ಮಡಿಕೇರಿ, ಜೂ. 18: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರೊಂದಿಗೆ ಜಗಳವಾಡಿ ಹಲ್ಲೆ ಮಾಡಿದ ಆರೋಪದಡಿ ಮೂವರು ಯುವಕರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ ರಾತ್ರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮದ್ಯಪಾನ ಮಾಡಿ ನಿಂತಿದ್ದ ಬಿಳಿಗೇರಿ ಜಂಕ್ಷನ್ ನಿವಾಸಿ, ಆಕಾಶ್ (22), ಮಂಗಳಾದೇವಿನಗರದ ಸುಮನ್ (23) ಹಾಗೂ ದೇಚೂರುವಿನ ಧನುಷ್ (22) ಇವರುಗಳನ್ನು ಕರ್ತವ್ಯದಲ್ಲಿದ್ದ ನಗರಠಾಣೆಯ ಪೇದೆ ಶಿವರಾಮ್ ದೋಪೆ ಎಂಬವರು ಪ್ರಶ್ನಿಸಿ ತಡರಾತ್ರಿಯಾಗಿದ್ದು, ಮನೆಗೆ ತೆರಳುವಂತೆ ಸೂಚಿಸಿದ್ದಾರೆ.
ಇದಕ್ಕೆ ಮೂವರು ಯುವಕರು ಪ್ರತಿರೋಧವೊಡ್ಡಿ ಶಿವರಾಂ ಅವರೊಂದಿಗೆ ಜಗಳಕ್ಕಿಳಿದಿದ್ದಾರೆ. ಈ ವೇಳೆ ಆಕಾಶ್ ಕಲ್ಲಿನಿಂದ ಪೇದೆಯ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡ ಪೇದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಪೇದೆಯೊಂದಿಗಿದ್ದ ಹೋಂಗಾರ್ಡ್ ಚೇತನ್ ಎಂಬವರ ದೂರಿನ ಮೇರೆಗೆ ಪೊಲೀಸರು ಆಕಾಶ್, ಸುಮನ್, ಧನುಷ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.