ಮಡಿಕೇರಿ, ಜೂ. 18: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಮರ್ಪಕ ಪರಿಹಾರ ವಿತರಣೆ ಮಾಡುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹವಾಮಾನ ಪರಿಸ್ಥಿತಿ, ಬೆಳೆ ಪರಿಸ್ಥಿತಿ ಹಾಗೂ ಮಳೆಹಾನಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಸಚಿವರು ಮಳೆಹಾನಿಗೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳಲ್ಲಿ ಮಾಹಿತಿ ಬಯಸಿದರು. ಈ ಸಂದರ್ಭ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕು ತಹಶೀಲ್ದಾರರು ಪರಿಹಾರ ವಿತರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ವೀರಾಜಪೇಟೆ ತಾಲೂಕಿನಲ್ಲಿ ಮೂರು ಪ್ರಾಣ ಹಾನಿಯಾಗಿದ್ದು, 2 ಪ್ರಕರಣಗಳಿಗೆ ತಲಾ ರೂ. 1 ಲಕ್ಷದಂತೆ ಪರಿಹಾರ ನೀಡಲಾಗಿದೆ. ಇನ್ನೊಂದು ವ್ಯಕ್ತಿ ಕೇರಳದ ಕಣ್ಣೂರಿನವರಾಗಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಅಲ್ಲಿಯೇ ಪರಿಹಾರ ಒದಗಿಸಲು ಕ್ರಮ ಕೈಗೊಂಡಿರುವದಾಗಿ ಮಾಹಿತಿ ನೀಡಿದರು. ಮನೆಗೆ ಹಾನಿ ಯಾಗಿರುವ

(ಮೊದಲ ಪುಟದಿಂದ) ಕುರಿತು ತಹಶೀಲ್ದಾರರಲ್ಲಿ ಮಾಹಿತಿ ಬಯಸಿದಾಗ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು ಒಟ್ಟು 11 ಭಾಗಶಃ ಕುಸಿದಿರುವ ಮನೆಗಳಿಗೆ ಪರಿಹಾರ ವಿತರಣೆ ಮಾಡಲು ರೂ. 3 ಸಾವಿರದಂತೆ ಚೆಕ್ ಅನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಆಕ್ಷೇಪಿಸಿದ ಸಚಿವರು ಯಾವ ಆಧಾರದ ಮೇಲೆ ರೂ. 3 ಸಾವಿರ ಪರಿಹಾರ ನೀಡುತ್ತಿದ್ದೀರಾ ! ಪ್ರಕೃತಿ ವಿಕೋಪದಡಿ ಈಗಾಗಲೇ ಸರಕಾರ ಜಿಲ್ಲೆಗೆ ರೂ. 10 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಪರಿಹಾರ ನೀಡಲು ಯಾವದೇ ಜಾತಿ, ಬಡವ, ಶ್ರೀಮಂತ ಹಾಗೂ ಆದಾಯ ತೆರಿಗೆಯ ಮಿತಿ ಇರುವದಿಲ್ಲ, ಹಾನಿಯಾದವರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕು. ಕೇಂದ್ರದ ನಿಯಮದಂತೆ ಶೇ. 15ಕ್ಕಿಂತ ಕಡಿಮೆ ಹಾನಿ ಆಗಿದ್ದಲ್ಲಿ ರೂ. 5,200 ಪರಿಹಾರ ನೀಡಬಹುದು. ಶೇ. 75 ಹಾಗೂ ಅದಕ್ಕಿಂತ ಹೆಚ್ಚಿಗೆ ಅಥವಾ ಪೂರ್ಣಪ್ರಮಾಣದಲ್ಲಿ ಹಾನಿಯಾಗಿದ್ದರೆ ರೂ. 95 ಸಾವಿರದವರೆಗೆ ಪರಿಹಾರ ನೀಡಬಹುದಾಗಿದೆ. ರಾಜ್ಯ ಸರಕಾರದಿಂದಲೂ ಪರಿಹಾರ ಮೊತ್ತ ಹೆಚ್ಚಿಸಲು ಚಿಂತನೆ ಹರಿಸಲಾಗಿದೆ. ಸರಿಯಾದ ರೀತಿಯಲ್ಲಿ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ಮರು ಪರಿಶೀಲನೆ ಮಾಡಿ

ಕೆಲವೆಡೆ ಭಾರೀ ಹಾನಿಯಾಗಿದ್ದು, ಮನೆಗಳು, ಕಾಫಿ ತೋಟಗಳಿಗೆ ಸಂಪೂರ್ಣ ಹಾನಿಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಅಸಮರ್ಪಕವಾಗಿ ಪರಿಹಾರ ವಿತರಣೆಗೆ ಮುಂದಾಗಿದ್ದಾರೆ ಎಂಬ ಬಗ್ಗೆ ಸಭೆಯಲ್ಲಿದ್ದ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್ ಹಾಗೂ ಸುನಿಲ್ ಸುಬ್ರಮಣಿ ಅವರುಗಳು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಬೇಕು, ಮಳೆ ಹಾನಿಗೆ ಬಡವರ ಮನೆಗಳೇ ಹೆಚ್ಚಾಗಿ ಹಾನಿಗೀಡಾಗುವದು. ಜಿಲ್ಲಾಡಳಿತ ಸರಿಯಾಗಿ ಕೆಲಸ ಮಾಡದಿದ್ದರೆ ಜಿಲ್ಲೆಗೆ, ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ, ಜನಪ್ರತಿನಿಧಿಗಳೊಂದಿಗೆ ಸಂಪರ್ಕವಿರಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಲ್ಲದೆ, ಈಗ ಮಾಡಿರುವ ಸರ್ವೆ ಕಾರ್ಯವನ್ನು ಕೈಬಿಟ್ಟು, ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಮರು ಪರಿಶೀಲನೆ ಮಾಡಿ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಕೂಡ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳನ್ನೊಳಗೊಂಡಂತೆ ವಾರಕ್ಕೊಮ್ಮೆ ಸಭೆ ನಡೆಸಿ ಮಾಹಿತಿ ಪಡೆದು ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

ಮೂರು ದಿನದಲ್ಲಿ ಕರೆಂಟ್

ಮಳೆಯಿಂದಾಗಿ ಜಿಲ್ಲೆಯಲ್ಲಿ ಸೆಸ್ಕ್ ಇಲಾಖೆಗೆ ರೂ. 84 ಲಕ್ಷ ವೆಚ್ಚವಾಗಿರುವದಾಗಿ ಮುಖ್ಯ ಅಭಿಯಂತರ ಸೋಮಶೇಖರ್ ಸಭೆಗೆ ಮಾಹಿತಿ ನೀಡಿದರು. 1384 ಕಂಬಗಳು ನೆಲಕ್ಕುರುಳಿದ್ದು, ಈ ಪೈಕಿ 1110 ಕಂಬಗಳನ್ನು ಅಳವಡಿಸಲಾಗಿದೆ. 93 ಟ್ರಾನ್ಸ್‍ಫಾರಂಗಳು ಸುಟ್ಟು ಹೋಗಿದ್ದು, 80 ನ್ನು ಸರಿಪಡಿಸಲಾಗಿದೆ. ಎಲ್ಲಿಯೂ ವಿದ್ಯುತ್ ಸಮಸ್ಯೆ ಇಲ್ಲವೆಂದು ಮಾಹಿತಿ ನೀಡಿದರು. ಈ ಸಂದರ್ಭ ಶಾಸಕ ಬೋಪಯ್ಯ ಹಾಗೂ ರಂಜನ್ ಅವರುಗಳು ಶಾಂತಳ್ಳಿ, ಬೆಟ್ಟದಳ್ಳಿ ಸೇರಿದಂತೆ ದ. ಕೊಡಗಿನ ವಿವಿಧೆಡೆಗಳಲ್ಲಿ ವಿದ್ಯುತ್ ಇಲ್ಲದೆ ವಾರ ಕಳೆದಿದೆ. ಸುಳ್ಳು ಮಾಹಿತಿ ನೀಡಬೇಡಿ ಎಂದಾಗ ಅಭಿಯಂತರರು ಮುಂದಿನ ಮೂರು ದಿನಗಳಲ್ಲಿ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಒದಗಿಸುವದಾಗಿ ಭರವಸೆ ನೀಡಿದರು.

ಅರಣ್ಯ ಇಲಾಖೆ ಸಹಕರಿಸಿ

ಮಳೆಗಾಲದಲ್ಲಿ ರಸ್ತೆ ಬದಿ, ಜನರು ವಾಸಿಸುವ ಕಡೆಗಳಲ್ಲಿ ಅಪಾಯದ ಹಂತದಲ್ಲಿರುವ ಮರಗಳನ್ನು ಗುರುತಿಸಿ, ಅವುಗಳನ್ನು 48 ಗಂಟೆಗಳಲ್ಲಿ ತೆರವುಗೊಳಿಸಬೇಕು. ಅರಣ್ಯದಲ್ಲಿನ ಆದಿವಾಸಿಗಳಿಗೆ ಸರಕಾರ ಹಕ್ಕುಪತ್ರ ನೀಡಿದ್ದು, ಅವರುಗಳಿಗೆ ರಸ್ತೆ, ನೀರು, ವಿದ್ಯುತ್ ಕಲ್ಪಿಸಲು ಅರಣ್ಯ ಇಲಾಖೆ ಸಹಕರಿಸಬೇಕು, ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಎಲ್ಲಾ ಜಿಲ್ಲೆಗಳಲ್ಲೂ ಅರಣ್ಯಾಧಿಕಾರಿಗಳು ಸಹಕರಿಸುತ್ತಾರೆ ಕೊಡಗಿನಲ್ಲಿ ಮಾತ್ರ ಏಕೆ ಈ ರೀತಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಜಿ.ಬೋಪಯ್ಯ ಅವರು ಭಾಗಮಂಡಲ-ಕರಿಕೆ ಮಾರ್ಗದಲ್ಲಿಯೂ ಮರಗಳನ್ನು ತೆರವುಗೊಳಿಸಬೇಕು. ಬಿಳಿಗೇರಿ, ಐಕೊಳ, ಕುಂಬಳದಾಳು ಮತ್ತಿತರ ಕಡೆಗಳಲ್ಲಿ ಮರಗಳನ್ನು ತೆರವುಗೊಳಿಸಬೇಕು ಎಂದು ಅವರು ತಿಳಿಸಿದರು.

ಸಾರ್ವಜನಿಕರ ಹಿತದೃಷ್ಟಿ ಅರಿತು ಅಧಿಕಾರಿಗಳು ಕಾರ್ಯ ನಿರ್ವಹಿಸ ಬೇಕು. ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಪರಿಹರಿಸಬೇಕು. ಅನಾಹುತ ಗಳು ಉಂಟಾದಲ್ಲಿ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಕೆಲಸ ಮಾಡಿರುವ ಬಗ್ಗೆ ಫೀಡ್‍ಬ್ಯಾಕ್ ಇರಬೇಕು. ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು...ಇದು ಅಧಿಕಾರಿಗಳಿಗೆ ಕಂದಾಯ ಸಚಿವರು ಸೂಚಿಸಿದ ಕೊನೆಯ ನುಡಿಗಳು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆÀ ಲೋಕೇಶ್ವರಿ ಗೋಪಾಲ್ ಅವರು ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಹಾನಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಅತಿವೃಷ್ಟಿಯಿಂದ ಉಂಟಾದ ಹಾನಿ, ಈ ಸಂಬಂಧ ತಕ್ಷಣ ಕೈಗೊಂಡಿರುವ ಅಗತ್ಯ ಕ್ರಮಗಳು, ಪರಿಹಾರೋಪಾಯ ಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ತಹಶೀಲ್ದಾರ ರಾದ ಶಾರಾದಾಂಭ, ಗೋವಿಂದ ರಾಜು, ಬಾಡ್ಕರ್, ಲೋಕೋಪ ಯೋಗಿ ಇಂಜಿನಿಯರ್ ವಿನಯ ಕುಮಾರ್, ಜಿ.ಪಂ.ಇಂಜಿನಿಯರ್ ಇತರರು ಹಲವು ಮಾಹಿತಿ ನೀಡಿದರು. ನಾನಾ ಇಲಾಖೆ ಅಧಿಕಾರಿಗಳು ಇದ್ದರು.