ಮಡಿಕೇರಿ, ಜೂ.18: ಕೊಡಗು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಪೂರ್ಣ ಸಾಲ ಮನ್ನಾದ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಮೇ.30ರಂದು ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿದ ರಾಜ್ಯದ ಮುಖ್ಯ ಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ 15 ದಿನಗಳೊಳಗೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಮೂಲಕ ರೈತರ ಸಾಲ ಮನ್ನಾ ಮಾಡಿದ ಋಣ ಮುಕ್ತ ಪತ್ರವನ್ನು ಮನೆ ಬಾಗಿಲಿಗೆ ಕಳುಹಿಸಿ ಕೊಡುವದಾಗಿ ಹೇಳಿದ್ದರು. ಆದರೆ ಇದೀಗ ಅವಧಿ ಮೀರಿದ್ದರೂ ರೈತರ ಸಾಲದ ಬಗ್ಗೆ ಸ್ಪಷ್ಟವಾದ ತೀರ್ಮಾನ ಕೈಗೊಳ್ಳದಿರುವದರಿಂದ ರೈತರಲ್ಲಿ ಆತಂಕ ಮೂಡಿದೆ. ಶೂನ್ಯ ಬಡ್ಡಿದರದ ಲಾಭ ಪಡೆಯಲು

(ಮೊದಲ ಪುಟದಿಂದ) ಜೂನ್ 16ರೊಳಗೆ ಸಾಲದ ಕಂತನ್ನು ಪಾವತಿಸಬೇಕಾಗಿದೆ. ಹೊಸದಾಗಿ ಕೃಷಿ ಚಟುವಟಿಕೆಯನ್ನು ಆರಂಭಿಸಿಲು ರೈತರು ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವದಾಗಿ ನೀಡಿದ್ದ ಭರವಸೆ ಈಡೇರಲಿಲ್ಲ. ಹೀಗಾಗಿ ಕೂಡಲೇ ರೈತರ ಸಾಲ ಮನ್ನಾ ಮಾಡುವಂತೆ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ರೈತರ ಮನವಿ ಪತ್ರವನ್ನು ಸ್ವೀಕರಿಸಿ ರೈತರ ಸಾಲ ಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರವು ಇನ್ನು ಕೆಲವೇ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಅಲ್ಲಿವರೆಗೂ ರೈತರು ಸಂಯಮದಿಂದ ಇರುವಂತೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ಈಗಾಗಲೇ ರೈತರು ಈ ವರ್ಷದ ಮುಂಗಾರು ಮಳೆಯಲ್ಲಿ ಹಲವಾರು ನಷ್ಟ ಸಂಭವಿಸಿ ರೈತರ ಗದ್ದೆ ಹಾಗೂ ತೋಟಗಳಿಗೆ ಹಾನಿ ಆಗಿದೆ. ಆದ್ದುದರಿಂದ ಹಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ನೂತನ ಹೊಸ ಸಾಲವನ್ನು ಒದಗಿಸಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ರೈತರು ಪ್ರತಿಭಟನೆ ನಡೆಸುವ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ಸಾಲ ಮನ್ನಾ ವಿಚಾರದಲ್ಲಿ ರೈತರೊಂದಿಗೆ ನಮ್ಮ ಪಕ್ಷ ಸದಾ ಸಿದ್ದವಿದೆ. ಪಕ್ಷವು ಕೂಡ ತಿಂಗಳ ಗಡುವು ನೀಡಿದೆ. ಸಾಲ ಮನ್ನಾ ಮಾಡದಿದ್ದಲ್ಲಿ ಹೋರಾಟದ ಹಾದಿಯನ್ನು ಹಿಡಿಯಲಾಗು ವದು.ರೈತರೊಂದಿಗೆ ನಾನು ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದರು. ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ರೈತರ ಮನವಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಜಿಲ್ಲಾಡಳಿತವು ಆದಷ್ಟು ಬೇಗನೇ ಜಿಲ್ಲೆಯ ಎಲ್ಲಾ ಬ್ಯಾಂಕಿನ ಡಿಸ್ಟ್ರಿಕ್ಟ್ ಕೋಡಿನೇಟರ್ಸ್, ಡಿಸಿಸಿ ಬ್ಯಾಂಕ್ ಸಿಇಒ, ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್‍ನ ಉನ್ನತ ಅಧಿಕಾರಿರವರೊಂದಿಗೆ ವಿಶೇಷ ಸಭೆ ಕರೆದು ಕ್ರಾಪ್ ಲೋನ್, ಟರ್ಮ್‍ಲೋನ್, ಎನ್.ಪಿ.ಎ. ಓವರ್ ಡಿವ್ ಹಾಗೂ ಕೋರ್ಟ್‍ನಲ್ಲಿರುವ ರೈತರ ಸಾಲ ವಿಚಾರದ ಅಂಕಿ ಅಂಶಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಡಳಿತವು ಈ ಬಾರಿ ಸುರಿದ ಭಾರಿ ಮಳೆಯಿಂದ ರೈತರಿಗಾಗಿರುವ ಅಪಾರ ನಷ್ಟವನ್ನು ವಿಶೇಷ ಸಮಿತಿ ರಚಿಸಿ, ಹೋಬಳಿವಾರು ಸಮೀಕ್ಷೆ ನಡೆಸಿ ನಷ್ಟ ಪರಿಹಾರ ಕೂಡಲೇ ನೀಡುವಂತೆ ಮುಖಂಡರಾದ ಅಜ್ಜಮಾಡ ಚಂಗಪ್ಪ ಮನವಿ ಮಾಡಿದರು. ಮನವಿ ಸ್ವೀಕಾರ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಹಿರಿಯ ಮುಖಂಡರಾದ ಮಿಟ್ಟು ಚಂಗಪ್ಪ, ಹಾಜರಿದ್ದರು. ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಮಚ್ಚಮಾಡ ರಂಜಿ, ಚೋನಿರ ಸತ್ಯ, ಅಯ್ಯಮಾಡ ಹ್ಯಾರಿ ಸೋಮೇಶ್, ಕೆ.ಪಿ.ಗಣಪತಿ, ಪಿ.ಎಸ್.ಗಣಪತಿ, ಪ್ರವೀಣ್, ಮಲ್ಚೀರ ಗಿರೀಶ್,ಆಶೋಕ್, ಪುಳ್ಳಂಗಡ ಅಶೋಕ್, ಆದೇಂಗಡ ಆಶೋಕ್, ಕೆ.ಎನ್.ಚಂಗಪ್ಪ, ಸಿ.ಡಿ.ರಘು ತಿಮ್ಮಯ್ಯ, ಸೋಮೆಯಂಗಡ ಗಣೇಶ್ ತಿಮ್ಮಯ್ಯ,ಮುಂತಾದವರು ಹಾಜರಿದ್ದರು. -ಹೆಚ್.ಕೆ.ಜಗದೀಶ್