ಯೋಗ ಆರೋಗ್ಯದ ರಹಸ್ಯ. ಇದಕ್ಕೆ ಜಾತಿ, ಮತ ಪಂಥವಿಲ್ಲ. ಸ್ವಚ್ಛ ಗಾಳಿ-ಬೆಳಕಿನಂತೆ, ತಿಳಿ ನೀರಿನಂತೆ ಅದು ಸರ್ವೇಸಾಮಾನ್ಯವಾದುದು.
ಇದು ಅನಾದಿ ಕಾಲದಿಂದಲೂ ಬೆಳೆದು ಬಂದಿರುವಂತಹುದು, ಸರ್ವ ಕ್ಷೇತ್ರಕ್ಕೂ ಪ್ರೋತ್ಸಾಹಿಸಿದಂತೆ, ನಮ್ಮ ಪೂರ್ವಜರು ಯೋಗಕ್ಕೂ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಿದ್ದಾರೆ. ಇಂದು ವಿಶ್ವದಾದ್ಯಂತ ಕುತೂಹಲ, ಆಕರ್ಷಣೆಯನ್ನು ಪಡೆಯುತ್ತಿರುವ ಯೋಗದ ತವರು ಭಾರತ. ಪತಾಂಜಲಿಯರೇ ಯೋಗ ಸೂತ್ರಧಾರಿ. ಈ ಯೋಗ ಪಿತಾಮಹನ ಯೋಗ ಸೂತ್ರಧಾರನಾದ ಮೇಲೆ ಯೋಗಾಭ್ಯಾಸಗಳನ್ನು, ಯೋಗಗಳನ್ನು ಮಾಡಲಾಗುತ್ತಿದೆ. ಯೋಗವನ್ನು ಸ್ತ್ರೀ-ಪುರುಷರು ಎಂಬ ಭೇದವಿಲ್ಲದೆ ಎಲ್ಲರೂ ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಯೋಗದ ಬಗೆಗಿನ ಪರಿಣಾಮಕಾರಿ ಪ್ರಚಾರ ಇಂದು ದೇಶದಾದ್ಯಂತ, ಮುಖ್ಯವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪ್ರಭಾವ ಬೀರಿದೆ. ಪ್ರಧಾನಿಯವರು ಯೋಗದ ಮಹತ್ವ ಕಂಡು ವಿಶ್ವ ನಾಯಕರಿಗೆ ಅಂತರರಾಷ್ಟ್ರೀಯ ಯೋಗ ದಿನ ಅಳವಡಿಸುವಂತೆ ವಿಶ್ವ ಸಂಸ್ಥೆಯಲ್ಲಿ ಕೇಳಿಕೊಂಡ ಕಾರಣ ಜೂನ್ 21ನ್ನು ವಿಶ್ವಯೋಗ ದಿನವೆಂದು ಆಚರಿಸಲಾಗುತ್ತಿದೆ. ಉತ್ತಮ ಶೈಕ್ಷಣಿಕ ಪರಿಸರಕ್ಕೆ ಸ್ವಚ್ಛ ಮತ್ತು ಆರೋಗ್ಯಕರ ಮನಸ್ಸುಗಳ ಅಗತ್ಯವಿದೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಒತ್ತಡದ ಕಾವು ಹೆಚ್ಚುತ್ತಿದ್ದು, ಇದಕ್ಕೆ ದೋಷಯುಕ್ತ ಜೀವನ ಶೈಲಿಯೇ ಕಾರಣವೆನ್ನಿಸಿದೆ. ಸಾಮಾಜಿಕ ಮೌಲ್ಯಗಳ ಜೊತೆಗೆ ವಿದ್ಯಾರ್ಥಿಗಳು ಸಮಾಜದೊಂದಿಗೆ ಆರೋಗ್ಯಕರವಾಗಿ ಸಮ್ಮಿಳಿತಗೊಳ್ಳುವ ನಿಟ್ಟಿನಲ್ಲಿ ಇಂದು ವಿಶ್ವವಿದ್ಯಾಲಯ ಮಟ್ಟದಲ್ಲಿ ಧ್ಯಾನ ಮತ್ತು ಯೋಗಾಭ್ಯಾಸವನ್ನು ಅಳವಡಿಸಲಾಗಿದೆ. ಯೋಗದೊಂದಿಗೆ ಧ್ಯಾನ ಹಾಗೂ ಉಸಿರಾಟದ ವ್ಯಾಯಾಮಗಳನ್ನು ನಿಯಮಿತವಾಗಿ ಅಳವಡಿಸಿ ಕೊಂಡರೆ ಒಂದಕ್ಕೊಂದು ಪೂರಕ ಎನ್ನಿಸಿ, ಆರೋಗ್ಯಕ್ಕೆ ಹೆಚ್ಚಿನ ಲಾಭವಾಗುವದು.
ದೈನಂದಿನ ಜೀವನದಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲಿಕ್ಕೆ, ಮಾನಸಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಲಿಕ್ಕೆ ಯೋಗ ಸೂಕ್ತ ಮಾರ್ಗದರ್ಶಕವಾಗಿದೆ. ಮಹತ್ವದ ಅಷ್ಟಾಂಗ ಯೋಗದ ಮೂರನೇ ಭಾಗವಾದ ಯೋಗಾಸನಗಳು ಪುರುಷರ, ಸ್ತ್ರೀಯರ ಪ್ರಪಂಚ-ಪರಮಾರ್ಥಗಳೆರಡರ ಬೆಳವಣಿಗೆಗೂ ಅತಿ ಉಪಯುಕ್ತವಾದ ವಿಷಯವಾಗಿದೆ. ಮನುಷ್ಯನಿಗೆ ರೋಗ ಬರುವದು ಸಹಜ, ಇದನ್ನು ತಡೆಯಲು ಪ್ರತಿರೋಧ ಶಕ್ತಿ ವೃದ್ಧಿಸುವ ಅತ್ಯಂತ ಸುಲಭ ಮಾರ್ಗವೆಂದರೆ ಅದು ಯೋಗ. ನಿತ್ಯ ಯೋಗ ಮಾಡುವವರು ನಿರೋಗಿಯಾಗಿರುವರು. ಯೋಗಾಭ್ಯಾಸಕ್ಕೆ ಶ್ರದ್ಧೆ, ದೃಢ ಮನೋಭಾವ, ನಂಬಿಕೆ ಬಹಳ ಮುಖ್ಯ. ಯೋಗದ ನಿರಂತರ ಅಭ್ಯಾಸದಿಂದ ದೈಹಿಕ ಮಾನಸಿಕ ಸ್ವಾಸ್ಥ್ಯದ ಮೇಲೆ ಉತ್ತಮ ಪರಿಣಾಮ ಉಂಟಾಗಿ, ಮನಸ್ಸಿಗೆ ಪ್ರಪುಲ್ಲತೆ ಮೂಡುವದು. ಮುಖದಲ್ಲಿ ಕಣ್ಣಿನಲ್ಲಿ ಕಾಂತಿ ಹೊರ ಹೊಮ್ಮುವದು. ದೇಹದ ನರನಾಡಿ ಗಳೆಲ್ಲಾ ಹುರುಪುಗೊಂಡು, ಚೈತನ್ಯ ಶಕ್ತಿ ಹೆಚ್ಚಿ ನಡವಳಿಕೆಗಳಲ್ಲಿ ಆತ್ಮಸ್ಥೈರ್ಯ ಹೆಚ್ಚುವದು. ಕೀಳರಿಮೆ ದೂರವಾಗುವದು. ಆಯಸ್ಸು ಆರೋಗ್ಯ ಹೆಚ್ಚುವದು. ಚಿರ ಯೌವ್ವನದ ಚೇತನ ಉಂಟಾಗುವದು.
ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಸ್ಥೂಲತ್ವ, ಸೊಂಟ ನೋವು, ಬೆನ್ನು ನೋವು, ಹೊಟ್ಟೆ ನೋವು, ಕೀಲು ನೋವು, ಮುಟ್ಟಿನ ಸಮಸ್ಯೆ, ಮಲಬದ್ಧತೆ, ಉಸಿರಾಟದ ತೊಂದರೆ ಇನ್ನೂ ಹಲವಾರು ಸಮಸ್ಯೆಗಳಿಗೆ ಹಲವು ನಿರ್ಧಿಷ್ಟವಾದ ಆಸನಗಳನ್ನು ಕ್ರಮಬದ್ಧವಾಗಿ, ನಿಯಮಿತ ಆಹಾರ ಸೇವನೆಯಿಂದ ಅಳವಡಿಸಿಕೊಂಡರೆ ಸಮಸ್ಯೆಗಳನ್ನು ನಿವಾರಿಸಿಕೊಂಡು ಪರಿಹಾರ ಕಾಣಲು ಸಾಧ್ಯ. ಯೋಗಾಸನಗಳ ಜೊತೆಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಕೂಡ ಉತ್ತಮ ಪೂರಕ ಮಾರ್ಗಗಳೇ ಹೌದು. ಇದರಿಂದ ಚಂಚಲತೆ ದೂರವಾಗಿ, ಮಾನಸಿಕವಾಗಿ ಶಾಂತಿ ಲಭಿಸುವದು, ಮನಸ್ಸನ್ನು ನಿಗ್ರಹಿಸುವ ಶಕ್ತಿ ವೃದ್ಧಿಯಾಗುವದು.
ಜೀವನದಲ್ಲಿ ಸಾಮಾನ್ಯವಾಗಿ ಬರುವಂತಹ ಅನೇಕ ಒತ್ತಡಗಳನ್ನು ಎದುರಿಸಲು ಮಾನಸಿಕ ಬಲ ಅಗತ್ಯ, ಇದನ್ನು ಯೋಗ ತಂದು ಕೊಡುವದು, ಸಾರ್ಥಕ ಬದುಕಿಗಾಗಿ, ಶಿಸ್ತನ್ನು ಅಳವಡಿಸಿಕೊಳ್ಳಲು ಯೋಗ ಸೂಕ್ತ ಮಾರ್ಗವಾಗಿದೆ. ಯೋಗಾಸನದ ಸಮಗ್ರ ಅನುಭವವಿರುವ ಗುರುವಿನ ಮೂಲಕ ಕಲಿತರೆ, ಸಂಪೂರ್ಣ ಯಶಸ್ಸು ನಮ್ಮದಾಗುವದು. ‘‘ಆರೋಗ್ಯವುಳ್ಳ ಶರೀರವೇ ಆತ್ಮದ ಅರಮನೆ’’ ದೇಹದ ಸೌಂದರ್ಯ, ಮುಖದ ಕಾಂತಿ, ದೇಹ ಸ್ವಾಸ್ಥ್ಯ, ಇಂತಹ ದೈಹಿಕ ವಿಷಯವಷ್ಟೇ ಯೋಗದ ಗುರಿಯಲ್ಲ. ಹೊರಗಿನ ಸೌಂದರ್ಯ ವಿಕಸಿತವಾದಂತೆ, ಒಳಗಿನ ಹೃದಯವು ಅರಳಬೇಕು. ಆಗಲೇ ಜೀವನ ಸಾರ್ಥಕ, ಯೋಗ ಫಲವು ಸಾರ್ಥಕ.
ಇಂದು ವಿಶ್ವದಲ್ಲಿ ಎಲ್ಲಾ ಜನಾಂಗದವರನ್ನು ಯೋಗ ಸೂಜಿಗಲ್ಲಿನಂತೆ ಆಕರ್ಷಿಸ ತೊಡಗಿದೆ. ಯೋಗದಿಂದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ವಿಕಾಸ ಸಾಧ್ಯ. ಭಾರತದಲ್ಲಿ ಜರುಗಿದ ಸಂಯುಕ್ತ ರಾಷ್ಟ್ರ ಸಾರ್ವತ್ರಿಕ ಸಭೆಯಲ್ಲಿ 2014 ಡಿಸೆಂಬರ್ 11 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ನಡೆಸಬಹುದೆಂದು ತೀರ್ಮಾನಿಸಿದೆ. 5000 ವರ್ಷಗಳ ಇತಿಹಾಸವಿರುವ ಭಾರತೀಯ ಸಂಸ್ಕøತಿಯ ಕಲೆಯಾದ ಯೋಗವನ್ನು ಉಳಿಸಿ, ಬೆಳೆಸುವಲ್ಲಿ ನಾವೆಲ್ಲಾ ಪ್ರಯತ್ನಿಸಬೇಕು. ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರು ಯು. ಎನ್. ಅಸೆಂಬ್ಲಿಯಲ್ಲಿ ನೀಡಿದ ಯೋಗ ದಿನದ ಕರೆಗೆ ಇಂದು ವಿಶ್ವವೇ ಮನ್ನಣೆ ನೀಡಿ, ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸುವಂತಾಗಿದೆ.
ವಿಶ್ವ ಯೋಗದ ಪ್ರಮುಖ ಉದ್ದೇಶಗಳು ಇಂತಿವೆ. ಜನರಿಗೆ ಯೋಗದ ಬಗೆಗಿನ ಮಾಹಿತಿ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ತಿಳಿಸುವದು, ಯೋಗದ ಅಭ್ಯಾಸದ ಬಗ್ಗೆ ಜನರಿಗೆ ತಿಳಿಸುವದು, ಯೋಗ ಧ್ಯಾನದ ವಿಚಾರಗಳು, ಯೋಗದ ಮೂಲಕ ವಿಶ್ವದಾದ್ಯಂತ ಆರೋಗ್ಯ ರಕ್ಷಣೆ, ಯೋಗದ ಮೂಲಕ ಕಾಯಿಲೆಗಳ ನಿಯಂತ್ರಣದ ಬಗ್ಗೆ ತಿಳುವಳಿಕೆ ಮೂಡಿಸುವದು, ಯೋಗದ ಸಮಗ್ರ ಪ್ರಯೋಜನಗಳನ್ನು ಜನರಿಗೆ ತಲಪಿಸುವದು, ಶಾಂತಿ ನೆಮ್ಮದಿಯನ್ನು ಯೋಗದ ಮೂಲಕ ಪಡೆಯುವ ಬಗ್ಗೆ ತಿಳುವಳಿಕೆ, ಒತ್ತಡ ನಿವಾರಣೆ, ದೈಹಿಕ ಮಾನಸಿಕ ಖಾಯಿಲೆಗಳಿಗೆ ಯೋಗದ ಮೂಲಕ ಪರಿಹಾರ, ಆರೋಗ್ಯಕರ ಜೀವನ ಶೈಲಿಗೆ ದೈಹಿಕ ಚಿತ್ತಶಾಂತಿ ಇವೆಲ್ಲಾ ವಿಶ್ವ ಯೋಗದ ಉದ್ದೇಶಗಳು.
ಯೋಗ ಎನ್ನುವ ಪದ ಸಂಸ್ಕøತ ಮೂಲಧಾತುವಾದ ‘‘ಯುಜ್’’ ಎನ್ನುವದರಿಂದ ಬಂದಿದ್ದು ‘‘ಕೂಡಿಸು ಚಿತ್ತವನ್ನು ನಿರ್ದೇಶಿಸು, ಕೇಂದ್ರೀಕರಿಸು’’ ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಯುಜ್ಸತೇ ಸಮಾಧೀಯತೇನೇನ ಇತಿಯೋಗ; ಇದು ಯೋಗ ಶಬ್ಧದ ಉತ್ಪತ್ತಿಯಾಗಿದೆ. ಇಲ್ಲಿ ಜೀವಾತ್ಮವನ್ನು ಯಾವದು ಸಾಕ್ಷಾತ್ಕಾರದೆಡೆಗೆ (ಪರಮಾತ್ಮನೆಡೆಗೆ) ಒಯ್ಯುವದೋ ಅದು ಯೋಗ. ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ ಮತ್ತು ರಾಜಯೋಗಗಳೆಂದು ನಾಲ್ಕು ವಿಧದ ಯೋಗಗಳಿವೆ.
ಆಧುನಿಕ ಯೋಗದ ಉದ್ದೇಶ ಆಧ್ಯಾತ್ಮಿಕ ಗುರಿಗಳನ್ನು ಸಾಧಿಸುವದು. ದೈಹಿಕ ಭಂಗಿಗಳನ್ನು ವ್ಯವಸ್ಥಿತ ರೂಪದಲ್ಲಿ ಸಾಧಿಸುವದು. ಜೂನ್ 21 ರಂದು ಇಡೀ ವಿಶ್ವ ಭಾರತೀಯ ಸಂಸ್ಕøತಿಯ ಆರೋಗ್ಯ ಕಲೆಯಾದ ಯೋಗವನ್ನು ಮಾಡುವದರ ಮೂಲಕ ವಿಶ್ವ ಯೋಗ ದಿನವನ್ನಾಗಿ ಆಚರಿಸಲಿದೆ. ಯೋಗ ಕಲೆಗೆ ವಿಶ್ವದಾದ್ಯಂತ ಮನ್ನಣೆ ದೊರೆತು, ಇಡೀ ವಿಶ್ವವೇ ಯೋಗದಿಂದ ಆರೋಗ್ಯ ಪಡುವದು ನಿಜಕ್ಕೂ ಸಂತಸದ ವಿಚಾರ. ಭಾರತೀಯರಾದ ನಾವು ಯೋಗದ ಮಹತ್ವ ಅರಿತು ಯೋಗಾಭ್ಯಾಸದ ಮೂಲಕ ಆರೋಗ್ಯ ಸಾಧಿಸಬೇಕು. ಈ ನಿಟ್ಟಿನಲ್ಲಿ ಜೂನ್ 21 ರಂದು (ನಾಳೆ) ನಾವೆಲ್ಲರೂ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ವಿಶ್ವದೊಂದಿಗೆ ಕೈ ಜೋಡಿಸೋಣ.
?ಪಿ. ವಿ. ಬಿಂದು,
ಮಡಿಕೇರಿ.