ಪೊನ್ನಂಪೇಟೆ, ಜೂ. 17: ಯೋಗಾಭ್ಯಾಸ ಸರ್ವರೋಗಕ್ಕೂ ಔಷಧವಿದ್ದಂತೆ ಇದರಿಂದ ದೈಹಿಕ ಆರೋಗ್ಯ ಮಾತ್ರವಲ್ಲ ಯುವ ಜನಾಂಗದವರು ಮಾನಸಿಕವಾಗಿಯೂ ಸ್ಥಿಮಿತ ಹೊಂದಲು ಸಾಧ್ಯವಿದೆ ಎಂದು ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಿನ್ನೆ ಮಡಿಕೇರಿ ನೆಹರೂ ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ನೆರೆಹೊರೆ ಯುವಜನ ಸಂಸತ್ತು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ಮೊಬೈಲ್‍ನ ಪ್ರಾಶಸ್ತ್ಯದ ಬಗ್ಗೆ ಪೋಷಕರು ಮನಗಾಣಬೇಕು, ಮೊಬೈಲ್‍ನಲ್ಲಿ ಮಕ್ಕಳು ಏನನ್ನು ಗಮನಿಸುತ್ತಾರೆ ಎಂಬ ಬಗ್ಗೆ ಅರಿವು ಹೊಂದಿರಬೇಕು, ಇತ್ತೀಚಿನ ದಿನಗಳಲ್ಲಿ ಯುವಜನಾಂಗದವರಿಗೆ ಮೊಬೈಲ್ ಹಾಗೂ ಬೈಕ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ಆಶ್ರಮದ ಬೋದ ಸ್ವರೂಪಾನಂದಜೀ ಅವರು ಯೋಗಾಭ್ಯಾಸದಿಂದ ಸಕಾರಾತ್ಮಕ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು ಎಂದರು. ಯೋಗದ ಕುರಿತು ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಿದ ಯೋಗ ಶಿಕ್ಷಕ ಮರಿಯಾಜಾನ್ ಅವರು ಒತ್ತಡದ ಬದುಕಿನ ನಿವಾರಣೆಗೆ ಯೋಗ ‘ಟಾನಿಕ್’ ಇದ್ದಂತೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಸದಾಶಿವಗೌಡ ಅವರು ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೆ ಇಲ್ಲ ಎಂದರು. ಸ್ವಚ್ಛತೆ ಭಾರತ ಆಂದೋಲನದಡಿಯಲ್ಲಿ ಉಪನ್ಯಾಸ ನೀಡಿದ ಜಿಲ್ಲಾ ಪತ್ರಕರ್ತರ ವೇದಿಕೆ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಅವರು ದೇಶದ ಪ್ರಧಾನಿಗಳು ಜೂನ್ 21ರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಸ್ವಚ್ಛ ಭಾರತ ಪರಿಕಲ್ಪನೆಯ ಯೋಜನೆಯನ್ನು ಜಾರಿಗೆ ತಂದಿರುವದು ಸ್ವಾಗತಾರ್ಹ. ಇವೆರಡು ಬದುಕಿನ ಅಂತರಾತ್ಮದ ಶುದ್ಧೀಕರಣ ಪೂರಕವಾಗಿದೆ ಎಂದರು.

ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಯುವ ಒಕ್ಕೂಟದ ತಾಲೂಕು ಅಧ್ಯಕ್ಷೆ ಶೀಲಾ ಬೋಪಣ್ಣ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಚಂದನ್ ನೆಲ್ಲಿತ್ತಾಯ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಆಶ್ರಮದ ಯೋಗ ಶಿಕ್ಷಕರು ಯೋಗದ ಕುರಿತು ಪ್ರಾತ್ಯಕ್ಷಿಕೆ ಮೂಲಕ ನೆರೆದಿದ್ದವರಿಗೆ ಮಾಹಿತಿ ನೀಡಿದರು.