ಮಡಿಕೇರಿ, ಜೂ. 18: ಕೊಡಗು ಜೀವನದಿ ಕಾವೇರಿಯ ಉಗಮ ಸ್ಥಾನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕಸ ವಿಲೇವಾರಿ ಸಂಬಂಧಪಟ್ಟಂತೆ ನಿರ್ದಿಷ್ಟವಾದ ಜಾಗ ಇಲ್ಲದೆ ಇರುವದರಿಂದ ಅಲ್ಲಲ್ಲಿ ಕಸದ ರಾಶಿಗಳು ಕಂಡುಬರುತ್ತಿವೆ.
ಕೊಡಗಿನ 104 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 11 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿರುವ 104 ಗ್ರಾ.ಪಂ.ಗಳಿಗೆ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ನಿಗದಿಪಡಿಸಿ ಈ ಜಾಗವನ್ನು ಗ್ರಾ.ಪಂ. ಹೆಸರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕಾಗಿ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಅವರು ಕೋರಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 1680 ಲ್ಯಾಂಡ್ ಟೆನ್ಯೂರ್ (ಟಚಿಟಿಜ ಣeಟಿuಡಿe) ಗಳಿದ್ದು ಇತ್ತೀಚಿಗೆ ಸೋಮವಾರಪೇಟೆ ತಾಲೂಕಿನಲ್ಲಿ 132, ವೀರಾಜಪೇಟೆ ತಾಲೂಕಿನಲ್ಲಿ 128 ಮತ್ತು ಮಡಿಕೇರಿ ತಾಲೂಕಿನಲ್ಲಿ 122 ಟೆನ್ಯೂರ್ ಗಳಿರುವ ಮಾಹಿತಿ ಇದೆ. ಇವುಗಳಲ್ಲಿ ಇರುವ ಖಾತೆಗಳು ಜಂಟಿ ಖಾತೆಗಳಾಗಿರುವದರಿಂದ ಹಿಡುವಳಿದಾರರ ಹೆಸರು ಬದಲಾವಣೆಯಾಗುವ ಬಗ್ಗೆ ಕಂದಾಯ ಇಲಾಖೆಯಲ್ಲಿ ಸೂಕ್ತ ಮಾಹಿತಿ ಇಲ್ಲದೆ ಇರುವದರಿಂದ ಖಾತೆ ಬದಲಾವಣೆಯಾಗುತ್ತಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ಟೆನ್ಯೂರ್ಗಳು ಇರುವದರಿಂದ ಮತ್ತು ಇವುಗಳಲ್ಲಿ ಹಲವಾರು ಟೆನ್ಯೂರ್ ಕಂದಾಯಕ್ಕೆ ಬಾರದಿರುವದರಿಂದ ಸರ್ಕಾರಕ್ಕೆ ರಾಜಸ್ವವು ಕಡಿಮೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ಈ ಲ್ಯಾಂಡ್ ಟೆನ್ಯೂರ್ನ್ನು 30 ಕ್ಕೆ ಕಡಿತಗೊಳಿಸಿ ಈ ಭೂಮಿಗೆ ಕಂದಾಯ ನಿಗಧಿಗೊಳಿಸಿ ಜನಸಾಮಾನ್ಯರ ಕಂದಾಯ ದಾಖಲಾತಿಗಳನ್ನು ಸುಲಲಿತಗೊಳಿಸುವದು. ಸರಿಯಾದ ದಾಖಲೆಗಳಿಲ್ಲದೆ ಯಾವದೇ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸಂಬಂಧ ತುರ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರಿಗೆ ಬಿ.ಎ.ಹರೀಶ್ ಮನವಿ ಮಾಡಿದ್ದಾರೆ.