ಮಡಿಕೇರಿ, ಜೂ. 19: ತಲಕಾವೇರಿ ಕ್ಷೇತ್ರದ ಅಭಿವೃದ್ಧಿ ಸಂಬಂಧ ಏರ್ಪಡಿಸಿದ್ದ ಅಷ್ಟಮಂಗಲ ಪ್ರಶ್ನೆಗೆ ಇಂದು ತೆರೆ ಎಳೆಯವದ ರೊಂದಿಗೆ ಪ್ರಸಕ್ತ ಇರುವ ಶ್ರೀ ಅಗಸ್ತ್ಯೇಶ್ವರ ಗುಡಿಯಲ್ಲಿ 12 ವರ್ಷಗಳ ಹಿಂದೆ ಪ್ರತಿಷ್ಠಾಪನೆ ವೇಳೆ ಹಳೆಯ ಬಿಂಬ ಭೂಗತಗೊಳಿಸಿರುವದನ್ನು ಅಲ್ಲಿಂದ ಹೊರ ತೆಗೆದು ಕಾವೇರಿಯು ಸಮುದ್ರ ಸೇರುವ ಪೂಂಪುಹಾರ್‍ನಲ್ಲಿ ವಿಸರ್ಜಿಸಲು ನಿರ್ದೇಶನ ದೊರೆಯಿತು.ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗ ದರ್ಶನದಲ್ಲಿ ಪಯ್ಯವೂರಿನ ನಾರಾಯಣ ಪೊದುವಾಳ್ ದೈವಜ್ಞರು ನಡೆಸಿಕೊಟ್ಟ ಪ್ರಶ್ನೆಯಲ್ಲಿ ಇಂದು ಅಗಸ್ತ್ಯೇಶ್ವರ ಗುಡಿ ಸಂಬಂಧ ವಿಮರ್ಶೆ ಮಾಡಲಾಗಿ, ಈಗಿರುವ ಗುಡಿ ಹಾಗೂ ಶಿವಲಿಂಗದ ಬದಲಾವಣೆ ಅಗತ್ಯವಿಲ್ಲ ವೆಂದು ದೈವಾನುಗ್ರಹ ಲಭಿಸಿತು. ಬದಲಾಗಿ (ಮೊದಲ ಪುಟದಿಂದ) ಈ ಗುಡಿಯೊಳಗೆ ಹುದುಗಿಸಿರುವ ಹಳೆಯ ಭಿನ್ನ ಬಿಂಬವನ್ನಷ್ಟೇ ತೆರವುಗೊಳಿಸಲು ಶುಭಫಲ ಗೋಚರಿಸಿತು.

ಪಾವಿತ್ರ್ಯಕ್ಕೆ ನಿರ್ಣಯ : ಅಂತೆಯೇ ಬ್ರಹ್ಮಗಿರಿ ಶಿಖರದ ಪಾವಿತ್ರ್ಯ ಕಾಪಾಡುವದು ಸೇರಿದಂತೆ ಕನ್ನಿಕೆ ಹೊಳೆಯ ಮೂಲವನ್ನು ಅಭಿವೃದ್ಧಿಪಡಿಸುವದು, ವನಶಾಸ್ತಾವು ಸಹಿತ ಎಲ್ಲ ದೈವ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತು ಇದುವರೆಗಿನ ಎಲ್ಲ ದೋಷಗಳ ನಿವೃತ್ತಿಗೆ ತೀರ್ಮಾನ ಕೈಗೊಳ್ಳಲಾಯಿತು. ಈ ಸಂಬಂಧ ವ್ಯವಸ್ಥಾಪನಾ ಸಮಿತಿ, ಅರ್ಚಕರು, ತಕ್ಕಮುಖ್ಯಸ್ಥರು, ಭಕ್ತರೊಡಗೂಡಿ ನಿರ್ಣಯ ಕೈಗೊಂಡು ಸರಕಾರದಿಂದ ಅನುಮೋದನೆಯೊಂದಿಗೆ, ಅಧಿಸೂಚನೆ ಹೊರಡಿಸಲು ಮುಂದಾ ಗುವಂತೆ ನಿರ್ಧರಿಸಲಾಯಿತು.

ಪೂಜಾ ಕ್ರಮ ವ್ಯವಸ್ಥೆ : ಕ್ಷೇತ್ರದಲ್ಲಿ ನಿತ್ಯ ಪೂಜಾ ಕ್ರಮಗಳಿಗೆ ನಿಯಮ ಪಾಲನೆ; ಬ್ರಹ್ಮಕುಂಡಿಕೆಯೊಳಗೆ ಕುಂಕುಮ ಇತ್ಯಾದಿ ಹಾಕದಿರುವದು, ಬ್ರಹ್ಮಗಿರಿಯಲ್ಲಿ ಅತ್ತಿ, ದರ್ಭೆ, ಔಷಧಿಯುಕ್ತ ಗಿಡಮೂಲಿಕೆಗಳನ್ನು ಬೆಳೆಸುವದು; ಕ್ಷೇತ್ರದಲ್ಲಿ ಕಾಲ ಕಾಲಕ್ಕೆ ನೆರವೇರಿಸುವ ಪೂಜಾಧಿಗಳು ತಂತ್ರಿಗಳ ನಿರ್ದೇಶನದಂತೆ ಮಾಡಬೇಕೆಂದು ಅರ್ಚಕರುಗಳಿಗೆ ಸೂಚಿಸಲಾಯಿತು

ಚಿತ್ರೀಕರಣ ನಿಷೇಧ : ಕ್ಷೇತ್ರದ ಪರಿಸರದಲ್ಲಿ ಯಾವದೇ ಸಿನಿಮಾ, ಧಾರವಾಹಿ ಇತ್ಯಾದಿ ಚಿತ್ತೀಕರಣ ಕಡ್ಡಾಯ ನಿಷಿದ್ಧವೆಂದು; ನಿಯಮ ಉಲ್ಲಂಘಿಸಿ ಯಾರಿಗಾದರೂ ಅವಕಾಶ ಕಲ್ಪಿಸಿದರೆ, ಅಂಥವರ ವಿರುದ್ಧ ಕಾನೂನು ಕ್ರಮದ ಸೂಚನೆ ನೀಡಲಾಯಿತು.

ಸಂಪ್ರದಾಯದಂತೆ ಕಾರ್ಯ : ಕೊಡಗಿನ ವಿವಿಧ ಜನಾಂಗಗಳು ಸೇರಿದಂತೆ ಕ್ಷೇತ್ರಗಳಲ್ಲಿ ಪಿತೃಕಾರ್ಯ, ಪಿಂಡ ಪ್ರಧಾನ, ಸೂತಕ, ಅಶುಚಿತ್ವ ಇತ್ಯಾದಿ ಸಂಬಂಧ ಆಯ ಸಂಪ್ರದಾಯಗಳಿಗೆ ಅನುಸಾರವಾಗಿ ನಡೆದುಕೊಳ್ಳತಕ್ಕದೆಂದೂ; ತಿಳಿದೂ ಲೋಪ ಮಾಡಿದರೆ ದೇವರ ಕೋಪಕ್ಕೆ ಅಂಥವರೇ ತುತ್ತಾಗುವರೆಂದು ಸೂಚ್ಯವಾಗಿ ಎಚ್ಚರಿಸಲಾಯಿತು.

ಮಾಡು ಅಪ್ರಸ್ತುತ : ತಲಕಾವೇರಿಯ ಬ್ರಹ್ಮಕುಂಡಿಕೆಗೆ ಮಾಡು ನಿರ್ಮಾಣ ಅಪ್ರಸ್ತುತವೆಂದೂ, ಅರ್ಚನೆ ಇತ್ಯಾದಿಯನ್ನು ಸನ್ನಿಧಿ ಅರ್ಚಕರು ಪೌಳಿಯಲ್ಲಿ ಭಕ್ತರಿಗೆ ನಡೆಸಿಕೊಡಬೇಕೆಂದು ಸೂಚಿಸಲಾಯಿತು.

ಮಳೆ ವೇಳೆ ಅನಿವಾರ್ಯ ಸಂದರ್ಭ ಕುಂಡಿಕೆ ಬಳಿ ನಿಲ್ಲುವ ಅರ್ಚಕ ಸಿಬ್ಬಂದಿ ಗೊರಗ (ಕೊರಂಬಕೊಡೆ) ಬಳಸುವದು ಸೂಕ್ತವೆಂದು ಸಲಹೆ ಕೇಳಿ ಬಂತು.

ಐಕ್ಯಮತ್ಯ ಅಗತ್ಯ : ಕ್ಷೇತ್ರದ ಅರ್ಚಕರು; ಹಾಲೀ ತಕ್ಕ ಮುಖ್ಯಸ್ಥರೊಂದಿಗೆ ಪರಂಪರಾಗತ ಕಾರ್ಯನಿರ್ವಹಿಸುತ್ತಿದ್ದ ಮಣವಟೀರ ಹಾಗೂ ಮಂಡೀರ ಕುಟುಂಬಸ್ಥರು ಪೂರ್ವಜರ ದೋಷ ನಿವಾರಣೆ ಮಾಡಿಕೊಂಡು ಪರಸ್ಪರ ಒಗ್ಗೂಡಿ ದೈವಿಕ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವಂತೆ ತಿಳಿ ಹೇಳಲಾಯಿತು. ಯಾವದೇ ತೀರ್ಮಾನಗಳಲ್ಲಿ ದೈವಜ್ಞರ ಸಲಹೆ ಹಾಗೂ ಕ್ಷೇತ್ರ ತಂತ್ರಿಗಳ ಸಲಹೆಯಂತೆ ಮುಂದುವರಿಯಲು ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ನಿವೃತ್ತಿ ರಾಶಿ ಶುಭ ಫಲ : ಅಗಸ್ತ್ಯೇಶ್ವರ ಗುಡಿ ಸಂಬಂಧ ಪ್ರಶ್ನೆಯಲ್ಲಿ ಹಾಗೂ ಅಷ್ಟಮಂಗಲದ ಕೊನೆಯ ಹಂತದಲ್ಲಿ ನಿವೃತ್ತಿ ರಾಶಿ ಧನು ಶುಭಕಾರಕ ಲಕ್ಷಣ ಗೋಚರಿಸುವದರೊಂದಿಗೆ; ಎಲ್ಲ ಅಭಿವೃದ್ಧಿ; ದೋಷ ಪರಿಹಾರ ಕಾರ್ಯಗಳು, ಅಗಸ್ತ್ಯೇಶ್ವರನ ಪುನರ್‍ಪ್ರತಿಷ್ಠಾಪನೆ ಹಾಗೂ ಭೂಗತ ಬಿಂಬ ವಿಸರ್ಜನೆಯು ಸರ್ವರ ಸಹಕಾರದಿಂದ ನೆರವೇರುವ ಮಂಗಲಕರ ಸಂದೇಶ ಲಭ್ಯವಾಯಿತು.

ಕೊಡಗಿನ ವಿವಿಧೆಡೆಗಳಿಂದ ಆಗಮಿಸಿದ್ದ ಸದ್ಭಕ್ತರ ಸಹಿತ ವಿವಿಧ ಜನಾಂಗಗಳ ಪ್ರಮುಖರು ದೈವಜ್ಞ ನಾರಾಯಣ ಪೂದುವಾಳ್ ಬಳಗ; ನೀಲೇಶ್ವರ ಪದ್ಮನಾಭ ತಂತ್ರಿಗಳು; ಅರ್ಚಕ ಕುಟುಂಬಸ್ಥರು, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿದಂತೆ ನೆರೆದಿದ್ದ ಸರ್ವರಿಗೆ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ವಂದನೆ ಸಲ್ಲಿಸಿದರು.