ಸೋಮವಾರಪೇಟೆ, ಜೂ. 19: ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಶಿವಪುರ ಸಮೀಪ ಭಾರಿ ಗಾತ್ರದ ಮಾವಿನ ಮರದ ರೆಂಬೆ ಮುರಿದು ರಸ್ತೆಗಡ್ಡಲಾಗಿ ಬಿದ್ದಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ.

ಇಂದು ಬೆಳಗ್ಗಿನ ಜಾವ 7.30ಕ್ಕೆ ಘಟನೆ ಸಂಭವಿಸಿದ್ದು, ವಾಹನ ದಟ್ಟಣೆ ಕಡಿಮೆಯಿದ್ದ ಕಾರಣ ಅನಾಹುತ ತಪ್ಪಿದಂತಾಗಿದೆ. ವಿದ್ಯುತ್ ಕಂಬ ಮುರಿದು, 11ಕೆ.ವಿ. ತಂತಿಗಳು ತುಂಡಾಗಿವೆ. ಮಾಹಿತಿ ಪಡೆದ ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಮಾರ್ಗ ಸರಿಪಡಿಸಿದರು. ರಸ್ತೆಯ ಎರಡೂ ಬದಿ ಅಪಾಯಕಾರಿ ಮರಗಳಿದ್ದು, ಸರ್ಕಾರಿ ಬಸ್‍ಗಳು, ಖಾಸಗಿ ಬಸ್‍ಗಳು, ಶಾಲಾ ವಾಹನಗಳು, ಕಾರ್ಮಿಕರನ್ನು ತುಂಬಿಸಿಕೊಂಡು ತೆರಳುವ ವಾಹನಗಳ ಸಂಖ್ಯೆ ಅಧಿಕವಿರುತ್ತದೆ. ಸೋಮವಾರ ಪೇಟೆಯಿಂದ ಕೊಡ್ಲಿಪೇಟೆವರೆಗಿನ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಅಪಾಯ ಕಾರಿ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಬೀಟಿಕಟ್ಟೆಯ ರಾಜು ಆಗ್ರಹಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಒಂದೂವರೆ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ನಂತರ ಭಾರೀ ಗಾತ್ರದ ಮರವನ್ನು ಲೋಕೋಪಯೋಗಿ ಇಲಾಖಾ ಸಿಬ್ಬಂದಿಗಳು ತೆರವುಗೊಳಿಸಿದರು.