಾರೆ.

ಮುಖ್ಯಪೇದೆ ಸಾವಿನ ಆಘಾತ : ಈ ನಡುವೆ ಮಡಪ್ಪಾಡಿ ಸುತ್ತಮುತ್ತಲಿನ ಕಾನನದ ನಡುವೆ ಜಂಟಿ ಕಾರ್ಯಾಚರಣೆ ನಡುವೆಯೇ ಕಾರ್ಕಳ ನಕ್ಸಲ್ ನಿಗ್ರಹ ದಳದ ಮುಖ್ಯಪೇದೆ ರಂಗಸ್ವಾಮಿ (48) ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ತಿಳಿಸಿದ ಅವರು, ಈ ಆಘಾತದ ನಡುವೆ ಶೋಧ ಮುಂದುವರೆಸಲಾಗಿದೆ ಎಂದರು.

ದುರ್ದೈವಿ ರಂಗಸ್ವಾಮಿ ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯವರಾಗಿದ್ದು, ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗಿದೆ.