ಶ್ರೀಮಂಗಲ: ಕೇಂದ್ರ ಸರ್ಕಾರ ಹೊರದೇಶದಿಂದ ಕಳಪೆ ಗುಣಮಟ್ಟದ ಕರಿಮೆಣಸು ಆಮದು ತಡೆಗಟ್ಟಿ, ದೇಶಿಯ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ 7ತಿಂಗಳ ಹಿಂದೆ ಕರಿ ಮೆಣಸಿನ ಮೇಲೆ ಕನಿಷ್ಟ ಆಮದು ದರ ನಿಗದಿಪಡಿಸಿದರೂ ಈ ಕಾನೂನು ವ್ಯಾಪಾಕವಾಗಿ ದುರುಪ ಯೋಗ ವಾಗುತ್ತಿದೆ. ಕನಿಷ್ಟ ಆಮದು ದರ ನಿಗದಿಪಡಿಸಿದರೂ ಕರಿಮೆಣಸು ದರ ತೀವ್ರ ಕುಸಿತವಾಗಿದ್ದು ಮಾರುಕಟ್ಟೆ ದರ ಏರಿಕೆಯಾಗದೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

(ಮೊದಲ ಪುಟದಿಂದ) ಆದ್ದರಿಂದ ಕನಿಷ್ಟ ಆಮದು ದರ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಆಗ್ರಹಿಸಿ ಕರಿಮೆಣಸು ಬೆಳೆಯುವ ಪ್ರದೇಶದಲ್ಲಿ ಬಂದ್ ನಡೆಸಿ ಸರ್ಕಾರದ ಗಮನಸೆಳೆಯುವದು ಸೂಕ್ತ ಎಂದು ಬೆಳೆಗಾರರು ಸಲಹೆ ನೀಡಿದರು.ಗೋಣಿಕೊಪ್ಪದ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಬೆಳೆಗಾರರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಅವರು ಸಭೆಯಲ್ಲಿ ಮಾತಾನಾಡಿ ಕೇಂದ್ರ ಸರ್ಕಾರ ಕರಿಮೆಣಸಿಗೆ ಕನಿಷ್ಟ ಆಮದು ದರ ರೂ.500 ನಿಗದಿಪಡಿಸಿದರು, ಕಾನೂನು ಉಲ್ಲಂಘಿಸಿ ಭಾರತಕ್ಕೆ ಆಮದುದಾರರು ಭಾರೀ ಪ್ರಮಾಣದಲ್ಲಿ ವಿಯೆಟ್ನಾಂ ಹಾಗೂ ಇತರ ದೇಶದ ಕಳಪೆ ಗುಣಮಟ್ಟದ ಕರಿಮೆಣಸನ್ನು ತಂದು ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ಭಾರತದ ಉತ್ತಮ ಗುಣಮಟ್ಟದ ಕರಿಮೆಣಸನ್ನು ಬೇರೆ ದೇಶಗಳಿಗೆ ರಪ್ತು ಮಾಡುತ್ತಿದ್ದಾರೆ. ಕನಿಷ್ಟ ಆಮದು ದರ ನಿಗದಿ ಮಾಡಿದ್ದರೂ ಅದನ್ನು ಜಾರಿ ಮಾಡಿ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ವಿಫಲವಾಗಿದೆ. ಕರಿಮೆಣಸು ಆಮದುದಾರರ ತಾಳಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಕುಣಿಯುತ್ತಿದ್ದು ಪ್ರಭಾವಿ ಆಮದುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಬೆಳೆಗಾರರ ಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ನಿಲುವು ತಳೆದು, ಕನಿಷ್ಟ ಆಮದು ದರ ಅನುಷ್ಠಾನಗೊಳಿಸಬೇಕು; ಇಲ್ಲದಿದ್ದರೆ ಕರಿಮೆಣಸು ಬೆಳೆಯುವ ರಾಜ್ಯದ ಎಲ್ಲಾ ಜಿಲ್ಲೆಗಳು, ನೆರೆಯ ಕೇರಳ, ತಮಿಳುನಾಡು ರಾಜ್ಯದ ಕರಿಮೆಣಸು ಬೆಳೆಯು ಪ್ರದೇಶದ ಬೆಳೆಗಾರ ಸಂಘಟನೆಗಳು ಒಂದಾಗಿ ಕೇಂದ್ರ ಸರ್ಕಾರದ ಗಮನಸೆಳೆಯಲು ಬಂದ್ ನಡೆಸುವದು ಸೂಕ್ತ ಎಂದು ಸಲಹೆ ನೀಡಿದರು.

ಬಾಳೆಲೆಯ ಬೆಳೆಗಾರ ಪೋಡಮಾಡ ಉತ್ತಯ್ಯ ಹಾಗೂ ಮಚ್ಚಮಾಡ ಮಾಚಯ್ಯ ಮಾತನಾಡಿ, ಕರಿಮೆಣಸು ಬೆಲೆ ತೀವ್ರ ಕುಸಿತವಾಗುತ್ತಿದ್ದು ಕೇಂದ್ರ ಸರ್ಕಾರ ಕನಿಷ್ಟ ಆಮದು ದರ ನಿಗದಿ ಮಾಡಿದರು ಕಾನೂನು ದುರುಪಯೋಗವಾಗುತ್ತಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಬೆಳೆಗಾರರ ಪರವಾಗಿ ಮೊಕದ್ದಮೆ ಹೂಡಿ ಹೋರಾಟ ನಡೆಸಬೇಕೆಂದು ಸಲಹೆ ನೀಡಿದರು.

ಕೊಟ್ಟಗೇರಿಯ ಬೆಳೆಗಾರ ಮಾಚಂಗಡ ಉಮೇಶ್ ಮಾತನಾಡಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಬಳಿಕ ಮಾಡುವ ಬಗ್ಗೆ ಈಗಾಗಲೇ ಭರವಸೆ ನೀಡಿದ್ದಾರೆ. ಆದರೆ 2009ರ ಏಪ್ರಿಲ್ 1ರ ನಂತರದಿಂದ 2017ರ ಡಿಸೆಂಬರ್ 31ರವರೆಗೆ ಸಾಲ ಪಡೆದವರ ಸಾಲ ಮನ್ನಾ ಮಾಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಾಲ ಪಡೆದ ಬಗ್ಗೆ ಅವಧಿ ನಿಗದಿ ಮಾಡಿರುವದು ಸರಿಯಲ್ಲ, ಈ ಅವಧಿಯ ಮೊದಲು ಹಾಗೂ ನಂತರದಲ್ಲಿಯೂ ಸಾಕಷ್ಟು ರೈತರು ಸಾಲ ಪಡೆದಿದ್ದಾರೆ. ಹೀಗೆ ಅವಧಿ ನಿಗÀದಿಪಡಿಸಿದರೆ ಬಹಳಷ್ಟು ರೈತರು ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅವರು ವಿಯೆಟ್ನಾಂನಲ್ಲಿ ಪ್ರತಿ ಕೆಜಿ ಕರಿಮೆಣಸಿಗೆ 185 ರೂ. ಇದೆ. 530ಕ್ಕೆ ರಶೀದಿ ಮಾಡಿ ಭಾರತಕ್ಕೆ ಕರಿಮೆಣಸು ತರುತ್ತಿದ್ದು, ಭಾರತದಲ್ಲಿ 340 ರೂ. ಇರುವಾಗ ವಿಯೆಟ್ನಾಂನಿಂದ 530ಕ್ಕೆ ರಶೀದಿ ಮಾಡಿ ಭಾರತಕ್ಕೆ ತಂದು ಆಮದುದಾರರಿಗೆ ಏನು ಲಾಭವಿದೆ, ಎಂದು ಪ್ರಶ್ನಿಸಿದರು. 185 ರೂ.ಗೆ ತರುವ ಕರಿಮೆಣಸಿಗೆ ದಾಖಲಾತಿಯಲ್ಲಿ ಮಾತ್ರ 530 ತೋರಿಸಲಾಗುತ್ತಿದೆ. ಕನಿಷ್ಟ ಆಮದು ದರದ ಕಾಯಿದೆಯನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಆಮದುದಾರರು ಕನಿಷ್ಟ ಆಮದು ದರವನ್ನು ಕೇಂದ್ರ ನಿಗದಿಪಡಿಸಿರುವದನ್ನು ತಡೆ ಕೋರಿ ಕೇರಳ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ದಕ್ಷಿಣ ಭಾರತದ ಬೆಳೆಗಾರ ಸಂಘಟನೆಯ ಸಮನ್ವಯ ಸಮಿತಿ (ಸಿ.ಒ.ಪಿ.ಜಿ.ಒ)ಯ ಕೊಂಕೋಡಿ ಪದ್ಮನಾಭ್ ಭಟ್, ಕೆ.ಕೆ ವಿಶ್ವನಾಥ್, ತೇಲಪಂಡ ಪ್ರದೀಪ್ ಪೂವಯ್ಯ ಅವರು, ಕನಿಷ್ಟ ಆಮದು ದರದ ವಿರುದ್ಧ ತಡೆ ನೀಡಬಾರದೆಂದು ಹಾಗೂ ತಮ್ಮನ್ನು ಪ್ರತಿವಾದಿಯಾಗಿ ಪರಿಗಣಿಸಬೇಕೆಂದು ಇದೇ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ತಾ. 21ರಂದು ಬೆಂಗಳೂರಿನ ವಸಂತ ನಗರದ ಕೊಡವ ಸಮಾಜದಲ್ಲಿ ಸಭೆ ನಡೆಸಿ, ಕರಿಮೆಣಸು ಆಮದು ತಡೆಗಟ್ಟಿ ಬೆಳೆಗಾರ ಹಿತ ಕಾಪಾಡುವ ನಿಟ್ಟಿನಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳ ಬೆಳೆಗಾರರ ಸಂಘಟನೆಗಳು ಬೆಂಗಳೂರಿನಲ್ಲಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ ಅಧಿಕ ಸಂಘಟಕರು ಪಾಲ್ಗೊಳ್ಳಬೇಕೆಂದು ಹರೀಶ್ ಅಪ್ಪಯ್ಯ ಕರೆ ನೀಡಿದರು. ಕೇಳಪಂಡ ನೆಹರು, ಜಮ್ಮಡ ಮೋಹನ್ ಮಾದಪ್ಪ ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ರಾಧ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಜೇಮ್ಸ್ ಹಾಜರಿದ್ದರು.