*ಗೋಣಿಕೊಪ್ಪಲು, ಜೂ. 18 : ಕಳೆದ ಒಂದು ವಾರದ ಹಿಂದೆ ಸುರಿದ ಮಳೆಯ ತೀವ್ರತೆಗೆ ತಿತಿಮತಿ ಬಾಳುಮನಿ ಸೇತುವೆ ಕುಸಿದು ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಸಾರ್ವಜನಿಕರು ಬದಲಿ ಮಾರ್ಗ ಅನುಸರಿಸುವಂತೆ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸೇತುವೆ ಕುಸಿದು ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಕಳೆದ 5 ದಿನಗಳಿಂದ ಬಸ್ ಹಾಗೂ ಲಾರಿಗಳ ಸಂಚಾರಕ್ಕೆ ತಡೆ ಮಾಡಲಾಗಿದ್ದು, ಲಘು ವಾಹನಗಳಾದ ಕಾರು, ಜೀಪು ಮತ್ತು ದ್ವಿಚಕ್ರ ವಾಹನಗಳಿಗಷ್ಟೆ ಈ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಮಳೆಯ ಪರಿಣಾಮ ಕುಸಿದು ಬಿದ್ದ ಬಾಳುಮನಿ ಸೇತುವೆಯ ಮೇಲೆ ಬಸ್‍ಗಳು ಸಂಚರಿಸುತ್ತದೆ ಎಂಬ ಮಾಧ್ಯಮದ ವರದಿಯಿಂದ ಜನರಲ್ಲಿ ಗೊಂದಲ ಉಂಟಾಗಿ ಬಸ್‍ಗಳನ್ನು ಸಾರ್ವಜನಿಕರು ತಿತಿಮತಿ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡುವಂತೆ ಪತ್ರಿಕೆಯನ್ನು ತೋರಿಸುವ ಮೂಲಕ ಚಾಲಕರಲ್ಲಿ ಒತ್ತಾಯಿಸಿದರು.

ಕುಸಿದ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ. ಮಂಗಳವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಇಂಜಿನಿಯರ್‍ಗಳು ಬೇಟಿ ನೀಡಿ ಪರಿಶೀಲಿಸಿದ ನಂತರ ಸಂಚಾರದ ವ್ಯವಸ್ಥೆಗೆ ಮುಂದಾಗುವದಾಗಿ ಹಿರಿಯ ಸಹಾಯಕ ಇಂಜಿನಿಯರ್ ಪ್ರಸನ್ನ ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ನೂತನ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ 20 ದಿನಗಳ ಒಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆಗಸ್ಟ್ ತಿಂಗಳಿನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವದು ಎಂದು ಈ ಸಂದರ್ಭ ತಿಳಿಸಿದರು.