ಮನೆ ಹಾನಿಗೆ ಪರಿಹಾರ ವಿತರಣೆ ಸಂಬಂಧ ಮಾಹಿತಿ ಬಯಸಿದ ಸಂದರ್ಭ ಮಡಿಕೇರಿ ತಹಶೀಲ್ದಾರ್ ಶಾರದಾಂಬ ತಾಲೂಕಿನಲ್ಲಿ ಯಾವದೇ ಮನೆಗೆ ಪೂರ್ಣ ಹಾನಿಯಾಗಿಲ್ಲವೆಂದು ಹೇಳಿದರು. ಕೆರಳಿದ ಶಾಸಕ ಬೋಪಯ್ಯ ಅವರು ಸ್ಥಳಕ್ಕೆ ಭೇಟಿ ನೀಡದೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಆಕ್ಷೇಪಿಸಿದರಲ್ಲದೆ, ಮರಂದೋಡದಲ್ಲಿ ಮನೆ ಕುಸಿದಿದ್ದು, ಅಧಿಕಾರಿಗಳು ಹೋಗದೇ ಇದ್ದುದರಿಂದ ಗ್ರಾಮಸ್ಥರೇ 71 ಸಾವಿರ ಹಣ ಸಂಗ್ರಹ ಮಾಡಿ ನೆರವು ನೀಡಿದ್ದಾರೆ. (ಮೊದಲ ಪುಟದಿಂದ)ನಿಮಗೆ ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದರು. ವೀರಾಜಪೇಟೆಯ ಕೆದಮುಳ್ಳೂರಿನಲ್ಲಿ ವಿಶ್ವನಾಥ್ ಅವರ ಮನೆ ಕುಸಿದಾಗ ತಹಶೀಲ್ದಾರ್ ಗೋವಿಂದರಾಜುಗೆ ತಾನೇ ಸ್ವತಃ ಕರೆ ಮಾಡಿ ತಿಳಿಸಿದಾಗ ಕೇವಲ ರೂ. 5,200 ಮಾತ್ರ ಪರಿಹಾರ ನೀಡಲು ಸಾಧ್ಯವೆಂದು ಹೇಳಿದ್ದು, ಇದುವರೆಗೆ ಭೇಟಿ ನೀಡಿಲ್ಲ, ಪರಿಹಾರ ನೀಡಿಲ್ಲ. ಯಾವದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಅಸಮಾಧಾನಿತರಾದ ಸಚಿವ ದೇಶಪಾಂಡೆ ಅವರು, 5 ಸಾವಿರ ಪರಿಹಾರ ನೀಡಬೇಕೆನ್ನುವದು ನಿಮ್ಮ ಮೂರ್ಖತನ, ಎಲ್ಲಿಯೂ ಈ ಬಗ್ಗೆ ನಮೂದಾಗಿಲ್ಲ, ನಷ್ಟಕ್ಕೊಳಗಾದವರಿಗೆ ಸರಿಯಾದ ಪರಿಹಾರ ಕೊಡಿ, ನನ್ನ ಅಥವಾ ನಿಮ್ಮೆ ಕಿಸೆಯಿಂದ ಕೊಡುವದಲ್ಲ. ಸರಕಾರಕ್ಕೆ ಬೆಂಕಿ ಬಿದ್ದಿಲ್ಲ, ಸರಕಾರ ಸಮರ್ಥವಾಗಿದೆ ಎಲ್ಲವನ್ನು ಮರು ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಕೊಡಿ ಎಂದು ತಹಶೀಲ್ದಾರರ ಮೇಲೆ ಹರಿಹಾಯ್ದರು. ಜಿ.ಪಂ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತಮ್ಮ ಹತ್ತಿರಕ್ಕೆ ಕರೆದು ಛೀಮಾರಿ ಹಾಕಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಕಂದಾಯ ಇಲಾಖೆ ರಾಜ್ಯ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ಕೂಡ ರೂ. 5 ಸಾವಿರ ಮಾತ್ರ ನೀಡುವ ಬಗ್ಗೆ ಎಲ್ಲಿಯೂ ನಮೂದಾಗಿಲ್ಲವೆಂದು ಸಮಜಾಯಿಷಿಕೆ ನೀಡಿದರು.