ಮಡಿಕೇರಿ, ಜೂ. 18: ಕಳೆದ ಮೇ 25 ರಂದು ಮುಂದೂಡಲ್ಪಟ್ಟಿದ್ದ ತಲಕಾವೇರಿ ಕ್ಷೇತ್ರದ ಅಷ್ಟಮಂಗಲ ಪ್ರಶ್ನೆ ಇಂದು ಮತ್ತೆ ಮುಂದುವರಿಯುವದೊಂದಿಗೆ, ಕ್ಷೇತ್ರದ ಶ್ರೀ ಅಗಸ್ತ್ಯೇಶ್ವರ ಗುಡಿಯನ್ನು ಪ್ರಸಕ್ತ ಪೂಜಾ ಲಿಂಗಕ್ಕೆ ಪೂರಕವಾಗಿ ಪುನರ್ ನಿರ್ಮಾಣಗೊಳಿಸುವ ದಿಸೆಯಲ್ಲಿ ಚಿಂತನೆ ನಡೆಸಲಾಯಿತು.ಈ ನಿಟ್ಟಿನಲ್ಲಿ ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ, ಇಂದು ಅಷ್ಟಮಂಗಲ ಪ್ರಶ್ನೆ ಮುಂದುವರೆಸಿದ ದೈವಜ್ಞ ಪಯ್ಯವೂರಿನ ನಾರಾಯಣ ಪೊದುವಾಳ್ ಅವರು, ಪ್ರಸಕ್ತ ಗುಡಿಯು ಸನ್ನಿಧಿಯ ಬಿಂಬಕ್ಕೆ ಪೂರಕವಾಗಿಲ್ಲವೆಂದು ಪ್ರಶ್ನೆ ಫಲ ಗೋಚರವಿದೆ ಎಂದು ನುಡಿದರು.ಆ ಸಲುವಾಗಿ ವಿಮರ್ಶೆಯೊಂದಿಗೆ ತಾ. 19 ರಂದು (ಇಂದಿಗೆ) ಮುಂದೂಡಲ್ಪಟ್ಟ ಪ್ರಶ್ನೆ ಫಲದಂತೆ, ಮಂಗಳವಾರ ಈ ಸಂಬಂಧ ದೈವಾನುಗ್ರಹ ಗೋಚರ ಫಲದಂತೆ ಮುಂದುವರಿಯುವ ತೀರ್ಮಾನಕ್ಕೆ ಬರಲಾಯಿತು. ಅಲ್ಲದೆ 12 ವರ್ಷಗಳ ಹಿಂದೆ ಭೂಗತಗೊಳಿಸಿರುವ ಹಳೆಯ ಬಿಂಬ, ಅವಶೇಷಗಳನ್ನು ಗುಡಿಯಿಂದ ತೆರವುಗೊಳಿಸಿ, ನವೀಕರಣಗೊಳ್ಳುವ ಶಿವಾಲಯದೊಳಗೆ ಪ್ರಸಕ್ತ ಲಿಂಗವನ್ನು ಪುನರ್ ಪ್ರತಿಷ್ಠಾಪನೆಗೊಳಿಸಲು ತಾ. 19 ರಂದು (ಇಂದು) ಪ್ರಶ್ನೆಯಲ್ಲಿ ವಿಮರ್ಶೆಗೆ ನಿಶ್ಚಯಿಸಲಾಯಿತು.

ಅಲ್ಲದೆ ಕ್ಷೇತ್ರ ದೋಷ ಪರಿಹಾರ, ವಾಗ್ದೋಷ ನಿವಾರಣೆ, ಪೌರೋಹಿತರೊಳಗಿನ ಅಂತಃಕಲಹ ನಿವಾರಣೆ, ಬ್ರಹ್ಮಹತ್ಯಾ ದೋಷ ಪರಿಹಾರ,

(ಮೊದಲ ಪುಟದಿಂದ) ನಾಗದೋಷ ನಿವಾರಣೆ ಇತ್ಯಾದಿ ಸಂಬಂಧ ಕೈಗೊಳ್ಳಬೇಕಾದ ದೈವಿಕ ಕೈಂಕರ್ಯಗಳ ಕುರಿತು ಸಮಾ ಲೋಚನೆ ನಡೆಸಲಾಯಿತು. ಮುಖ್ಯವಾಗಿ ತಲಕಾವೇರಿ ಕ್ಷೇತ್ರದೊಂದಿಗೆ ಬ್ರಹ್ಮಗಿರಿ ಬೆಟ್ಟದ ಪಾವಿತ್ರ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಸಂಬಂಧ, ಕಾನೂನಾತ್ಮಕ ಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಲಾಯಿತು.

ತಂತ್ರಿಗಳ ಸಲಹೆ : ಕಳೆದ ಮೇ 21 ರಿಂದ 25 ರ ತನಕ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ದೋಷಗಳು ಮತ್ತು ಗೋಚರ ಫಲಗಳ ಕುರಿತು ಕ್ಷೇತ್ರ ಪುರೋಹಿತರು ಮತ್ತು ಸದ್ಭಕ್ತರೊಡನೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವದು ಎಂದು ನೀಲೇಶ್ವರ ಪದ್ಮನಾಭ ತಂತ್ರಿಗಳು ಅಭಿಪ್ರಾಯಪಟ್ಟರು. ಅಲ್ಲದೆ ತಾ. 19 ರಂದು (ಇಂದು) ಮುಂದುವರಿ ಯಲಿರುವ ಪ್ರಶ್ನೆಯಲ್ಲಿ ಕ್ಷೇತ್ರದಲ್ಲಿ ನಿರ್ವಹಿಸಬೇಕಾದ ಕೈಂಕರ್ಯಗಳ ಬಗ್ಗೆ ದೈವಾನುಗ್ರಹ ಕುರಿತು ನೋಡಿಕೊಂಡು ಮುಂದಿನ ಹೆಜ್ಜೆ ಇರಿಸಲಾಗುವದು ಎಂದು ಸಲಹೆ ನೀಡಿದರು. ಇಂದು ನಡೆದ ಪ್ರಶ್ನೆ ವೇಳೆ ಜಿಲ್ಲೆಯ ವಿವಿಧ ಸಮಾಜಗಳ ಮುಖಂಡರು, ದೇವಾಲಯ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಕ್ಷೇತ್ರ ಪುರೋಹಿತರು ಸೇರಿದಂತೆ ಹೆಚ್ಚಿನ ಭಕ್ತಾಭಿಮಾನಿಗಳು ಪಾಲ್ಗೊಂಡು, ತಮ್ಮ ತಮ್ಮ ಸಂಶಯಗಳ ಬಗ್ಗೆ ಪ್ರಸ್ತಾಪಿಸಿದ್ದು, ಕಂಡು ಬಂತು.