ಕೂಡಿಗೆ, ಜೂ. 19: ಜಿಲ್ಲೆಯ ಪ್ರವಾಸಿ ತಾಣ ವಾದ ದುಬಾರೆ ಸಾಕಾನೆ ಶಿಬಿರಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸಾಕಾನೆ ಶಿಬಿರಕ್ಕೆ ತೆರಳಲು ಅರಣ್ಯ ಇಲಾಖೆಯ 2 ಬೋಟ್ಗಳು ಈಗಾಗಲೇ ಇದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಇಲಾಖೆಯ ವತಿಯಿಂದ ಮುಂದಿನ ವಾರದಿಂದ ಇನ್ನೆರಡು ಬೋಟ್ಗಳ ವ್ಯವಸ್ಥೆ ಮಾಡಲಾಗು ವದು ಎಂದು ಅರಣ್ಯ ಸಂರಕ್ಷಣಾಧಿ ಕಾರಿ ಡಿ.ಎಲ್. ಮಂಜುನಾಥ್ ಕೂಡಿಗೆಯಲ್ಲಿ ತಿಳಿಸಿದ್ದಾರೆ.
ಈ ಪ್ರವಾಸಿ ತಾಣದಲ್ಲಿ ಖಾಸಗಿಯವರು ಬೋಟ್ ನಡೆಸಲು ನಿರ್ಭಂದ ಹೇರಿದ್ದು, ಅರಣ್ಯ ಇಲಾಖೆಯ ವತಿಯಿಂದ ಪ್ರವಾಸಿಗರಿಗೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಾಕಾನೆ ಶಿಬಿರಕ್ಕೆ ತೆರಳಲು ಅನುಕೂಲ ವಾಗುವಂತೆ ಈಗಾಗಲೇ 2 ಬೋಟ್ಗಳು ಇವೆ. ಅವುಗಳ ಜೊತೆಗೆ ಎರಡು ಹೊಸ ಬೋಟ್ಗಳನ್ನು ನಡೆಸಲು ಚಿಂತಿಸಿದ್ದು, ಸದ್ಯದಲ್ಲೇ ಹೊಸ ಬೋಟ್ ವ್ಯವಸ್ಥೆ ಕಲ್ಪಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡ ಲಾಗುವದು ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ದೂರಿನನ್ವಯ ಎರಡು ಕಾಡಾನೆಗಳನ್ನು ಹಿಡಿಯಲು ಸರಕಾರದಿಂದ ಆದೇಶ ಬಂದಿದೆ. ಸುಂಟಿಕೊಪ್ಪ ವಲಯದ ಮೋದೂರು ಮತ್ತು ಹೊದ್ದೂರು ವ್ಯಾಪ್ತಿಯಲ್ಲಿನ ಕಾಡಾನೆಗಳನ್ನು ಹಿಡಿಯಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವದು. ಕಾಡಾನೆಗಳನ್ನು ಹಿಡಿಯಲು ಬೇಕಾಗುವ ಅರಿವಳಿಕೆ ಮದ್ದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದು, ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ನಿಯಮಾನುಸಾರ ರಾಜ್ಯ ಸರ್ಕಾರಕ್ಕೆ ಬಂದ ನಂತರ ಆನೆಗಳನ್ನು ಹಿಡಿಯಲು ಮುಂದಾಗುವದಾಗಿ ತಿಳಿಸಿದರು.
- ಕೆ.ಕೆ. ನಾಗರಾಜಶೆಟ್ಟಿ.