ಸಿದ್ದಾಪುರ, ಜೂ. 18: ಅರಣ್ಯ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆಯೊಂದನ್ನು ಬಿ ರಿಪೋರ್ಟ್ ಮಾಡಿದ್ದಾರೆಂದು ಆರೋಪಿಸಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಸಿದ್ದಾಪುರ ಪೊಲೀಸ್ ಠಾಣೆಗೆ ಆಗಮಿಸಿ ಠಾಣಾಧಿಕಾರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 3 ತಿಂಗಳ ಹಿಂದೆ ಕರಡಿಗೋಡು ಗ್ರಾಮದ ಕಾಫಿ ಬೆಳೆಗಾರರಾದ ಕೆ.ಪಿ. ಮೋಹನ್‍ದಾಸ್ ಎಂಬವರು ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೋಹನ್ ದಾಸ್ ಸಾವನ್ನಪ್ಪಿ ದ್ದಾರೆಂದು ಆರೋಪಿಸಲಾಗಿತ್ತು. ಕರಡಿಗೋಡು ಗ್ರಾಮದ ನಿವಾಸಿ ಕುಕ್ಕುನೂರು ಸೋಮಣ್ಣ ಅವರು ಅರಣ್ಯಾಧಿಕಾರಿಗಳ ವಿರುದ್ಧ ಪುಕಾರು ನೀಡಿದ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೂರು ಮಂದಿ ಅರಣ್ಯಾಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.
ಆದರೆ ಇದೀಗ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿಯವರು ‘ಬಿ ರಿಪೋರ್ಟ್’ ಸಲ್ಲಿಸಿದ್ದಾರೆಂದು ಆರೋಪಿಸಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಸಿದ್ದಾಪುರ ಠಾಣೆಗೆ ತೆರಳಿ ಸಹಾಯಕ ಠಾಣಾಧಿಕಾರಿಯವರನ್ನು ಪ್ರಶ್ನಿಸಿದರು. ಅಲ್ಲದೇ ಠಾಣಾಧಿಕಾರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಡಿಕೇರಿ ವಿಭಾಗದ ಡಿವೈಎಸ್‍ಪಿ ಅವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದರು. ಮೊಕದ್ದಮೆಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲಿ, ಸಂಘಟನೆ ಮುಖಾಂತರ ಹೋರಾಟ ಮಾಡುವದಾಗಿ ಮನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.