ಮಡಿಕೇರಿ, ಜೂ. 20: ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ಪ್ರಮುಖ ಉದ್ದೇಶ ವೈಫಲ್ಯವಾಗಿರುವ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕುಶಾಲನಗರ ಪಟ್ಟಣಕ್ಕೆ ಸರಕಾರ 2012 ರಲ್ಲಿ ರೂ. 40 ಕೋಟಿ 10 ಲಕ್ಷ ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ 2014 ರಿಂದ ಕಾಮಗಾರಿ ಪ್ರಾರಂಭಿಸಿದೆ. ಆದರೆ ಕಾಮಗಾರಿ ನಡೆಸುವ ಸಂದರ್ಭ ತಾವರೆಕೆರೆ ಬಳಿಯಿಂದ ಮುಳ್ಳುಸೋಗೆ ಗ್ರಾಮ ತನಕ ಬೃಹತ್ ಆಳುಗುಂಡಿಗಳನ್ನು ನದಿ ತಟದಲ್ಲಿ ನಿರ್ಮಾಣ ಮಾಡಿದ್ದು ಅವುಗಳು ಕಾವೇರಿ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದೆ. ಈ ಮೂಲಕ ಕಾಮಗಾರಿಯ ಉದ್ದೇಶ ಸಂಪೂರ್ಣ ವಿಫಲವಾಗಿದೆ. ಕೆರೆ ಬದಿಯಲ್ಲಿ, ನದಿ ಬದಿಯಲ್ಲಿ ಶೌಚ ತ್ಯಾಜ್ಯ ಸರಬರಾಜು ಮಾಡುವ ಆರ್‍ಸಿಸಿ, ಪಿವಿಸಿ ಕೊಳವೆಗಳನ್ನು ಅಳವಡಿಸಿದ್ದು ಇದರಿಂದ ಮಳೆಗಾಲದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ. ಮಂಡಳಿಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಅಚಾತುರ್ಯ ನಡೆದಿದ್ದು ಸಂಬಂಧಿಸಿದ ಕಾಮಗಾರಿಯ ಛಾಯಾಚಿತ್ರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ನೀಡಲಾಗಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿಗಳು ಸಮಿತಿ ಪ್ರಮುಖರಿಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಜಿಲ್ಲಾ ಪರಿಸರ ಅಧಿಕಾರಿಗಳಿಗೆ ಮಾಹಿತಿ ಒದಗಿಸಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ. ಮನವಿ ಸಲ್ಲಿಕೆ ಸಂದರ್ಭ ಸಮಿತಿಯ ಪ್ರಮುಖರಾದ ಡಿ.ಆರ್. ಸೋಮಶೇಖರ್, ಬಾಲಕೃಷ್ಣ ಇದ್ದರು.