ಭಾಗಮಂಡಲ, ಜೂ. 19: ಬೇರೊಬ್ಬ ವ್ಯಕ್ತಿಯ ಪತ್ನಿಯನ್ನು ಚುಡಾಯಿಸಿದ್ದಲ್ಲದೆ ಅದನ್ನು ಪ್ರಶ್ನಿಸಲು ಬಂದ ಆಕೆಯ ಪತಿಯ ಮೇಲೆ ಗುಂಡಿನ ಧಾಳಿ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ.
ಎರಡು ದಿನಗಳ ಹಿಂದೆ ಭಾಗಮಂಡಲ ಬ್ಯಾಂಕೊಂದಕ್ಕೆ ಆಗಮಿಸಿದ್ದ ಅಯ್ಯಂಗೇರಿಯ ಉದ್ದುಮಾಡ ಭೀಮಯ್ಯ ಎಂಬವರ ಪತ್ನಿಯನ್ನು ಅದೇ ಗ್ರಾಮದ ತೆಕ್ಕಡ ನಾಗೇಶ್ ಎಂಬಾತ ಚುಡಾಯಿಸಿದ್ದಲ್ಲದೇ ನಿನ್ನನ್ನು ತುಂಬಾ ಇಷ್ಟವಾಗಿದ್ದು, ಪ್ರೀತಿಸುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ.
ಈ ಬಗ್ಗೆ ತನ್ನ ಪತ್ನಿಯಿಂದ ವಿಷಯ ತಿಳಿದುಕೊಂಡ ಉದ್ದುಮಾಡ ಭೀಮಯ್ಯ ಹಾಗೂ ಸ್ನೇಹಿತ ಸುರೇಶ್ ಎಂಬವರುಗಳು ತೆಕ್ಕಡ ನಾಗೇಶ್ ಬಳಿ ತೆರಳಿ ಪ್ರಶ್ನಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಿದ್ದು, ತನ್ನ ಮನೆಯಿಂದ ಬಂದೂಕನ್ನು ತಂದ ನಾಗೇಶ್, ಭೀಮಯ್ಯ ಅವರತ್ತ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಭೀಮಯ್ಯ ಹಾಗೂ ಸುರೇಶ್ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಭಾಗಮಂಡಲ ಪೊಲೀಸರು ಇಂದು ಬೆಳಗ್ಗಿನ ಜಾವ ಆರೋಪಿ ನಾಗೇಶ್ನನ್ನು ಬಂಧಿಸಿದ್ದಾರೆ.