*ಗೋಣಿಕೊಪ್ಪಲು, ಜೂ. 18 : ತಿತಿಮತಿ ಬಳಿ ಹೆÀದ್ದಾರಿ ಸೇತುವೆ ಕುಸಿದಿರುವದರಿಂದ ಗೋಣಿಕೊಪ್ಪಲು, ಮೈಸೂರಿಗೆ ತೆರಳುವ ಪ್ರಯಾಣಿಕರು ಒಂದು ವಾರದಿಂದ ಪ್ರಯಾಸ ಪಡುವಂತಾಗಿದೆ. ಈ ಮಾರ್ಗದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು, ಅಳ್ಳೂರು, ಪಂಚವಳ್ಳಿ ಹಾಗೂ ಗೋಣಿಕೊಪ್ಪಲು ಮಾರ್ಗ ದಲ್ಲಿ ಸಂಚರಿಸುವ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ. ಪಿರಿಯಾಪಟ್ಟಣ ಹಾಗೂ ಪಂಚವಳ್ಳಿ ಹುಣಸೂರಿನಿಂದ ಬಹಳಷ್ಟು ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಗೋಣಿಕೊಪ್ಪಲಿಗೆ ಬಂದು ಹೋಗುತ್ತಿದ್ದರು. ಅವರೆಲ್ಲ ಈಗ ಮನೆಯಲ್ಲೇ ಕೂರುವಂತಾಗಿದೆ. ಕೆಲವು ಬಸ್‍ಗಳು ಪಿರಿಯಾಪಟ್ಟಣ ದಿಂದ ಮುತ್ತೂರು, ಮಾಲ್ದಾರೆ, ಗಟ್ಟದಳ್ಳ, ಪಾಲಿಬೆಟ್ಟ ಮಾರ್ಗವಾಗಿ ಸುಮಾರು 80 ಕಿಮೀ ದೂರ
(ಮೊದಲ ಪುಟದಿಂದ) ತಿರುವುಮುರುವಿನ ದಾರಿಯಲ್ಲಿ ಕ್ರಮಿಸಿ ಗೋಣಿಕೊಪ್ಪಲಿಗೆ ಬರುತ್ತಿವೆ. ಬಹಳ ದೂರ ಸುತ್ತಾಡಿ ಬರುತ್ತಿರುವದರಿಂದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಗೂ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಮೈಸೂರಿನಿಂದ ಗೋಣಿಕೊಪ್ಪಲು, ಪೊನ್ನಂಪೇಟೆಗೆ ನಿತ್ಯ ಓಡಾಡುವ ನೌಕರರು ಕೂಡ ಸಮಯಕ್ಕೆ ಸರಿಯಾಗಿ ಬರಲಾಗದೆ ತೀವ್ರ ಬವಣೆ ಅನುಭವಿಸುತ್ತಿದ್ದಾರೆ.
ಸೇತುವೆ ಕುಸಿದು ಬಿದ್ದ ಸಂದರ್ಭ ಒಂದೆರಡು ದಿನಗಳಲ್ಲಿ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ಇಂಜಿನಿಯರ್ ತಿಳಿಸಿದ್ದರು. ಅದರೆ ಒಂದು ವಾರ ಕಳೆದರೂ ಇದು ಸಾಧ್ಯವಾಗಿಲ್ಲ. ವಾಸ್ತವ ಸ್ಥಿತಿ ನೋಡಿದರೆ ಸಂಚಾರ ಆರಂಭಗೊಳ್ಳಲು ಇನ್ನೂ ಒಂದು ವಾರ ಬೇಕಾಗಬಹುದು ಎನಿಸುತ್ತದೆ ಎಂದು ನಿತ್ಯ ಮೈಸೂರಿನಿಂದ ಓಡಾಡುವ ಪೊನ್ನಂಪೇಟೆ ತಾಲೂಕು ಪಂಚಾಯಿತಿ ನೌಕರ ಸಿದ್ದಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಸೇತುವೆ ಕಾಮಗಾರಿ ಕೈಗೊಂಡಿದ್ದೇ ತಪ್ಪು. ಹೀಗಿದ್ದಾಗ ತಾತ್ಕಾಲಿಕ ಸೇತುವೆಯನ್ನು ತುಸು ಗಟ್ಟಿಯಾಗಿಯೇ ನಿರ್ಮಿಸಬೇಕಿತ್ತು. ಇಂಜಿನಿಯರ್ ಮಾಡುವ ತಪ್ಪಿನಿಂದ ಎಲ್ಲಾ ಪ್ರಯಾಣಕರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಪ್ರಯಾಣಿಕರಾದ ರಾಜು. ತಾತ್ಕಾಲಿಕ ಸೇತುವೆ ಮೇಲೆ ಕೆಸರು ತಂಬಿದ್ದು ಕೇವಲ ಬೈಕ್ ಮತ್ತು ಕಾರುಗಳು ಮಾತ್ರ ಓಡಾಡುತ್ತಿವೆ. ಮುಖ್ಯ ಸೇತುವೆಯನ್ನೇ ಬಸ್ ಸಂಚಾರಕ್ಕೆ ಸಜ್ಜುಗೊಳಿಸುವದಕ್ಕಾಗಿ ಕಾಮಗಾರಿ ಸಾಗುತ್ತಿದೆ. ಸೇತುವೆ ಕಂಬಗಳನ್ನು ಸಿದ್ಧಗೊಳಿಸಲಾಗಿದೆ. ಇದೀಗ ಇದರ ಮೇಲೆ ಸ್ಲ್ಯಾಬ್ ಅಳವಡಿಸುವ ಕೆಲಸ ನಡೆಯುತ್ತಿದೆ.
ಕಾಮಗಾರಿಯ ಗುಣಮಟ್ಟದಲ್ಲಿ ಲೋಪವಾಗಬಾರದು. ಹಳೆಯ ಸೇತುವೆಯೇ ಗಟ್ಟಿಯಾಗಿದ್ದು ಇನ್ನೂ ಹತ್ತಿಪ್ಪತ್ತು ವರ್ಷ ಬಾಳಿಕೆ ಬರುತ್ತಿತ್ತು. ಅದನ್ನು ಕೆಡವುವ ಅವಶ್ಯಕತೆ ಇರಲಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
ಈ ಮಾರ್ಗದಲ್ಲಿ ಕೇರಳದ ಕಣ್ಣೂರು, ತಲಚೇರಿಯ ನೂರಾರು ಬಸ್ ಹಾಗೂ ಕಾರುಗಳು ಬೆಂಗಳೂರು, ಮೈಸೂರಿಗೆ ನಿತ್ಯವೂ ಓಡಾಡುತ್ತಿದ್ದವು.ಇದೀಗ ಅಲ್ಲಿನ ಪ್ರಯಾಣಿಕರಿಗೂ ತೊಂದರೆಯಾಗಿದೆ.
- ಎನ್.ಎನ್.ದಿನೇಶ್.