ಮಡಿಕೇರಿ, ಜೂ. 19: ಹಲವರು ಹಲವಾರು ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಯುವಕ ಅಚ್ಚರಿದಾಯಕ ರೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಿಂದ ಸಫಲವಾಗದ ಕಾರಣ ಮತ್ತೆ ಹೊಳೆಗೆ ಹಾರಿ ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಟು ಹೊಳೆಯಲ್ಲಿ ಈ ರೀತಿಯ ಪ್ರಸಂಗವೊಂದು ಇಂದು ಬೆಳಿಗ್ಗೆ ನಡೆದಿದೆ.ಮಡಿಕೇರಿಯ ರಾಣಿಪೇಟೆ ನಿವಾಸಿ, ಸಮೀವುಲ್ಲ (35) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ. ಅಂಗಡಿಗಳಿಗೆ ತಿಂಡಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಾ ಬಿಡುವಿನಲ್ಲಿ ಶಾಲಾ (ಮೊದಲ ಪುಟದಿಂದ) ಮಕ್ಕಳನ್ನು ವ್ಯಾನ್‍ನಲ್ಲಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದ ಸಮೀವುಲ್ಲ ಇಂದು ಬೆಳಿಗ್ಗೆ 8 ಗಂಟೆಗೆ ಒಂದು ಟ್ರಿಪ್ ಮಕ್ಕಳನ್ನು ಶಾಲೆಗೆ ಬಿಟ್ಟು ಅದೇ ವ್ಯಾನ್‍ನಲ್ಲಿ (ಕೆಎ 12 ಪಿ. 3500) ಕೂಟುಹೊಳೆಯತ್ತ ತೆರಳಿದ್ದಾನೆ.

ಕೂಟುಹೊಳೆ ನೀರು ಸಂಗ್ರಹಾಗಾರಕ್ಕೆ ವ್ಯಾನ್ ಸಹಿತ ನುಗ್ಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ವ್ಯಾನ್ ರಸ್ತೆಯಿಂದ ಜಿಗಿಯುವಾಗ ಮುಂಭಾಗ ಕೆಳಮುಖವಾಗಿ ಸಿಲುಕಿಕೊಂಡಿದೆ. ವ್ಯಾನ್ ಚಲಿಸದ್ದರಿಂದ ವ್ಯಾನ್‍ನಿಂದ ಇಳಿದು ಹೋಗಿ ನೀರಿಗೆ ಹಾರಿದ್ದಾನೆ. ವ್ಯಾನ್ ಹೊಳೆಗೆ ಇಳಿದಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಅಗ್ನಿಶಾಮಕ ದಳದವರೊಂದಿಗೆ ಪೊಲೀಸರು ತೆರಳಿದ್ದಾರೆ. 12 ಗಂಟೆ ವೇಳೆಗೆ ನೀರಿನಲ್ಲಿ ಶವ ದೊರೆತಿದೆ. ಅವಿವಾಹಿತನಾಗಿರುವ ಸಮೀವುಲ್ಲ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.