ಸೋಮವಾರಪೇಟೆ, ಜೂ. 19: ಇಲ್ಲಿನ ಪ.ಪಂ.ನ 11 ವಾರ್ಡ್‍ಗಳ ಮೀಸಲಾತಿಗೆ ಸಂಬಂಧಿಸಿದಂತೆ ಮೂರು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಮಹದೇಶ್ವರ ಬ್ಲಾಕ್‍ನ 9ನೇ ವಾರ್ಡ್‍ನ ಮೀಸಲಾತಿಯು ಬಿಸಿಎಂ(ಬಿ) ಮೀಸಲಾಗಿದೆ. ಆದರೆ ಈ ಹಿಂದಿನ ಎರಡೂ ಅವಧಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ 2001ರಲ್ಲಿ ಇದೇ ವಾರ್ಡ್‍ಗೆ ಮೀಸಲಾತಿಯು ಬಿಸಿಎಂ(ಬಿ) ನಿಗದಿಯಾಗಿತ್ತು. ನಂತರ ಮತ್ತೆ ಅದೇ ವರ್ಗಕ್ಕೆ ಮೀಸಲಾಗಿದೆ ಎಂದು ವಾರ್ಡ್‍ನ ನಿವಾಸಿ ಕೆ.ಎನ್.ಸುದೀಪ್ ಅವರು ಮುಖ್ಯಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಅಲ್ಲದೇ ಈ ಬಾರಿ ಸಾಮಾನ್ಯ ಅಥವಾ ಬಿಸಿಎಂ(ಎ) ವರ್ಗಕ್ಕೆ ಮೀಸಲಾತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಪಟ್ಟಣದ 3ನೇ ವಾರ್ಡ್‍ಗೆ ಸಂಬಂಧಿಸಿದಂತೆ ಬಿಸಿಎಂ(ಎ) ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಆದರೆ ಕಳೆದ ಬಾರಿ ಪರಿಶಿಷ್ಟ (ಮಹಿಳೆ) ಇದ್ದು, ಪರಿಶಿಷ್ಟ ಜಾತಿ ಮಹಿಳೆಯರು ಯಾವ ವಾರ್ಡ್‍ನಲ್ಲಿಯೂ ಸ್ಪರ್ಧಿಸಲು ಅವಕಾಶ ಕಲ್ಪಿಸಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚು ಪರಿಶಿಷ್ಟ ವರ್ಗಗಳ ಜನರು ಇರುವ ವೆಂಕಟೇಶ್ವರ ಬ್ಲಾಕ್ ಅನ್ನು ಸಾಮಾನ್ಯ ಮಹಿಳೆ ಇಲ್ಲವೇ ಸಾಮಾನ್ಯ ವರ್ಗಕ್ಕೆ ಮೀಸಲಾಗಿಸಬೇಕೆಂದು ಹಾಲಿ ಪಟ್ಟಣ ಪಂಚಾಯಿತಿ ಸದಸ್ಯೆ ಮೀನಾಕುಮಾರಿ ಮನವಿ ಮಾಡಿದ್ದಾರೆ.
ಪಟ್ಟಣದ ಮಾರ್ಕೆಟ್ ರಸ್ತೆಯ 11ನೇ ವಾರ್ಡ್‍ಗೆ ಮೀಸಲಾತಿಯು ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು, ಈ ಹಿಂದೆ ಇದೇ ವಾರ್ಡ್ ಸಂಖ್ಯೆ 6 ಇದ್ದಾಗಲೂ ಕಳೆದ ಎರಡು ಅವಧಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅದು ಮೂರನೇ ಬಾರಿಗೂ ಪುನರಾವರ್ತನೆಯಾಗಿದೆ ಎಂದು 11ನೇ ವಾರ್ಡ್‍ನ ನಿವಾಸಿ ಎಸ್.ಸಂಪತ್ ಹಾಗೂ ನಾಗರಿಕರು ತಹಶೀಲ್ದಾರ್‍ರವರ ಮುಖಾಂತರ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.
ಅಲ್ಲದೇ ವಾರ್ಡ್‍ನ ಮೀಸಲಾತಿಯನ್ನು ಬಿಸಿಎಂ(ಬಿ), ಬಿಸಿಎಂ(ಎ) ಅಥವಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿಸಬೇಕೆಂದು ಮನವಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಚುನಾವಣೆಯ ಮೀಸಲಾತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಆಕ್ಷೇಪಣೆಗಳೇ ನಾದರೂ ಇದ್ದಲ್ಲಿ ತಾ.21ರೊಳಗೆ ಸಲ್ಲಿಸಬಹುದಾಗಿದೆ.