ಸೋಮವಾರಪೇಟೆ,ಜೂ.19: ಪಟ್ಟಣದ ಮಧ್ಯಭಾಗದಲ್ಲಿರುವ ಮಾರುಕಟ್ಟೆಯನ್ನು ಆಲೇಕಟ್ಟೆ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿ ದರೆ ಪಟ್ಟಣದಲ್ಲಿ ವಾಹನ ಸಂಚಾರ, ನಿಲುಗಡೆ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಪ. ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಈಗಿನ ಮಾರುಕಟ್ಟೆಯಿಂದ ಪ.ಪಂ.ಗೆ ವಾರ್ಷಿಕ ಕೇವಲ 5ಲಕ್ಷ ಮಾತ್ರ ಆದಾಯ ಬರುತ್ತಿದ್ದು, ಇದೇ ಸ್ಥಳದಲ್ಲಿ ಅತ್ಯಾಧುನಿಕ ರೀತಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದರೆ ಪಂಚಾಯಿತಿಗೆ ಹೆಚ್ಚಿನ ಆದಾಯ ಬರುತ್ತದೆ. ಈ ಕುರಿತು ರಾಜ್ಯ ಪೌರಾಡಳಿತ ಸಚಿವರಿಗೂ ಪತ್ರ ಬರೆದು ಮನವಿ ಮಾಡಿಕೊಳ್ಳುವಂತೆ ಸಭೆಯಲ್ಲಿದ್ದ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸೂಚನೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಹಲವಷ್ಟು ಮನೆ ಮತ್ತು ತಡೆಗೋಡೆ ಕುಸಿತದಿಂದ ನಷ್ಟ ಸಂಭವಿಸಿದೆ. ತಕ್ಷಣ ಕಂದಾಯ ಇಲಾಖೆಯ ಮೂಲಕ ಸ್ಥಳ ಪರಿಶೀಲನೆ ನಡೆಸಿ, ಇಲಾಖಾ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.
ಭಾರೀ ಮಳೆಗೆ ಆನೆಕೆರೆಯ ಆವರಣ ಗೋಡೆ ಕುಸಿದು ಬಿದ್ದು ಅಪಾಯದ ಮುನ್ಸೂಚನೆ ಇದ್ದರೂ, ಅಭಿಯಂತರರು ಅದನ್ನು ಸರಿ ಪಡಿಸಲು ಮುಂದಾಗಿಲ್ಲ ಎಂದು ಸದಸ್ಯೆ ಶೀಲಾ ಡಿಸೋಜ ಆರೋಪಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ವೀರೇಂದ್ರ, ನಾಳೆ ಯಿಂದಲೇ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು 151 ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದರೂ, 31 ಮಳಿಗೆಗಳು ಖಾಲಿ ಇವೆ. ಮುಕ್ತ ಟೆಂಡರ್ನಲ್ಲಿ ಭಾಗವಹಿಸಿದವರು ಮುಂಗಡ ಮತ್ತು ಬಾಡಿಗೆ ಹಣ ಹೆಚ್ಚಾಗಿರುವದರಿಂದ ಮಳಿಗೆಗಳನ್ನು ಪಡೆಯಲು ಆಸಕ್ತಿ ವಹಿಸುತ್ತಿಲ್ಲ ಎಂದು ಸದಸ್ಯರಾದ ಶೀಲಾ ಡಿಸೋಜ, ಬಿ.ಜಿ.ಇಂದ್ರೇಶ್ ಶಾಸಕರ ಗಮನ ಸೆಳೆದರು.
ಸರಕಾರದ ನೀತಿ ನಿಯಮಗಳಿಗೆ ಹೊಂದಿಕೊಳ್ಳುವ ಹಾಗೆ ಮುಂಗಡ ಹಣದಲ್ಲಿ ರಿಯಾಯಿತಿ ಹಾಗೂ ಬಾಡಿಗೆ ದರವನ್ನು ಕಡಿಮೆ ಮಾಡಿ ವರ್ತಕರಿಗೆ ಮಳಿಗೆ ಹಂಚಲು ಕ್ರಮಕೈಗೊಳ್ಳಬೇಕು. ಪಂಚಾಯಿತಿಯ ಆದಾಯ ವೃಥಾ ಪೋಲಾಗದಂತೆ ಎಚ್ಚರಿಕೆ ವಹಿಸಬೇಕೆಂದು ಮುಖ್ಯಾದಿ üಕಾರಿಗೆ ನಿರ್ದೇಶನ ನೀಡಿದರು.
ನಿರ್ವಹಣೆಯಿಲ್ಲದೇ ಪಟ್ಟಣ ದಲ್ಲಿರುವ ಎರಡು ಉದ್ಯಾನವನಗಳು ದುಸ್ಥಿತಿಯಲ್ಲಿವೆ ಎಂದು ಸದಸ್ಯ ಬಿ.ಜಿ.ಇಂದ್ರೇಶ್ ಗಮನ ಸೆಳೆದರು. ವೆಂಕಟೇಶ್ವರ ಬಡಾವಣೆಯಲ್ಲೂ ಉದ್ಯಾನವನ ನಿರ್ಮಾಣಕ್ಕೆ ಸ್ಥಳಾವಕಾಶ ಇದ್ದು, ಅಲ್ಲಿ ಉದ್ಯಾನವನ ನಿರ್ಮಾಣ ಮಾಡುವಂತೆ ವಾರ್ಡ್ ಸದಸ್ಯೆ ಮೀನಾಕುಮಾರಿ ಮನವಿ ಮಾಡಿದರು. ನೂತನ ಉದ್ಯಾನವನ ನಿರ್ಮಾಣ ಮತ್ತು ಆನೆಕೆರೆ ಸಮೀಪ ಹಾಗೂ ಮಹದೇಶ್ವರ ಬಡಾವಣೆಯಲ್ಲಿರುವ ಉದ್ಯಾನವನಗಳ ನಿರ್ವಹಣೆಗೆ ಟೆಂಡರ್ ಕರೆಯುವಂತೆ ಶಾಸಕರು ಹೇಳಿದರು.
ಜನತಾ ಕಾಲೋನಿಯಲ್ಲಿ ಹಲವಾರು ಮನೆಗಳಿಗೆ ಸೂಕ್ತ ದಾಖಲಾತಿ ಇಲ್ಲ. ಇದರಿಂದಾಗಿ ಮನೆಯನ್ನು ಮಾರಾಟ ಮಾಡಿದವರಿಗೆ ಹಾಗೂ ಪರಭಾರೆ ಮಾಡಿಕೊಂಡ ವರಿಗೆ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಸದಸ್ಯ ಬಿ.ಎಂ. ಸುರೇಶ್ ಮನವಿ ಮಾಡಿದರು.
ಅಂಬೇಡ್ಕರ್ ಭವನಕ್ಕೆ ನೆಲಹಾಸು ಹಾಕಲು ಕಾರ್ಯಾದೇಶ ಪತ್ರ ನೀಡಲಾಗಿತ್ತು. ನಂತರ ನೀತಿ ಸಂಹಿತೆಯ ನೆಪವೊಡ್ಡಿ ಕೆಲಸ ನಿಲ್ಲಿಸಲಾಗಿತ್ತು. ಆದರೆ ಇದುವರೆಗೂ ನೆಲಹಾಸು ಹಾಕಲು ಗುತ್ತಿಗೆದಾರ ಆಸಕ್ತಿ ವಹಿಸುತ್ತಿಲ್ಲ ಎಂದು ಸದಸ್ಯೆ ಮೀನಕುಮಾರಿ ಸಭೆಯ ಗಮನ ಸೆಳೆದರು.
2018-19ನೇ ಸಾಲಿನ ಪಟ್ಟಣ ಪಂಚಾಯಿತಿ ನಿಧಿಯಡಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸುವ ಕುರಿತು ಚರ್ಚಿಸಲಾಯಿತು. ಪಟ್ಟಣ ಪಂಚಾಯಿತಿ ನಿಧಿ ಹಾಗೂ ಉದ್ದಿಮೆ ನಿಧಿಯಡಿ ಕೈಗೊಳ್ಳಲು ಉದ್ದೇಶಿ¸ Àಲಾಗಿರುವ ಕಾಮಗಾರಿಗಳಿಗೆ ಕರೆಯಲಾಗಿರುವ ಟೆಂಡರನ್ನು ಅನುಮೋದಿಸುವಂತೆ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರಾದ ಲೀಲಾ ನಿರ್ವಾಣಿ, ಸುರೇಶ್, ಸುಶೀಲ, ಈಶ್ವರ್, ವೆಂಕಟೇಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಸಿಬ್ಬಂದಿಗಳು ಉಪಸ್ಥಿತರಿದ್ದರು.