ಕೂಡಿಗೆ, ಜೂ. 17: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ-ಕೊಪ್ಪಲು ಗ್ರಾಮಕ್ಕೆಂದು ಕಳೆದ 10 ವರ್ಷಗಳ ಹಿಂದೆ ಬಾಡಿಗೆ ಕಟ್ಟಡದಲ್ಲಿ ತೆರೆಯಲ್ಪಟ್ಟಿದ್ದ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವದರಿಂದ ಹಾಗೂ ಕಾರ್ಯಕರ್ತೆ ಇಲ್ಲದೆ ಮುಚ್ಚಲ್ಪಟ್ಟಿದೆ.

ಅಂಗನವಾಡಿ ಕೇಂದ್ರವು ಖಾಸಗಿ ಕಟ್ಟಡದ ಒಂದು ಕೋಣೆಯೊಂದರಲ್ಲಿ ನಡೆಯುತ್ತಿದ್ದು, ಶಿಥಿಲಾವಸ್ಥೆಯಲ್ಲಿ ಬೀಳುವ ಹಂತದಲ್ಲಿದೆ. ಈ ಅಂಗನವಾಡಿಗೆ ಬರುತ್ತಿರುವದೇ ಇಬ್ಬರು ಮಕ್ಕಳು ಮಾತ್ರ. ಕಳೆದ ಒಂದು ವರ್ಷದಿಂದ ಅಂಗನವಾಡಿಯ ಸಹಾಯಕಿ ಈ ಮಕ್ಕಳನ್ನು ಪೋಷಿಸುತ್ತಿದ್ದಾರೆ. ಪುಟ್ಟ ಮಕ್ಕಳ ಪೋಷಣೆಗೆಂದೆ ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲ್ಪಟ್ಟಿರುವ ಈ ಕೇಂದ್ರವು ಉಪಯೋಗವಿಲ್ಲದೆ ದುರ್ಬಳಕೆಯಾಗುವಂತಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ತಮಗೆ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಕೇಂದ್ರ ಪ್ರಾರಂಭಗೊಂಡಾಗ 20 ಮಕ್ಕಳು ಇದ್ದವು. ಇದೀಗ ಕಟ್ಟಡದ ಸ್ಥಿತಿ ಮತ್ತು ಅವ್ಯವಸ್ಥೆಗೊಂಡಿರುವದಿಂದ ಮಕ್ಕಳನ್ನು ಈ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಈ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಯಕರ್ತೆ ಬೇರೆಡೆಗೆ ಹೋಗಿರುವ ಕಾರಣ ಈ ಕೇಂದ್ರಕ್ಕೆ ಅಂಗನವಾಡಿಗೆ ಬದಲಿ ವ್ಯವಸ್ಥೆಗಾಗಿ ಕಾರ್ಯಕರ್ತೆಯ ನೇಮಕದ ಬಗ್ಗೆ ಇಲಾಖೆಯು ಸಹ ಗಮನಹರಿಸುತ್ತಿಲ್ಲ. ಅಲ್ಲದೆ, ಗ್ರಾಮ ಪಂಚಾಯ್ತಿಗೆ ನೇಮಕ ಮಾಡುವ ಅಧಿಕಾರವಿದ್ದರೂ ನೇಮಕ ಮಾಡುವ ನೆಪವೊಡ್ಡಿ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ.

ಈ ಹಿನ್ನೆಲೆ ಸಂಬಂಧಪಟ್ಟ ಇಲಾಖೆಯವರು ಹಾಗೂ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡು ಅಂಗನವಾಡಿ ಕಾರ್ಯಕರ್ತೆಯನ್ನು ನೇಮಕ ಮಾಡಿ, ನೂತನ ಅಂಗನವಾಡಿ ಕಟ್ಟಡವನ್ನು ನಿರ್ಮಿಸಬೇಕು ಎಂದು ಕೂಡಿಗೆ-ಕೊಪ್ಪಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.