ಬೆಂಗಳೂರು, ಜೂ. 19: ಕೇಂದ್ರ ವಾಣಿಜ್ಯ ಸಚಿವಾಲಯ ಭಾರತಕ್ಕೆ ಆಮದು ಕರಿಮೆಣಸಿನ ಸಾಗಾಣೆಗೆ ಕೆಲವು ನಿಯಮಗಳ ಮೂಲಕ ಸಾಕಷ್ಟು ನಿರ್ಬಂಧವಿಧಿಸಿದ್ದರೂ ಇಂಡಿಯಾ ಪ್ರಾಡಕ್ಟ್ಸ್ ಸೇರಿದಂತೆ ಕೆಲವು ವರ್ತಕರು ನಿಯಮ ಗಾಳಿಗೆ ತೂರಿ ಕರಿಮೆಣಸನ್ನು ದೇಶಕ್ಕೆ ಆಮದು ಮಾಡಿಕೊಳ್ಳುವ ಮೂಲಕ ವಾಣಿಜ್ಯ ಸಚಿವಾಲಯಕ್ಕೆ ವಂಚಿಸುತ್ತಿದ್ದಾರೆ. ಇಂಥ ಉದ್ಯಮಿಗಳ ವಿರುದ್ಧ ತಾ. 21 ರಂದು ಬೆಂಗಳೂರಿನಲ್ಲಿ ಕರ್ನಾಟಕದ ಕರಿಮೆಣಸು ಬೆಳೆಗಾರ ಜಿಲ್ಲೆಗಳ ಬೆಳೆಗಾರರಿಂದ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ತಿಳಿಸಿದೆ.

ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ಕೊಂಕೋಡಿ ಪದ್ಮನಾಭ ಮತ್ತು ಸಂಚಾಲಕ ಕೆ.ಕೆ. ವಿಶ್ವನಾಥ್ ಈ ಕುರಿತು ಪತ್ರಿಕಾ ಮಾಹಿತಿ ನೀಡಿದ್ದಾರೆ.

ವಿಯೆಟ್ನಾಂನಿಂದ ಈ ವರ್ಷದ ಮೇ ನಲ್ಲಿ ಬೆಂಗಳೂರಿನ ಇಂಡಿಯಾ ಪ್ರಾಡಕ್ಟ್ಸ್ ಹೆಸರಿನ ಸಂಸ್ಥೆಯೊಂದು ದೇಶಕ್ಕೆ ಆಮದಾದ ಕರಿಮೆಣಸು ಪೈಕಿ ಶೇ. 28 ರಷ್ಟು ಕರಿಮೆಣಸನ್ನು ಆ ದೇಶದಲ್ಲಿ ಸಿಗುತ್ತಿರುವ ಬೆಲೆಗಿಂತ ಹೆಚ್ಚುವರಿ ದರ ನಮೂದಿಸಿ, ಭಾರತದ ವಾಣಿಜ್ಯ ಸಚಿವಾಲಯದ ನಿಯಮಗಳನ್ನೇ ವಂಚಿಸಿ ನಿಯಮಬಾಹಿರವಾಗಿ ಭಾರತಕ್ಕೆ ಆಮದು ಮಾಡಿಕೊಂಡು ವಹಿವಾಟು ನಡೆಸಿದೆ. ಕರಿಮೆಣಸು ಬೆಳೆಗಾರರಿಗೆ ಕಂಟಕವಾಗಿರುವ. ಇಂಥ ಉದ್ಯಮಿ ವಿರುದ್ಧ ಕರಿಮೆಣಸು ಬೆಳೆಗಾರರು ಒಂದಾಗಿ ಹೋರಾಟದ ಮೂಲಕ ಎಚ್ಚರಿಕೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ತಾ. 21 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಬೆಳೆಗಾರರು ಸೇರಿ ಇಂಡಿಯಾ ಪ್ರಾಡಕ್ಟ್ಸ್ ಸಂಸ್ಥೆಯ ವಿರುದ್ಧ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಿ ಪ್ರತಿಭಟನೆಗೆ ಮುಂದಾಗಲಿದ್ದಾರೆ ಎಂದು ಸಮನ್ವಯ ಸಮಿತಿ ತಿಳಿಸಿದೆ. ಇಂಡಿಯಾ ಪ್ರಾಡಕ್ಟ್ಸ್ ಸಂಸ್ಥೆಯ ಕಾನೂನು ಬಾಹಿರ ವಹಿವಾಟಿಗೆ ಸಂಬಂಧಿಸಿದಂತೆ ಇದೇ ಸಂದರ್ಭ ಎಚ್ಚರಿಕೆಯನ್ನೂ ನೀಡಿ ನಿಯಮಬಾಹಿರ ಕರಿಮೆಣಸು ಆಮದು ವಹಿವಾಟನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಲಾಗುತ್ತದೆ

ಕಳೆದ ವರ್ಷ ಇದೇ ಅವಧಿಯಲ್ಲಿ ಕೆ.ಜಿ.ಗೆ. 550 ರೂ. ಬೆಲೆಯಿದ್ದ ಕರಿಮೆಣಸು ಬೆಳೆಗೆ ಪ್ರಸ್ತುತ, 330 ರೂ. ಮಾತ್ರವಿದೆ. ಈ ದರ ಕುಸಿತದ ಬಗ್ಗೆ ಕಳೆದ ನವೆಂಬರ್‍ನಲ್ಲಿ ವಾಣಿಜ್ಯ ಸಚಿವಾಲಯದ ಗಮನವನ್ನು ಸೆಳೆದ ಸಂದರ್ಭ ಕೂಡಲೇ ಮಧ್ಯ ಪ್ರವೇಶಿಸಿದ ಸಚಿವಾಲಯವು ಆಮದಾದ ಕರಿಮೆಣಸಿನ ಮೇಲೆ ಕೆ.ಜಿ.ಗೆ 500 ರೂ. ಕನಿಷ್ಟ ಆಮದು ಶುಲ್ಕ ವಿಧಿಸುವ ತೀರ್ಮಾನ ಕೈಗೊಂಡಿತ್ತು. ಅಂತೆಯೇ ಈವರೆಗೂ 3 ಪ್ರಮುಖ ಆದೇಶಗಳನ್ನು ಈ ಸಂಬಂಧ ಜಾರಿಗೊಳಿಸಿತ್ತು. ಹೀಗಿದ್ದರೂ ಬೆಂಗಳೂರಿನ ಇಂಡಿಯಾ ಪ್ರಾಡಕ್ಟ್ಸ್ ಸಂಸ್ಥೆ ನಿಯಮ ಮೀರಿ ಆಮದು ಕರಿಮೆಣಸನ್ನು ಭಾರತಕ್ಕೆ ತರುತ್ತಿದೆ. ಹೀಗಾಗಿ ಕರಿಮೆಣಸು ಉದ್ಯಮದ ಮೇಲಿನ ಕರಿನೆರಳು ಕಣ್ಮರೆಯಾಗದೆ ಬೆಳೆಗಾರರು ಸೂಕ್ತ ಬೆಲೆ ಸಿಗದೆ ಸಂಕಷ್ಟದಲ್ಲಿಯೇ ಇರುವಂತಾಗಿದೆ.

ಭಾರತದಲ್ಲಿ ಬೆಳೆಯಲ್ಪಡುವ ಕರಿಮೆಣಸು ವಿಶ್ವದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಕರಿಮೆಣಸಾಗಿದ್ದು, ಹೀಗಿದ್ದರೂ ವಿದೇಶದಿಂದ ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ಕರಿಮೆಣಸನ್ನು ಭಾರತಕ್ಕೆ ಆಮದು ಮಾಡಿಕೊಂಡು ಭಾರತದ ಉತ್ಕ್ರಷ್ಟ ದರ್ಜೆಯ ಕರಿಮೆಣಸಿನೊಂದಿಗೆ ಮಿಶ್ರಣಗೊಳಿಸಿ ಮಾರಾಟ ಮಾಡುವ ದಂಧೆಗೆ ಕಡಿವಾಣ ಹಾಕಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರಿಮೆಣಸು ಬೆಳೆಗಾರರು ಒಂದಾಗಿ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಭಾರತದ ಕರಿಮೆಣಸು ಉದ್ಯಮಕ್ಕೇ ಸಂಚಕಾರ ತರುತ್ತಿರುವ ಉದ್ಯಮಿಗಳಿಗೆ ಎಚ್ಚರಿಕೆ ನೀಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಸಮನ್ವಯ ಸಮಿತಿ ತಿಳಿಸಿದೆ.

ವಾಣಿಜ್ಯ ಸಚಿವಾಲಯ ರೂಪಿಸಿದ ನಿಯಮಗಳಲ್ಲಿನ ಕೆಲವೊಂದು ಸಣ್ಣ ಪುಟ್ಟ ಲೋಪಗಳನ್ನು ಉಪಯೋಗಪಡಿಸಿಕೊಂಡು ಇಂಥ ಸಂಸ್ಥೆಗಳು ವಿದೇಶದಲ್ಲಿನ ದರಕ್ಕಿಂತ ಹೆಚ್ಚಿನ ದರವನ್ನು ನಮೂದಿಸಿ ಭಾರತಕ್ಕೆ ಆಮದು ಕರಿಮೆಣಸು ತರಿಸಿಕೊಂಡು ವಹಿವಾಟನ್ನು ಎಗ್ಗಿಲ್ಲದೇ ನಡೆಸುತ್ತಿವೆ. ಇಂಥ ನಿಯಮಬಾಹಿರ ವಹಿವಾಟಿಗೆ ಕಡಿವಾಣ ಹಾಕದೇ ಇದ್ದಲ್ಲಿ ಕರಿಮೆಣಸು ಬೆಳೆಗೆ ಸೂಕ್ತ ಬೆಲೆ ದೊರಕುವದು ಕಷ್ಟ ಸಾಧ್ಯ ಎಂದು ಸಮನ್ವಯ ಸಮಿತಿ ತಿಳಿಸಿದೆ.

ಕಾಫಿ ಬೆಳೆಯ ಬೆಲೆ ಕೂಡ ಕುಸಿದಿರುವ ಇಂದಿನ ದಿನಗಳಲ್ಲಿ ಬೆಳೆಗಾರರ ಪಾಲಿಗೆ ಪರ್ಯಾಯ ಆರ್ಥಿಕ ಕೃಷಿ ಚೈತನ್ಯವಾದ ಕರಿಮೆಣಸಿಗೂ ಬೆಲೆ ಹೆಚ್ಚಳವಾಗದೇ ಇರುವದರಿಂದಾಗಿ ಕರಿಮೆಣಸು ಬೆಳೆಗಾರರು ಚಿಂತಿತರಾಗಿದ್ದಾರೆ. ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಕರಿಮೆಣಸು ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಹೋರಾಟ ಕೈಗೊಳ್ಳಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.