ಮಡಿಕೇರಿ, ಜೂ. 20: ಜಿಲ್ಲೆಯ ಹಲವೆಡೆಗಳಲ್ಲಿ ಜೂನ್ 19ರ ರಾತ್ರಿ ಹಾಗೂ 20 ರಂದು ಹಲವು ಅಪರಾಧ, ಅವಘಡ ಹಾಗೂ ಅನಾಹುತಗಳು ಸಂಭವಿಸಿರುವ ಕುರಿತು ವರದಿಯಾಗಿದೆ. ಈ ಕುರಿತು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಸಮಸ್ಯೆಗೆ ಒಳಗಾದವರೇ ಅದನ್ನು ಸರಿಪಡಿಸಿಕೊಂಡಿರುವದಾಗಿ ಹೇಳಲಾಗಿದೆ. ಇನ್ನು ಕೆಲವು ಪ್ರಕರಣಗಳು ರಾಜಿ ತೀರ್ಮಾನದ ಮೂಲಕ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ.

ಮಡಿಕೇರಿಯಲ್ಲಿ ಕಳವು ಮಡಿಕೇರಿ ನಗರದಲ್ಲಿ ಕಳ್ಳರು ಮತ್ತೆ ತಮ್ಮ ಕೈಚಳಕ ತೋರಿರುವ ಘಟನೆ ನಡೆದಿದೆ. ನಗರದ ಉಕ್ಕುಡದ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ನಗರ ಪೊಲೀಸರಿಗೆ ಪುಕಾರಾಗಿದೆ. ಅಲ್ಲಿನ ನಿವಾಸಿ ಮಾರುಕಟ್ಟೆಯಲ್ಲಿ ಮೆಣಸು ಪುಡಿ ಮಾರಾಟ ಮಾಡುತ್ತಿರುವ ಮುಸ್ತಫ ಎಂಬವರ ಮನೆಗೆ ನುಗ್ಗಿರುವ ಕಳ್ಳರು ನಗದು ಹಾಗೂ ಚಿನ್ನಾಭರಣ ಅಪಹರಿಸಿರುವ ಕುರಿತು ಪುಕಾರಾಗಿದೆ.

(ಮೊದಲ ಪುಟದಿಂದ) ಇವರು ಮಂಗಳೂರಿನ ಬಿ.ಸಿ. ರಸ್ತೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ಹಿಂತಿರುಗಿದ ಸಂದರ್ಭ ಕಳ್ಳತನ ನಡೆದಿರುವದು ತಿಳಿದು ಬಂದಿದೆ. ಎರಡು ಪವನ್ ಚಿನ್ನ ಹಾಗೂ ರೂ. 31 ಸಾವಿರ ನಗದು ಅಪಹರಣವಾಗಿದೆ ಎಂದು ಅವರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ನಗರ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಕಾಕೂರುವಿನಲ್ಲಿ ಅಪಘಾತಶ್ರೀಮಂಗಲ ಸನಿಹದ ಕಾಕೂರುವಿನಲ್ಲಿ ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಘಟನೆಯಿಂದ ಕಾರು ಬಹುತೇಕ ಜಖಂಗೊಂಡಿದ್ದು, ಈ ಪ್ರಕರಣವನ್ನು ಉಭಯ ಕಡೆಯವರು ರಾಜಿ ತೀರ್ಮಾನದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿದ್ಯುತ್ ಕಳವು: ಪ್ರಕರಣ ದಾಖಲು

ಮಡಿಕೇರಿ: ಮೂರ್ನಾಡು ಸನಿಹದ ಪಾಲೆಮಾಡುವಿನಲ್ಲಿ ವಿದ್ಯುತ್ ಕಳ್ಳತನ ಪ್ರಕರಣವೊಂದನ್ನು ಕೆಇಬಿಯ ವಿಜಿಲೆನ್ಸ್ ಅಧಿಕಾರಿಗಳ ತಂಡ ಪತ್ತೆ ಹಚ್ಚಿದ್ದು, ಪ್ರಕರಣ ದಾಖಲಿಸಿದೆ. ಅಲ್ಲಿನ ನಿವಾಸಿ ಹೆಚ್.ಕೆ. ಮೊಣ್ಣಪ್ಪ ಎಂಬವರು ವಿದ್ಯುತ್ ಕಂಬದಿಂದ ಇಲಾಖೆಯ ಗಮನಕ್ಕೆ ಬಾರದೆ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದು, ಧಾಳಿಯ ಸಂದರ್ಭ ಪತ್ತೆಯಾಗಿದೆ. ಎ.ಇ.ಇ. ತಿಲಕ್ ನೇತೃತ್ವದ ತಂಡ ಈ ಧಾಳಿ ನಡೆಸಿದೆ.

ಮಡಿಕೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಮನೆ ಸಾಮಗ್ರಿಗಳು ಸಂಪೂರ್ಣ ಭಸ್ಮವಾದ ಘಟನೆ ಮಡಿಕೇರಿ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.

ಪ್ರಮೀಳಾ ಎಂಬವರ ಮನೆಯಲ್ಲಿ ಕಳೆದ ರಾತ್ರಿ 12.30 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಈ ವೇಳೆ ಪ್ರಮೀಳಾ ರಾಜೇಶ್ವರಿ ನಗರದ ತಮ್ಮ ಮಗಳ ಮನೆಯಲ್ಲಿದ್ದರು. ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರುವದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ. ನಗರಸಭಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀರುಗ ಸಮೀಪ ಹುಲಿ ಧಾಳಿ

ಗೋಣಿಕೊಪ್ಪಲು: ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪ ಅವರ ಎರಡು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿದೆ. ಮನೆಯ ಅನತಿ ದೂರದಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಧಾಳಿ ನಡೆಸಿ ಒಂದು ಹಸುವನ್ನು ಕೊಟ್ಟಿಗೆಯಲ್ಲಿ ಕೊಂದು ಹಾಕಿದೆ. ಮತ್ತೊಂದು ಹಾಲು ಕರೆಯುವ ಹಸುವನ್ನು ಕೊಟ್ಟಿಗೆಯಿಂದ ಎಳೆದೊಯ್ದು ಸಮೀಪದ ಗದ್ದೆ ಬಯಲಿನ ಪೊದೆಯಲ್ಲಿ ಅರ್ಧ ಭಾಗವನ್ನು ತಿಂದು ಹಾಕಿದೆ. ಬುಧವಾರ ಮುಂಜಾನೆ ವೇಳೆ ಮನೆಯ ಸಮೀಪವಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳ ಮೇಲೆ ಹುಲಿ ಧಾಳಿ ನಡೆಸಿದೆ.

(ಮೊದಲ ಪುಟದಿಂದ) ಮುಂಜಾನೆ ಕೊಟ್ಟಿಗೆಗೆ ಆಗಮಿಸಿದ್ದ ಮನೆ ಮಾಲೀಕರಿಗೆ ಕೊಟ್ಟಿಗೆಯ ಬಾಗಿಲಿನಲ್ಲಿಯೇ ಹಸು ಸತ್ತು ಬಿದ್ದಿರುವದು ಕಂಡು ಬಂದಿದೆ. ಹಾಲು ಕರೆಯುವ ಹಸುವಾಗಿದ್ದರಿಂದ ಕೆಚ್ಚಲಿನಲ್ಲಿ ಹಾಲು ತೊಟ್ಟಿಕ್ಕುತ್ತಿತ್ತು. ಹಸುಗಳನ್ನು ಲೆಕ್ಕ ಹಾಕಿದಾಗ ಮತ್ತೊಂದು ಹಸುವು ಕಾಣೆಯಾಗಿರುವ ಬಗ್ಗೆ ಹುಡುಕಾಟ ನಡೆಸಿದಾಗ ಸಮೀಪದ ಗದ್ದೆಯ ಬಯಲಿನ ತೋಡಿನ ಸಮೀಪ ಮತ್ತೊಂದು ಹಸುವು ಸತ್ತು ಬಿದ್ದಿರುವದು ಗೋಚರಿಸಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ವಿಜು ಅವರು ತಮ್ಮ ಉದ್ಯೋಗ ತ್ಯಜಿಸಿ ನಾಡಿಗೆ ಆಗಮಿಸಿ ಹೈನುಗಾರಿಕೆಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅಲ್ಲದೆ ಹೆಚ್ಚಾಗಿ ತನ್ನ ಹಸು, ಕರುಗಳನ್ನು ಪ್ರೀತಿಸುತ್ತಿದ್ದರು. ರೈತರಾದ ವಿಜು ತನ್ನ ಕೊಟ್ಟಿಗೆಯಲ್ಲಿ 30ಕ್ಕೂ ಅಧಿಕ ಹಸುಗಳನ್ನು ಸಾಕಾಣೆ ಮಾಡುತ್ತಿದ್ದರು. ಇದರಿಂದ ಪ್ರತಿನಿತ್ಯ ನೂರಾರು ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದರು. ಬ್ರಹ್ಮಗಿರಿ ಮೀಸಲು ಅರಣ್ಯದಿಂದ ಹುಲಿಯು ಈ ಭಾಗಕ್ಕೆ ಆಗಮಿಸಿರಬಹುದೆಂದು ಅಂದಾಜಿಸಲಾಗಿದೆ.

ಸುದ್ದಿ ತಿಳಿದ ರೈತ ಸಂಘದ ಮುಖಂಡ ಅಜ್ಜಮಾಡ ಚಂಗಪ್ಪ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು.

ಹುಲಿ ಸೆರೆ ಹಿಡಿಯುವ ಬೋನ್‍ಅನ್ನು

ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು

ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡ್ಲೂರಿನಲ್ಲಿ ಜಾರಿಬಿದ್ದು, ಕಳೆದ 10 ತಿಂಗಳ ಹಿಂದೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ತಾ. 17 ರಂದು ಮೃತಪಟ್ಟಿದ್ದು, ಇದುವರೆಗೂ ವ್ಯಕ್ತಿಯ ಕುಟುಂಬಸ್ಥರ್ಯಾರು ಮೃತದೇಹವನ್ನು ಪಡೆದಿರುವದಿಲ್ಲ.

ಮೃತ ವ್ಯಕ್ತಿಯು ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಾಗುವ ಸಂದರ್ಭ ನಾರಾಯಣಗೌಡ ಎಂದು ತನ್ನ ಹೆಸರು ನೀಡಿ, ಕೂಡುಮಂಗಳೂರು ಗ್ರಾ.ಪಂ.ನ ಕೂಡ್ಲೂರು ಗ್ರಾಮ ಎಂದು ವಿಳಾಸ ನೀಡಿದ್ದು, ಆತ 10 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಆತನ ಸಂಬಂಧಿಕರು ಯಾರೊಬ್ಬರು ನಾರಾಯಣಗೌಡ ಅವರನ್ನು ವಿಚಾರಿಸಲು ಬಂದಿರುವದಿಲ್ಲ. ತಾ. 17 ರಂದು ನಾರಾಯಣಗೌಡ ಮೃತಪಟ್ಟಿದ್ದು, ಮೃತದೇಹವನ್ನು ಮೈಸೂರು ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಂಬಂಧಿಕರು ಕೂಡಲೇ ಆಸ್ಪತ್ರೆಯಿಂದ ಕಳೆಬರಹವನ್ನು ಪಡೆದುಕೊಳ್ಳಬಹುದೆಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ರಮ ಮರ ಸಾಗಾಟ

ಕುಶಾಲನಗರ: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ಅರಣ್ಯ ಸಂಚಾರಿದಳದ ಅಧಿಕಾರಿಗಳು ಪತ್ತೆಹಚ್ಚಿ ಲಾರಿ ಸಹಿತ ಮರ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರಸಂತೆ ವಲಯದ ಅವರೆದಾಳು ವ್ಯಾಪ್ತಿಯಲ್ಲಿ ಟ್ರಾಕ್ಟರ್ ಒಂದರಲ್ಲಿ (ಕೆಎ.13.ಟಿಎ.9391) ನಂದಿ ಮತ್ತು ಹಲಸು ನಾಟಾಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೀವನ್‍ಕುಮಾರ್ ಮಾರ್ಗದರ್ಶ ನದಲ್ಲಿ ವಲಯ ಅರಣ್ಯಾಧಿಕಾರಿ ಹೆಚ್.ಜಿ.ದೇವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಅಂದಾಜು ರೂ. 2 ಲಕ್ಷ ಮೌಲ್ಯದ ಮರದ ನಾಟ ಹಾಗೂ ಟ್ರ್ಯಾಕ್ಟರ್ ಮತ್ತು ಆರೋಪಿ ಕೆ.ಎಸ್.ಸತೀಶ್ ಎಂಬವರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಇಲಾಖೆಯ ಹೆಚ್.ಜಿ.ದೇವರಾಜ್, ನಾರಾಯಣ ಮೂಲ್ಯ, ಕೊಚ್ಚೆರ ದೇವಯ್ಯ, ಚಾಲಕ ಪ್ರವೀಣ್ ಪಾಲ್ಗೊಂಡಿದ್ದರು.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ಶನಿವಾರಸಂತೆ : ಶನಿವಾರಸಂತೆ ಸಮೀಪದ ಬಿದರೂರು ಹೊಸ ಕಾಲೋನಿ (ವಿಜಯನಗರ) ನಿವಾಸಿ, ಅಂಗವಿಕಲ ಹೆಚ್.ಜಿ. ಲೋಕೇಶ್ ಅವರಿಗೆ ಬಾರ್ ಒಂದರಲ್ಲಿ ಸೋಮವಾರ ರಾತ್ರಿ ಸುಳುಗಳಲೆ ಕಾಲೋನಿ ನಿವಾಸಿಗಳಾದ ಮನು ಮತ್ತು ಪ್ರದೀಪ್ ಅವರುಗಳು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿದ್ದಾರೆ.

ಲೋಕೇಶ್ ಅವರು ತಮ್ಮ ಮನೆಗೆ ಪೈಂಟ್ ಕೆಲಸ ಮಾಡಿಕೊಡಲು ಮನು ಮತ್ತು ಪ್ರದೀಪ್ ಅವರಿಗೆ ಹೇಳಿದ್ದರು. ಅವರು ಮಾಡಿಕೊಡಲು ವಿಳಂಬ ಮಾಡಿದ್ದರಿಂದ ಬೇರೆಯವರಿಂದ ಕೆಲಸ ಮಾಡಿಸಿಕೊಂಡರು. ತಾ. 18 ರಂದು ರಾತ್ರಿ ಮನೆಗೆ ನೆಂಟರು ಬಂದಿದ್ದು, ಅವರಿಗೆ ಬ್ರಾಂದಿ ತೆಗೆದುಕೊಂಡು ಬರಲು ಬಸ್ ನಿಲ್ದಾಣದ ಹತ್ತಿರವಿರುವ ಬಾರ್ ಒಂದಕ್ಕೆ ಹೋದಾಗ ಬಾರ್‍ನಲ್ಲಿ ಕುಡಿಯುತ್ತಾ ಕುಳಿತಿದ್ದ ಮನು, ಪ್ರದೀಪ್, ಲೋಕೇಶ್ ಅವರನ್ನು ಕುಡಿಯಲು ಕರೆದಿದ್ದಾರೆ. ಒಟ್ಟಿಗೆ ಕುಡಿಯುತ್ತಾ ಕುಳಿತಿದ್ದಾಗ ಮನೆಗೆ ಪೈಂಟ್ ಮಾಡಿಕೊಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಲೋಕೇಶ್ ಅವರಿಗೆ ಈರ್ವರು ಹಲ್ಲೆ ನಡೆಸಿದ್ದಾರೆ.

ಪ್ರಜ್ಞೆ ತಪ್ಪಿದ ಇವರನ್ನು ಯಾರೋ ಆಟೋದಲ್ಲಿ ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದ ಲೋಕೇಶ್ ತಾ. 19 ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿ, ಗಲಾಟೆಯ ಸಮಯದಲ್ಲಿ ತಮ್ಮ ಜೇಬಿನಲ್ಲಿದ್ದ ರೂ. 7,800 ಹಣ, ಬೆಳ್ಳಿಯ ಬ್ರಾಸ್ಲೆಟ್ ಹಾಗೂ ಮೊಬೈಲ್ ಕಳೆದು ಹೋಗಿರುತ್ತದೆ ಎಂದು ನೀಡಿದ ದೂರಿಗೆ ಪೊಲೀಸ್ ಠಾಣೆಯ ಹೆಡ್‍ಕಾನ್ಸ್‍ಟೇಬಲ್ ಶಿವಲಿಂಗಪ್ಪ ಪ್ರಕರಣ ದಾಖಲಿಸಿದ್ದಾರೆ.

ಬಸ್ ಅಡಿಗೆ ಸಿಲುಕಿದ ಬೈಕ್

ಮೂರ್ನಾಡು ಸನಿಹದ ಎಂ. ಬಾಡಗದಲ್ಲಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಅವಘಡ ಸಂಭವಿಸಿದೆ. ಮಡಿಕೇರಿಯಿಂದ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಬಸ್‍ನ ಮುಂಭಾಗಕ್ಕೆ ಬೈಕ್ ಗಂಭೀರ ಸ್ವರೂಪದಲ್ಲಿ ಡಿಕ್ಕಿಯಾಗಿದ್ದರೂ, ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ರಾಜಿ ತೀರ್ಮಾನದ ಮೂಲಕ ಈ ಪ್ರಕರಣ ಇತ್ಯರ್ಥಗೊಂಡಿದೆ.

ಖಾಸಗಿ ಬಸ್‍ನಲ್ಲೇ ಹೃದಯಾಘಾತ

ಸೋಮವಾರಪೇಟೆ: ಕುಂಬೂರಿನಿಂದ ಬಜೆಗುಂಡಿ ಗ್ರಾಮಕ್ಕೆ ಆಗಮಿಸುತ್ತಿದ್ದ ಖಾಸಗಿ ಬಸ್‍ನಲ್ಲಿ ಹೃದಯಾಘಾತ ಸಂಭವಿಸಿ ಅವಿವಾಹಿತ ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಮೂಲತಃ ಹೊಸಕೋಟೆ ನಿವಾಸಿ, ಪ್ರಸ್ತುತ ಬಜೆಗುಂಡಿ ಗ್ರಾಮದ ಸುರೇಶ್ ಎಂಬವರ ಮನೆಯಲ್ಲಿ ನೆಲೆಸಿದ್ದ ಕೂಲಿಕಾರ್ಮಿಕ ಪ್ರಕಾಶ್ (28) ಎಂಬವರೇ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಇಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಆಗುವ ಸಂದರ್ಭ ದುರ್ಘಟನೆ ಸಂಭವಿಸಿದೆ.

ಬೆಳಿಗ್ಗೆ 8.30ಕ್ಕೆ ಕುಂಬೂರು ಗ್ರಾಮದ ಕಾಫಿ ತೋಟಕ್ಕೆ ಕೆಲಸಕ್ಕೆಂದು ತೆರಳಿದ ಪ್ರಕಾಶ್, ಮಧ್ಯಾಹ್ನದವರೆಗೂ ಕೆಲಸ ಮಾಡಿದ್ದಾರೆ. ನಂತರ ಎದೆನೋವು ಕಾಣಿಸಿಕೊಂಡಿದ್ದರಿಂದ ಮನೆಗೆ ತೆರಳಲೆಂದು ಕುಂಬೂರಿನಿಂದ ಖಾಸಗಿ ಬಸ್ ಏರಿದ್ದಾರೆ. ಸ್ವಲ್ಪ ದೂರ ಸಂಚರಿಸುವಷ್ಟರಲ್ಲೇ ಹೃದಯಾಘಾತ ಸಂಭವಿಸಿದ್ದು, ಬಸ್‍ನ ಹಿಂಬದಿ ಸೀಟ್‍ನಲ್ಲಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಸಹ ಪ್ರಯಾಣಿಕರು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದು, ಪ್ರಕಾಶ್ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪ್ರಕಾಶ್ ಅವರು ಸಾವನ್ನಪ್ಪಿರುವದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಮೃತ ಪ್ರಕಾಶ್ ಅವರು ಅನಾರೋಗ್ಯ ಪೀಡಿತ ತಾಯಿ, ಚಿಕ್ಕಮ್ಮ ಮತ್ತು ಅಜ್ಜಿಯನ್ನು ಅಗಲಿದ್ದಾರೆ. ಈ ಮೂವರಿಗೂ ತೀವ್ರ ಆರೋಗ್ಯ ಸಮಸ್ಯೆಯಿದ್ದು, ಇದುವರೆಗೂ ಈತನೇ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದ ಎಂದು ಪ್ರಕಾಶ್ ಅವರ ಸಂಬಂಧಿಕರು ತಿಳಿಸಿದ್ದಾರೆ.