ಶನಿವಾರಸಂತೆ, ಜೂ. 20: ಕೊಡಗು- ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಈ ಭಾಗರ ರೈತರು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿ ರುವದು ವಾಡಿಕೆಯಾದಂತಾಗಿದೆ. ಕೊಡಗು - ಹಾಸನ ಜಿಲ್ಲೆಗಳ ಗಡಿ ಭಾಗದಲ್ಲಿ ಆಲೂರುಸಿದ್ದಾಪುರ, ಕಡ್ಲೆÀಮಕ್ಕಿ ಮತ್ತು ಬಾಣಾವರ ಮೀಸಲು ಅರಣ್ಯ ವ್ಯಾಪಿಸಿದೆ. ಈ ಮೀಸಲು ಅರಣ್ಯದಿಂದ ಬರುವ ಕಾಡಾನೆಗಳು ಮಾಲಂಬಿ, ಹೊಸಗುತ್ತಿ, ಆಲೂರುಸಿದ್ದಾಪುರ, ಕಡ್ಲೆಮಕ್ಕಿ, ಕಣಗಾಲು, ಹಿತ್ತಲಗದ್ದೆ, ಆಲದಮರ, ದೊಡ್ಡಳ್ಳಿ ಮುಂತಾದ ಗ್ರಾಮಗಳಿಗೆ ನುಸುಳಿ ರೈತರು ಬೆಳೆದ ಫಸಲುಗಳನ್ನು ನಾಶ ಮಾಡುತ್ತಿವೆ. ಅರಣ್ಯ ಇಲಾಖೆಯಿಂದ ಈ ಭಾಗದ ಮೀಸಲು ಅರಣ್ಯ ಬದಿಯಲ್ಲಿ ಅವೈಜ್ಞಾನಿಕವಾಗಿ ಟ್ರಂಚ್ಗಳನ್ನು ನಿರ್ಮಿಸುತ್ತಿರುವದರಿಂದ ಕಾಡಾನೆಗಳು ಸುಲಭವಾಗಿ ಊರಿನೊಳಗೆ ನುಸುಳುತ್ತಿವೆ ಎಂಬದು ಈ ಭಾಗದ ರೈತರ ಆರೋಪವಾಗಿದೆ.
ಮಂಗಳವಾರ ಹಾಡಹಗಲೇ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಲೂರುಸಿದ್ದಾಪುರ ಸಮೀಪದ ಹಾಸನ ತೆರಗಳಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಆಲದಮರ ಗ್ರಾಮದ ಜಂಕ್ಷನ್ನಲ್ಲಿ ಪಕ್ಕದ ಅರಣ್ಯದಿಂದ ಬಂದ 5 ಕಾಡಾನೆಗಳ ಹಿಂಡು ರಸ್ತೆ ದಾಟಿ ಗ್ರಾಮದೊಳಗೆ ನುಸುಳುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಜನರು ಭಯಗೊಂಡು ಕೂಗಿಕೊಂಡಿದ್ದಾರೆ. ಈ ಸಂದರ್ಭದಲ್ಲೆ ಆಲದಮರ ಜಂಕ್ಷನ್ನಲ್ಲಿ ಬಾಣಾವರ ಮೀಸಲು ಅರಣ್ಯ ವಲಯದ ಅರಣ್ಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿ ದ್ದರು. ಆಲೂರುಸಿದ್ದಾಪುರ, ಆಲದಮರ ಗ್ರಾಮಸ್ಥರು ಸೇರಿದಂತೆ ಹಾಸನ ಜಿಲ್ಲೆಗೆ ಸೇರಿದ ತೆರಗಳಲೆ ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದರು. ಕೊನೆಗೆ ಕಾಡಾನೆ ಹಿಂಡನ್ನು ಬಾಣಾವರ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆ ಯಲ್ಲಿ ಉಭಯ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಉಭಯ ಜಿಲ್ಲೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.