ಸೋಮವಾರಪೇಟೆ, ಜೂ.20: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ವತಿಯಿಂದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಸ್ಥಳೀಯ ಶ್ರೀ ರಾಮಮಂದಿರದಲ್ಲಿ ನಡೆಯಿತು.
ಸಮಾಜದ ಅಧ್ಯಕ್ಷ ರಾಮ್ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 5ನೇ ತರಗತಿಯಿಂದ ಪದವಿ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ 48 ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು.
ಇದರೊಂದಿಗೆ ಶೇಕಡ 85ಕ್ಕಿಂತಲೂ ಅಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿ, ವಿದ್ಯಾಭ್ಯಾಸದ ಅವಧಿಯಲ್ಲಿ ಟಿ.ವಿ. ಹಾಗೂ ಮೊಬೈಲ್ನಿಂದ ದೂರವಿದ್ದು, ವ್ಯಾಸಂಗದತ್ತ ಆಸಕ್ತಿ ವಹಿಸಬೇಕು. ಮಕ್ಕಳ ಸವಾರ್ಂಗೀಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಮುಖ್ಯವಾಗಿದ್ದು, ಅವರುಗಳ ಚಟುವಟಿಕೆಯತ್ತ ಗಮನಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿ.ಎಸ್. ರಾಮಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಗಳಿಗೆ ನೀಡಿದ ಸಹಾಯಧನ ಸದುಪಯೋಗವಾಗಬೇಕು. ಮುಂದಿನ ದಿನಗಳಲ್ಲಿ ಇನ್ನಿತರ ಬಡ ವಿದ್ಯಾರ್ಥಿಗಳಿಗೆ ನಿಮ್ಮಿಂದ ಧನ ಸಹಾಯ ನೀಡಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸಮಾಜದ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ವಿದ್ಯಾನಿಧಿ ಸಮಿತಿ ಸದಸ್ಯರಾದ ಬಿ.ಎಸ್. ಅನಂತರಾಮ್, ಎನ್.ಎನ್. ರಮೇಶ್, ಬಿ.ಸಿ. ರೇವಣ್ಣ, ಬಿ.ಕೆ. ಉದಯಕುಮಾರ್, ಬಿ.ಎಸ್. ರಘು, ಬಿ.ಎಂ. ರಾಮ್ಪ್ರಸಾದ್, ಬಿ.ಎಸ್. ಯತೀಶ್, ಯುವಕ ಸಂಘ ಹಾಗೂ ಸೀತಾ ಬಳಗದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.