ಮಡಿಕೇರಿ, ಜೂ. 19: ಮಡಿಕೇರಿ ನಗರದ ಒತ್ತಿನಲ್ಲೇ ಇದ್ದರೂ ಇದೊಂದು ಹಸಿರು ಕಾನನದ ನಡುವಿನ ಹಾದಿ... ಈ ರಸ್ತೆಯಲ್ಲಿ ಬರುವ ಮನೆಯೊಂದರಲ್ಲಿ ಇಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಈ ಮನೆ ಮಂದಿ ಮಾತ್ರವಲ್ಲ, ಈ ಕುಟುಂಬಕ್ಕೆ ಸೇರಿದ ಹಲವರೂ ಅಲ್ಲಿ ಜಮಾವಣೆಯಾಗಿದ್ದರು. ತಮ್ಮ ತಮ್ಮ ಕೆಲಸಕ್ಕೆಂದು ತೆರಳಿದ್ದ ಮಂದಿಯೂ ಹಿಂತಿರುಗಿ ಬಂದಿದ್ದರು. ಮುಖ್ಯವಾಗಿ ಹಲ್ಲಿಲ್ಲದ ಇಳಿವಯಸ್ಸಿನ ಪುಟ್ಟ ಶರೀರದ ಮಹಿಳೆಯೊಬ್ಬರು ಸೇರಿ ಎಲ್ಲರ ಮೊಗದಲ್ಲೂ ಅದೇನೋ ಹರುಷ ಕಂಡುಬರುತ್ತಿತ್ತು. ಕಣ್ಣುಗಳಲ್ಲೂ ಈ ಭಾವ ವ್ಯಕ್ತಗೊಳ್ಳುತ್ತಿತ್ತು.ಇಬ್ಬರು ಪುರುಷರು ಮನೆಯೊಳಗಿನ ಕುರ್ಚಿಯಲ್ಲಿ ಆಸೀನರಾಗಿದ್ದರೆ, ಇತರ ಹಲವರು ಮನೆಯಲ್ಲಿ ತುಂಬಿದ್ದರು. ಇದು ಈ ಕುಟುಂಬದ ಮಂದಿಗೆ ಅನಿರೀಕ್ಷಿತವಾಗಿ ಎದುರಾಗಿದ್ದ ಸನ್ನಿವೇಶ. ಈ ಮೂಲಕ ಈ ಮನೆಯಲ್ಲಿ ಸಂತಸ ಅರಳಿದ್ದ ಪ್ರಸಂಗವಿದು...ಇದಕ್ಕೆಲ್ಲ ಕಾರಣ ಈ ಕುಟುಂಬಕ್ಕೆ ಸೇರಿದ ಇಬ್ಬರು ಸಹೋದರರು ಅದೆಷ್ಟೋ ವರ್ಷಗಳ ಬಳಿಕ ತಮ್ಮವರನ್ನು ಸೇರಿದ್ದು... ಈ ಕುಟುಂಬದ ಸಂತಸಕ್ಕೆ ಕಾರಣವಾಗಿದ್ದು ಕೊಡಗಿನ ಜನತೆಯ ಧ್ವನಿ ‘ಶಕ್ತಿ’ ಎಂಬದೂ ಇಲ್ಲಿ ಉಲ್ಲೇಖಾರ್ಹ.
(ಮೊದಲ ಪುಟದಿಂದ) ಕೇರಳದ ತಿರುವಲ್ಲಂನಿಂದ ಕೊಡಗಿಗೆ ಆಗಮಿಸಿ ನೆಲೆಕಂಡುಕೊಂಡಿದ್ದ ಕುಟುಂಬವೊಂದರ ಕಥೆಯಿದು. ಸುಮಾರು 50 ವರ್ಷಗಳ ಹಿಂದೆ ಕೇರಳದ ಕುಮಾರ್ ಹಾಗೂ ತಂಗಮ್ಮ ದಂಪತಿ ಮಡಿಕೇರಿ ಬಳಿಯ ಸಿಂಕೋನ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಹಿರಿಯಣ್ಣನ ಹೆಸರು ಶೇಖರ್ ನಾಯರ್. ಪ್ರಸ್ತುತದ ಕೊಡಗೇ 21ನೇ ಶತಮಾನದಲ್ಲಿ ಪರಸ್ಪರ ಸಂಪರ್ಕವಿಲ್ಲದಂತಹ ಸನ್ನಿವೇಶದಲ್ಲಿರುವಾಗ ಆಗಿನ ಚಿತ್ರಣ ಹೇಗಿದ್ದಿರಬಹುದು? ಬದುಕಿನ ಜಂಜಾಟದ ನಡುವೆ ಸಣ್ಣ ಪ್ರಾಯದಲ್ಲಿ ಶೇಖರ್ ನಾಯರ್ ಮನೆ ಬಿಟ್ಟು ಹೋಗಿ ಮುಂಬಯಿ ಸೇರಿಕೊಂಡಿದ್ದರು. ಕೆಲವು ಸಮಯ ಪತ್ರ ವ್ಯವಹಾರದ ಮೂಲಕ ಇವರು ಸಂಪರ್ಕದಲ್ಲಿದ್ದರು.
ಈ ಸಂದರ್ಭದಲ್ಲಿ ಅವರ ಸಹೋದರ ಆನಂದ್ ನಾಯರ್ ಅಣ್ಣನ ಪತ್ರದಲ್ಲಿ ಇದ್ದ ವಿಳಾಸ ಇಟ್ಟುಕೊಂಡು ತಾನೂ 12ನೇ ವರ್ಷದಲ್ಲಿ ಮನೆಬಿಟ್ಟು ಹೋಗಿ ಮುಂಬಯಿಯಲ್ಲಿ ಅಣ್ಣನನ್ನು ಸೇರಿಕೊಂಡಿದ್ದರು. ನಂತರದ ವರ್ಷಗಳಲ್ಲಿ ಇವರ ಸಂಪರ್ಕ ಕಡಿಮೆಯಾಗುತ್ತಾ ಬಂದಿದೆ. ಸಿಂಕೋನ ತೋಟದಲ್ಲಿದ್ದ ತಂದೆ-ತಾಯಿ ಆ ಜಾಗ ಬಿಟ್ಟು ತಮ್ಮ ಹಿರಿಯ ಪುತ್ರಿಯಾದ ಶಾಂತಳ ಮನೆ ಸೇರಿಕೊಂಡಿದ್ದರು. ಈ ನಡುವೆ ಶೇಖರ್ ನಾಯರ್ ಒಮ್ಮೆ ಮಾತ್ರ ಬಂದು ಹೋಗಿದ್ದು, ನಂತರ ಇತ್ತ ತಲೆ ಹಾಕಿರಲಿಲ್ಲ. ಆ ಸಂದರ್ಭದ ಸಿಂಕೋನ ವ್ಯಾಪ್ತಿಗೂ ಈಗಿನ ಕನ್ನಂಡ ಬಾಣೆಯ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸವಾಗಿದೆ. ವಿಳಾಸವಾಗಲಿ, ಸ್ಥಳವಾಗಲಿ, ದೂರವಾಣಿಯ ಸಂಪರ್ಕವಾಗಲಿ ಇವರ ನಡುವೆ ಇರಲಿಲ್ಲ.
ಮುಂಬಯಿ ಸೇರಿದ್ದ ಸಹೋದರರಿಬ್ಬರು ಅಲ್ಲೇ ಬದುಕು ಕಂಡುಕೊಂಡು ಸಂಸಾರಸ್ಥರೂ ಆಗಿ ಅಲ್ಲಿಯೇ ನೆಲೆ ನಿಂತರೆ, ಇತ್ತ ಉಳಿದ ಮಕ್ಕಳೊಂದಿಗೆ ತಂದೆ-ತಾಯಿ ಬೇರೆಯಾಗಿ ಬದುಕುತ್ತಿದ್ದರು. ಪುತ್ರ ವಾತ್ಸಲ್ಯದಂತೆ ಆರಂಭದಲ್ಲಿ ಇದ್ದ ಪುತ್ರನ ವಿಳಾಸಕ್ಕೆ ಪತ್ರ ಬರೆದರೂ ಅವರು ಬೇರೆ ಕಡೆ ತೆರಳಿದ್ದರಿಂದ ಹಿಂತಿರುಗಿ ಬಂದಿತ್ತು. ತಂದೆ ಕುಮಾರ್ಗೆ ಪುತ್ರರನ್ನು ಕಾಣುವ ಆಸೆಯಿದ್ದರೂ ಈಡೇರದೆ ನಂತರದ ವರ್ಷದಲ್ಲಿ ವಿಧಿವಶರಾಗಿದ್ದರು. ಕಳುಹಿಸಿದ್ದ ಟೆಲಿಗ್ರಾಂ ಕೂಡ ತಲಪಲಿಲ್ಲ. ವೃದ್ಧೆ ತಾಯಿ ತಂಗಮ್ಮಳ ಮನದಲ್ಲಿ ಪುತ್ರರನ್ನು ಕಾಣುವ ಆಸೆ ಇತ್ತಾದರೂ ಪುತ್ರಿಯ ಮನೆಯಲ್ಲಿ ಮುದುಡಿ ಕೂರಬೇಕಾಯಿತು. ಅವರ ಸಂಸಾರ ಅಲ್ಲಿಯಾದರೆ ಇಲ್ಲಿಯವರು ತಮ್ಮ ಸಂಸಾರದೊಂದಿಗೆ ಪರಸ್ಪರ ಸಂಪರ್ಕವಿಲ್ಲದೆ ಜೀವಿಸುತ್ತಿದ್ದರು.
ಆಸೆ ಹೆಚ್ಚಾಯಿತು...
ಇದೀಗ ಹಲವು ಸಮಯದಿಂದ ಮುಂಬಯಿಯಲ್ಲಿದ್ದ ಶೇಖರ್ ನಾಯರ್ಗೆ ಸಂಬಂಧಿಕರನ್ನು ಕಾಣುವ ತವಕ ಹೆಚ್ಚಾಗಿತ್ತು. ಆದರೆ ಎಲ್ಲಿದ್ದಾರೆ... ಹೇಗಿದ್ದಾರೆ ಎಂಬದು ತಿಳಿದು ಬಾರಲಿಲ್ಲ. ತಮ್ಮ ಆನಂದ್ ನಾಯರ್ ನೊಂದಿಗೂ ಇದನ್ನು ಹೇಳಿಕೊಂಡಿದ್ದಾರೆ. ಇದರಂತೆ ಸಹೋದರರಿಬ್ಬರು ತಮ್ಮ ಸಂಸಾರಕ್ಕೆ ತಿಳಿಸದೆ ‘ಪಿಕ್ನಿಕ್’ ಬಂದವರಂತೆ ಹೇಳಿ ಮಡಿಕೇರಿಗೆ ಆಗಮಿಸಿದ್ದಾರೆ. ಹೊಟೇಲ್ ರೂಂ ಮಾಡಿ 3 ದಿನಗಳಿಂದ ಇಲ್ಲೇ ತಂಗಿದ್ದಾರೆ. ಬಾಲ್ಯದ ಸ್ಥಳದಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ತಾ. 19ರ ‘ಶಕ್ತಿ’ಯಲ್ಲಿ ಹಳೆಯ ವಿಚಾರಗಳನ್ನು ಉಲ್ಲೇಖಿಸಿ ಮೊಬೈಲ್ ಸಂಖ್ಯೆ, ಭಾವಚಿತ್ರ ಸಹಿತವಾಗಿ ತಮ್ಮನ್ನು ಸಂಪರ್ಕಿಸುವಂತೆ ಪ್ರಕಟಣೆ ನೀಡಿದ್ದರು.
ಮರುದಿನವೇ ಸುದಿನ...
ತಾ. 19ರ ಪತ್ರಿಕೆಯಲ್ಲಿ ಪ್ರಕಟವಾದ ಈ ಜಾಹೀರಾತು ನೆರೆಮನೆಯವರ ಮೂಲಕ ಇವರ ತಾಯಿ ನೆಲೆಸಿರುವ ಕನ್ನಂಡಬಾಣೆಯ ಪುತ್ರಿ ಶಾಂತಳ ಮನೆಯವರಿಗೆ ಬೆಳಿಗ್ಗೆ 7.30ಕ್ಕೆ ತಲಪಿದೆ. ಇದರಂತೆ ಮೊಬೈಲ್ಗೆ ಕರೆ ಮಾಡಿದಾಗ ಅವರೇ ಇವರು... ಇವರೇ ಅವರು ಎಂಬದು ಅರಿವಾಗಿ ಪರಸ್ಪರ ಬೆರೆತ ಮಾರ್ಮಿಕ ಕಥೆಯಿದು.
ನೈಜಾಂಶ ಅರಿತೊಡನೆ ಇತರ ಪುತ್ರಿಯರು, ಅವರ ಮಕ್ಕಳು ಹೀಗೆ ಎಲ್ಲರೂ ಈ ಮನೆಯಲ್ಲಿ ಸೇರಿದ್ದಾರೆ. ವೃದ್ಧೆ ತಾಯಿ ತಂಗಮ್ಮಳಿಗೆ ಸಾಯುವ ಮುಂಚೆ ಪುತ್ರರನ್ನು ನೋಡುವ ಆಸೆ ಈಡೇರಿದ್ದು, ಆನಂದ ತುಂದಿಲರಾಗಿದ್ದರೆ, ಹಿರಿಯ ಸಹೋದರನ ಮಾತ್ರ ನೆನಪು ಮಾತ್ರ ಇದ್ದ ಇತರ ಸಹೋದರಿಯರು ಖುಷಿಯಿಂದ ಬೆರೆತಿದ್ದರು. ಇವರ ಮಕ್ಕಳು, ಮಾವಂದಿರನ್ನು ಕಂಡ ಸಂತಸದಲ್ಲಿ ಕಂಡುಬಂದರು. 8 ಗಂಟೆಗೆ ಆನಂದ್ ‘ಶಕ್ತಿ’ಗೆ ದೂರವಾಣಿ ಕರೆ ಮಾಡಿ ಆನಂದದ ಅಭಿನಂದನೆ ಸಲ್ಲಿಸಿದರು.
‘ಶಕ್ತಿ’ ಬಳಗ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಎಲ್ಲರೂ ಮಂದಸ್ಮಿತವದನದೊಂದಿಗೆ ಇದಕ್ಕೆ ಕಾರಣವಾದ ಪತ್ರಿಕೆಯನ್ನೂ ನೆನಪಿಸಿಕೊಂಡರು. ಮುಂಬಯಿಯ ಸಹೋದರರು ಬಳಿಕ ತಮ್ಮ ಸಂಸಾರವನ್ನು ಸಂಪರ್ಕಿಸಿ ತಾವು ಮಡಿಕೇರಿಯಲ್ಲಿ ರಕ್ತ ಸಂಬಂಧಿಗಳೊಂದಿಗೆ ಸೇರಿರುವ ವಿಚಾರವನ್ನು ತಿಳಿಯಪಡಿಸಿದ್ದಾರೆ. ಅವರೂ ಇವರುಗಳೆಲ್ಲರನ್ನೂ ನೋಡುವ ಇಂಗಿತ ವ್ಯಕ್ತಪಡಿಸಿದ್ದು, ಇದೀಗ ಈ ತುಂಬು ಕುಟುಂಬ ‘ನಮ್ಮ ಸಂಸಾರ... ಆನಂದ ಸಾಗರ’ ಎಂಬ ಕನ್ನಡದ ಹಾಡಿನಂತೆ ಸಂಭ್ರಮದಲ್ಲಿದೆ.