ಹೆಬ್ಬಾಲೆ ಜೂ.19 : ಸೋಮವಾರಪೇಟೆ ತಾಲೂಕಿನ ಬಾಣಾವಾರ ಉಪ ವಲಯದ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಆಲದಮರ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಕಾಡಾನೆಗಳ ಹಿಂಡು ರೈತರ ಜಮೀನಿಗೆ ಲಗ್ಗೆ ಹಾಕಿ ದಾಂಧಲೆ ನಡೆಸಿದ್ದು, ಅರಣ್ಯ ರಕ್ಷಕರು ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಗಡಿಭಾಗವಾದ ಅರಣ್ಯ ಪ್ರದೇಶದಿಂದ ಎರಡು ಮರಿಯಾನೆ ಸೇರಿದಂತೆ 5 ಕಾಡಾನೆಗಳ ಹಿಂಡು ರೈತರ ಜಮೀನಿಗೆ ನುಗ್ಗಿದ ಪರಿಣಾಮ ರೈತರು ಬೆಳೆದಿದ್ದ ಸುವರ್ಣ ಗೆಡ್ಡೆ, ಶುಂಠಿ ಕೃಷಿ ಹಾನಿಯಾಗಿ ನಷ್ಟ ಉಂಟಾಗಿದೆ.

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಕಾಡಂಚಿನಲ್ಲಿ ಕಂದಕ ನಿರ್ಮಾಣ ಮಾಡಿ, ಜೊತೆಗೆ ಸೋಲಾರ್ ತಂತಿ ಬೇಲಿ ಕೂಡ ನಿರ್ಮಿಸಿದ್ದಾರೆ. ಆದರೆ ಈ ಆನೆಗಳು ತಮ್ಮ ಎರಡು ತಿಂಗಳ ಎರಡು ಮರಿಯಾನೆಗಳೊಂದಿಗೆ ಹತ್ತು ಆಳದ ಕಂದಕ ಹಾಗೂ ಸೋಲಾರ್ ದಾಟಿ ಬರುವ ಮೂಲಕ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿವೆ. ಅರಣ್ಯ ಇಲಾಖೆಯವರು ಏನೇ ಸಾಹಸ ಮಾಡಿದರು.ಕಾಡಾನೆಗಳ ಹಾವಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆನೆಗಳು ಧಾಳಿ ಮಾಡಿರುವ ವಿಷಯವನ್ನು ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಬಾಣಾವಾರ ಮತ್ತು ಅರಕಲಗೂಡು ವಲಯದ ಅರಣ್ಯ ಸಿಬ್ಬಂದಿಗಳು ಆಗಮಿಸಿ ಜಂಟಿ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.

ಕಾಡಾನೆಗಳ ಹಿಂಡನ್ನು ನೋಡಲು ಜಮಾಯಿಸಿ ಜನರು ಜೋರಾಗಿ ಕೂಗುತ್ತ ಆನೆಗಳ ಕಡೆಗೆ ಕಲ್ಲು ಎಸೆಯಲು ಆರಂಭಿಸಿದರು.ಇದರಿಂದ ಆನೆಗಳು ಹೆದರಿ ಅಡ್ಡದಿಡ್ಡಿಯಾಗಿ ಓಡಾಡಲು ಆರಂಭಿಸಿದವು. ಇದರಿಂದ ಅರಣ್ಯ ಸಿಬ್ಬಂದಿಗಳಿಗೆ ಸ್ವಲ್ಪ ತೊಂದರೆ ಉಂಟಾಯಿತು. ಆನೆಗಳನ್ನು ಓಡಿಸಲು ಹರಸಾಹಸ ಪಡಬೇಕಾಯಿತು. ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಸಿಬ್ಬಂದಿಗಳು ಪಟಾಕಿ ಸಿಡಿಸಿ ಬೆದರಿಸುವ ಮೂಲಕ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.

ಕಾರ್ಯಾಚರಣೆಯಲ್ಲಿ ಬಾಣಾವಾರ ವಲಯದ ಸಿಬ್ಬಂದಿಗಳಾದ ಎಚ್.ಕೆ.ವೀರಪ್ಪ,ವರುಣ್ ಕುಮಾರ್,ಬುದ್ದೇಶ್,ಈಶ್ವರ, ಅರಕಲಗೋಡು ವಲಯದ ಎಂ.ಎಸ್.ಶಿವಾನಂದ,ರಾಘವೇಂದ್ರ, ದೇವೇಂದ್ರ, ನಾಗೇಶ್ ಮತ್ತಿತರರು ಪಾಲ್ಗೊಂಡಿದ್ದರು.