ಮಡಿಕೇರಿ, ಜೂ. 19: ಕೊಡಗಿನ ಜನತೆಗೆ ಅನುಕೂಲವಾಗುವಂತೆ ಸೋಮವಾರಪೇಟೆಯಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮೀಪದ ಹಾದಿಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಲು, ತಾವು ವಿಶೇಷ ಗಮನ ಹರಿಸಿ ಕ್ರಮ ಕೈಗೊಳ್ಳುವದಾಗಿ ರಾಜ್ಯ ಸರಕಾರದ ನೂತನ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಪ್ರಕಟಿಸಿದರು. ಇಂದು ರಾತ್ರಿ ಜಿಲ್ಲೆಗೆ ಪ್ರಥಮ ಭೇಟಿ ನೀಡಿದ ಸಚಿವರು, ನಗರದ ಸುದರ್ಶನ ಅತಿಥಿ ಗೃಹದಲ್ಲಿ (ಮೊದಲ ಪುಟದಿಂದ) ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಜಿಲ್ಲೆಯ ಜನತೆಯ ಅನೇಕ ವರ್ಷಗಳ ಈ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಈಡೇರಿಸಲು ಪ್ರಯತ್ನಿಸುವೆ ಎಂದು ಆಶ್ವಾಸನೆ ನೀಡಿದರು.
ಈಗಾಗಲೇ ಮಡಿಕೇರಿ ಹಾಗೂ ಸಂಪಾಜೆ ನಡುವೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರ ಆ ಸಮಸ್ಯೆ ಬಗೆಹರಿಸುವದರೊಂದಿಗೆ, ಮುಂದೆ ಸುಳ್ಯ, ಮಾಣಿ, ಪುತ್ತೂರು, ಬಿಸಿ ರೋಡ್‍ವರೆಗೆ ಸುಗಮ ಸಂಚಾರ ವ್ಯವಸ್ಥೆ ಮುಂದುವರಿಯಲಿದೆ ಎಂದು ರೇವಣ್ಣ ವಿವರಿಸಿದರು. ಮೈಸೂರು ಮಡಿಕೇರಿ ರಸ್ತೆಯನ್ನು ಈಗಾಗಲೇ ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರಿಸಲಾಗಿದೆ. ಸದ್ಯದಲ್ಲಿಯೇ ಮಡಿಕೇರಿ - ಬಿಸಿ ರೋಡ್ ರಸ್ತೆ ಯನ್ನು ಹಸ್ತಾಂತರಿಸಲಾಗುತ್ತದೆ. ಬಳಿಕ ರಾಜ್ಯ ಸರ್ಕಾರವು ಪ್ರಾರಂಭಿಕ ‘‘ಸರ್ಫೇಸಿಂಗ್’’ ಕೆಲಸದಲ್ಲಿ ಕೈ ಜೋಡಿಸುತ್ತದೆ ಎಂದು ವಿವರಿಸಿದರು.
ಜಿಲ್ಲೆಯ ಗಡಿಗಳು ಸೇರಿದಂತೆ ಅನೇಕ ರಸ್ತೆಗಳ ಒಳಚರಂಡಿಗಳು ಮುಚ್ಚಿಕೊಂಡಿದ್ದು, ಮಳೆಯಿಂದ ಹಲವಷ್ಟು ಕಡೆಗಳಲ್ಲಿ ಗುಂಡಿಗಳಾಗಿವೆ ಎಂದು ಸಚಿವರ ಗಮನ ಸೆಳೆದಾಗ, ಈ ಬಗ್ಗೆ ನಾಳೆಯಿಂದಲೇ ತ್ವರಿತ ಗಮನ ಹರಿಸಿ ಸಾರ್ವಜನಿಕ ತೊಂದರೆ ತಪ್ಪಿಸಲು ಅಗತ್ಯ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸುವ ದಾಗಿ ನುಡಿದರು.
ನಾಳೆ ಟೆಂಡರ್: ಸಂಪಾಜೆ ಮಾರ್ಗದ ಕಲ್ಲುಗುಂಡಿ ಸೇತುವೆಯಲ್ಲಿ ಅಪಾಯ ತಪ್ಪಿಸಲು ನಾಳೆಯೇ ಟೆಂಡರ್ ಪ್ರಕ್ರಿಯೆ ಪೂರೈಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದ ರೇವಣ್ಣ, ಆದಷ್ಟು ಬೇಗ ಕೆಲಸ ಪ್ರಾರಂಭಿಸಬೇಕೆಂದು ಮರು ಆದೇಶಿಸಿದರು.
ದಕ್ಷಿಣ ಕೊಡಗಿನ ಮಾಕುಟ್ಟ ಹೆದ್ದಾರಿಯಲ್ಲಿ ಭೂಕುಸಿತ, ತಿತಿಮತಿ ಹೆದ್ದಾರಿ ಹಾನಿಗೊಂಡಿರುವ ಬಗ್ಗೆ ಈ ರಾತ್ರಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುವದರೊಂದಿಗೆ, ತಾ. 20 ರಂದು ಖುದ್ದು ಪರಿಶೀಲಿಸಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಕೂಡಲೇ ತೆರವು ಕಾರ್ಯಕ್ಕೆ ನಿರ್ದೇಶಿಸುವದಾಗಿ ಸ್ಪಷ್ಟಪಡಿಸಿದರು.
ಯು.ಜಿ.ಡಿ. ಸಮಸ್ಯೆ : ಮಡಿಕೇರಿಯ ರಸ್ತೆಗಳು ಯುಜಿಡಿ ಕೆಲಸದಿಂದ ಹಾಳಾಗಿರುವ ದುರವಸ್ಥೆ ಬಗ್ಗೆ ಸಚಿವರ ಗಮನ ಸೆಳೆದಾಗ ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವೆ ಎಂದರು.
ಪ್ರವಾಸಿ ಮಲೆನಾಡು ಜಿಲ್ಲೆ : ಕೊಡಗು ಮಲೆನಾಡು ಪ್ರದೇಶದೊಂದಿಗೆ ಪ್ರವಾಸಿ ಜಿಲ್ಲೆಯಾಗಿರುವ ಪರಿಣಾಮ ಸರಕಾರದಿಂದ ಹೆಚ್ಚಿನ ನಿಗಾವಹಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯ ಜನತೆ ರಸ್ತೆ, ವಿದ್ಯುತ್, ನೀರು ಹೊರತು ಬೇರೇನೂ ಅಪೇಕ್ಷಿಸ ಲಾರರೆಂದು ನೆನಪಿಸಿಕೊಂಡರು.
ಸಾಲ ಮನ್ನಾಕ್ಕೆ ಬದ್ಧ : ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಶಾಸಕರಾಗಿ ಆಯ್ಕೆಗೊಂಡಿರುವ ಎಲ್ಲರೂ ಸೇರಿ ಕರ್ನಾಟಕದ ಅಭಿವೃದ್ಧಿಗೆ ಸಹಕರಿಸುವ ಆಶಯ ವ್ಯಕ್ತಪಡಿಸಿದ ಸಚಿವರು, ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲರೂ ಸಮಾನರೆಂದು ಹಾಸ್ಯಮಿಶ್ರಿತ ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಜನಪ್ರತಿನಿಧಿಗಳಾಗಿ ಕೆಲಸ ಮಾಡುವ ಜವಾಬ್ದಾರಿಕೆ ಇದೆ ಎಂದರು. ರೈತರ ಸಾಲ ಮನ್ನಾಗೊಳಿಸಲು ಕುಮಾರ ಸ್ವಾಮಿ ಅವರನ್ನು ದೇವರು ಕೊಡುಗೆ ನೀಡಿದ್ದಾಗಿ ವ್ಯಾಖ್ಯಾನಿಸಿದ ಅವರು, ಸ್ವಲ್ಪ ಸಮಯ ಎಲ್ಲವನ್ನು ಕಾದು ನೋಡಿ ಎಂದರು. ರಾಜ್ಯದ 174 ತಾಲೂಕುಗಳಲ್ಲಿ ಬರದಿಂದ ಕಂಗೆಟ್ಟಿದ್ದಾರೆ. ಸಾಧ್ಯವಾದಷ್ಟು ಶೀಘ್ರ ರೈತರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಬದ್ಧವಾಗಿದ್ದಾರೆ ಎಂದರು.
ಬಜೆಟ್ ಮಂಡನೆ : ನೂತನ ಬಜೆಟ್ ಮಂಡನೆ ಕುರಿತಾದ ಪ್ರಶ್ನೆಗೆ ಒಂದು ವಾರ ಕಾದು ನೋಡಿ. ಗೊತ್ತಾಗುತ್ತದೆ ಎಂದು ನುಡಿದರು.
ಸಿದ್ದರಾಮಯ್ಯ ಆರಾಮ ಇದ್ದಾರೆ : ತಾವು ಚಾರ್ಮಾಡಿಘಾಟ್ ಹೆದ್ದಾರಿ ಕುಸಿತದೊಂದಿಗೆ ಜನತೆಯ ಸಂಕಷ್ಟ ನಿವಾರಿಸಲು ಅಲ್ಲಿ ಪರಿಶೀಲನೆ ನಡೆಸಲು ತೆರಳಿದ್ದು, ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಾಮ ಇದ್ದಾರೆ ಎಂದು ನಗು ಬೀರಿದರು. ಈ ಬಗ್ಗೆ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಮಾಧ್ಯಮಗಳ ಪ್ರಶ್ನೆಗೆ ತಿಳಿ ಹೇಳಿದರು. ಗೋಷ್ಠಿ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಉಪಸ್ಥಿತರಿದ್ದರು.
ಆ ಮುನ್ನ ಸಚಿವರನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಪಕ್ಷಗಳ ಕಾರ್ಯಕರ್ತರು ಸ್ವಾಗತಿಸಿ, ಬರಮಾಡಿಕೊಂಡರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಶಾಸಕ ಕೆ.ಜಿ. ಬೋಪಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಪ್ರಮುಖರಾದ ಕೆ.ಎಂ. ಗಣೇಶ್, ಸಂಜಯ್ ಜೀವಿಜಯ, ರಾಜೇಶ್‍ಯಲ್ಲಪ್ಪ, ಮನೋಜ್ ಬೋಪಯ್ಯ, ರಾಜಾರಾವ್, ಜಯಮ್ಮ ಮೊದಲಾದವರು ಹಾಜರಿದ್ದರು.
ಪತ್ರಿಕಾಗೋಷ್ಠಿಯ ಬಳಿಕ ಸಚಿವ ರೇವಣ್ಣ ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.