ಗೋಣಿಕೊಪ್ಪ ವರದಿ, ಜೂ. 19 : ಕೊಡಗಿನ ಶಾಸಕರುಗಳು ಹಾಗೂ ಸಂಸದರ, ಜನರ ವಿರೋಧದ ನಡುವೆ ದಕ್ಷಿಣ ಕೊಡಗು ಮೂಲಕ ಕೇರಳಕ್ಕೆ ಸಂಪರ್ಕಿಸಲು ಉದ್ದೇಶಿಸಿರುವ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ದ ಪ್ರತಿಭಟನೆ ನಡೆಸಲು ಕಾರ್ಯತಂತ್ರ ರೂಪಿಸಲಾಗುವದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.ಪರಿಮಳ ಮಂಗಳ ವಿಹಾರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಲಚೇರಿ ರೈಲ್ವೆ ಮಾರ್ಗಕ್ಕೆ ಕೊಡಗಿನಲ್ಲಿ ಸರ್ವೆ ನಡೆಸಲು ಕೇರಳದ ಕೆಆರ್‍ಡಿಸಿಎಲ್ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಅನುಮತಿ ಪಡೆದು ನಡೆಸಲಾಗುತ್ತಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (ಮೊದಲ ಪುಟದಿಂದ) ಸರ್ಕಾರದಲ್ಲಿಯೇ ಅನುಮತಿ ಪಡೆದು ನಡೆಸಲಾಗುತ್ತಿದೆ. ಇದಕ್ಕೆ ನಾನು ಸೇರಿದಂತೆ ಕೊಡಗಿನ ಶಾಸಕರುಗಳ ವಿರೋಧವಿದೆ. ಮುಂದೆ ಸರ್ವೆ ಕಾರ್ಯಕ್ಕೆ ಬರುವ ಸಂದರ್ಭ ಅವರನ್ನು ಓಡಿಸುವ ಕೆಲಸವಾಗ ಬೇಕಿದೆ ಎಂದರು.

2012 ರಲ್ಲಿ ಯುಪಿಎ ಸರ್ಕಾರ ಆಡಳಿತವಿದ್ದಾಗ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿತ್ತು. ಇದನ್ನು ರಾಜ್ಯ ಸರ್ಕಾರದ ಮೂಲಕ ಅನುಷ್ಠಾನಗೊಳಿಸಲು ಮುಂದಾಗಿರು ವದಕ್ಕೆ ನಾವು ಬಿಡುವದಿಲ್ಲ ಎಂದರು.ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೊಡಗಿನ ಶಾಸಕರನ್ನು ಸೇರಿಸಿಕೊಂಡು ಭೇಟಿ ಮಾಡಲಾಗು ವದು. ಈ ಸಂದರ್ಭ ಮುಖ್ಯ ಕಾರ್ಯದರ್ಶಿ ಮೂಲಕ ನೀಡಿರುವ ಅನುಮತಿಯನ್ನು ನಿಲ್ಲಿಸುವಂತೆ ಒತ್ತಾಯಿಸಲಾಗುವದು. ಕೇಂದ್ರ ಸರ್ಕಾರ ಕೊಡಗಿನ ಕುಶಾಲನಗರ ದವರೆಗೆ ಬರುವ ರೈಲ್ವೆ ಯೋಜನೆಗೆ ಅನುಮತಿ ನೀಡಿದೆ. ತಲಚೇರಿ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮೂಲಕ ತಡೆ ಮಾಡಲಾಗುವದು ಎಂದರು. ಕೊಡಗಿನಲ್ಲಿ 4 ರಸ್ತೆಗಳು ಫೋರ್‍ಲೈನ್ ರಸ್ತೆಗಳಾಗಿ ಅಭಿವೃದ್ದಿಗೊಳ್ಳುತ್ತಿದೆ. ಇದು ಅನಿವಾರ್ಯವಾಗಿದೆ. ಇದಕ್ಕೆ ಜನತೆ ಬೆಂಬಲ ನೀಡಬೇಕು ಎಂದರು.

ಈ ಬಾರಿಯ ಚುನಾವಣೆಯಲ್ಲಿ ಶಾಸಕ ಕೆ. ಜಿ. ಬೋಪಯ್ಯ ಅವರ ಗೆಲುವು ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಿರೋಧಿಸಿದವರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದರು. ಲೋಕಸಭೆ ಚುನಾವಣೆಗೂ ಮುನ್ನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪಥನಗೊಳ್ಳುವ ಮೂಲಕ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ. ಶಾಸಕ ಅಪ್ಪಚ್ಚು ರಂಜನ್ ಮಂತ್ರಿಯಾಗುಯಿತ್ತಾರೆ ಎಂದರು.

ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, ಈ ಬಾರಿ ನಡೆದ ವಿಧಾನ ಸಭಾ ಚುನಾವಣೆÉಯಲ್ಲಿ ಮಾಡು ಇಲ್ಲವೆ ಮಡಿ ಎಂದು ಹೋರಾಟ ನಡೆಸಿ ಗೆಲುವು ಪಡೆದಿದ್ದೇವೆ. ಈ ಗೆಲುವು ಸಂಪೂರ್ಣ ಕಾರ್ಯಕರ್ತರ ಗೆಲುವಾಗಿದೆ ಎಂದರು. ಕೊಡಗಿನಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿದ್ದ ಸಂದರ್ಭದಲ್ಲಿಯೇ ಜಾತಿವಾದಕ್ಕೆ ಗೆಲುವು ಲಭಿಸಿರಲಿಲ್ಲ. ಈ ಭಾರಿಯೂ ಕೂಡ ಜಾತಿವಾದಕ್ಕೆ ಅವಕಾಶ ನೀಡಲಿಲ್ಲ. ಇದು ಕೊಡಗಿನಲ್ಲಿ ನಡೆಯುವದಿಲ್ಲ ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಮುಖಂಡ ಬೋಸ್ ದೇವಯ್ಯ ಚುನಾವಣೆಯಲ್ಲಿ ಜಾತಿಯ ಹೆಸರಿನಲ್ಲಿ ನಡೆದ ಕೊಡವಾಮೆ ಬೋಪಯ್ಯ ಅವರ ಗೆಲುವಿಗೆ ಮುಳುವಾಗಲಿಲ್ಲ. ಕಾರ್ಯಕರ್ತರೇ ಹೈಕಮಾಂಡ್ ಸ್ಥಾನದಲ್ಲಿ ನಿಂತು ಗೆಲುವಿನಲ್ಲಿ ಪಾತ್ರವಹಿಸಿದರು ಎಂದರು. ಎಂಎಲ್‍ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಜಾತಿ ಹೆಸರಿನಲ್ಲಿ ಸೋಲಿಸಲು ಮುಂದಾದರೆ ಪ್ರಯೋಜನವಿಲ್ಲ ಎಂಬವದು ಈ ಭಾರಿಯ ಚುನಾವಣೆಯಲ್ಲಿ ಸಾಬೀ ತಾಗಿದೆ. ಬಿಜೆಪಿ ಜಾತಿ ವಿಚಾರದಲ್ಲಿ ಸೋಲು ಅನುಭವಿಸುವದಿಲ್ಲ.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ವೀರಾಜಪೇಟೆ ಮಂಡಲ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಪ್ರಮುಖರುಗಳಾದ ಮನುಮುತ್ತಪ್ಪ, ರೀನಾ ಪ್ರಕಾಶ್, ಯಮುನಾ ಚೆಂಗಪ್ಪ, ಕಾಂತಿ ಸತೀಶ್, ಲಾಲಾ ಭೀಮಯ್ಯ ಪಾಲ್ಗೊಂಡಿದ್ದರು. ವಿವಿಧ ಭಾಗಗಳ ಕಾರ್ಯಕರ್ತರು ಭಾಗವಹಿಸಿದ್ದರು.