ಮಡಿಕೇರಿ, ಜೂ. 20: ಕರ್ನಾಟಕ ಮತ್ತು ಕೇರಳ ರಾಜ್ಯ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ಪೆರುಂಬಾಡಿ-ಮಾಕುಟ್ಟ ಹೆದ್ದಾರಿಯು ಅತಿವೃಷ್ಟಿಯಿಂದ ಹದಗೆಟ್ಟಿದ್ದು, ಈ ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಸೂಚನೆ ನೀಡಿದ್ದಾರೆ.

ಕಳೆದ ವಾರ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹದಗೆಟ್ಟಿರುವ ರಸ್ತೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಸಚಿವರು ಮಾತನಾಡಿದರು.‘ಪೆರುಂಬಾಡಿ-ಮಾಕುಟ್ಟ ಅಂತರ ರಾಜ್ಯ ಹೆದ್ದಾರಿ ಸರಿಪಡಿಸುವ ನಿಟ್ಟಿನಲ್ಲಿ ಅನುಮತಿ ನೀಡುವದು ತನ್ನ ಜವಾಬ್ದಾರಿ, ಇಂದಿನಿಂದಲೇ ಕಾಮಗಾರಿ ಆರಂಭಿಸುವದು ಇಂಜಿನಿಯರ್‍ಗಳ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ವಿಶೇಷ ವಿನಾಯಿತಿ ನೀಡಲಾಗುವದು ಎಂದು ಸ್ಪಷ್ಟಪಡಿಸಿದರು.

ಪೆರುಂಬಾಡಿ-ಮಾಕುಟ್ಟ ಮಾರ್ಗ ರಸ್ತೆ ಬದಿಯಲ್ಲಿರುವ ಮರಗಳನ್ನು ನಾಳೆಯಿಂದಲೇ ಕಡಿಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಸಚಿವರು, ಮಧ್ಯದಲ್ಲಿ ಜಿಲ್ಲೆಗೆ ಆಗಮಿಸಿ ಈ ಮಾರ್ಗದ ರಸ್ತೆ ವೀಕ್ಷಣೆ ಮಾಡುತ್ತೇನೆ ಎಂದು ಹೇಳಿದರು.

ಮಡಿಕೇರಿ-ಮಾಣಿ-ಮಂಗಳೂರು ರಸ್ತೆ ಮಾರ್ಗ ಗುಂಡಿ ಬಿದ್ದಿದ್ದು, ತಕ್ಷಣವೇ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವದು. ರಸ್ತೆಯಲ್ಲಿಯೇ ನೀರು ಹೋಗುತ್ತಿದೆ. ಚರಂಡಿ ಸರಿಪಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವದು. ಮಳೆ ನೀರು ಚರಂಡಿಯಲ್ಲಿ ಹೋಗುವಂತಾಗಲು ಚರಂಡಿ ಸರಿಪಡಿಸುವ ಕಾರ್ಯವನ್ನು ಜುಲೈ ಮೊದಲ ವಾರದಲ್ಲಿ ಮಾಡಲಾಗುವದು ಎಂದು ತಿಳಿಸಿದರು.

ಚೆನ್ನರಾಯಪಟ್ಟಣ, ಅರಕಲಗೂಡು, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ ಮತ್ತು ವೀರಾಜಪೇಟೆ ಮಾರ್ಗದ ದ್ವಿಪಥ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗುವದು ಎಂದು ಹೇಳಿದರು.

(ಮೊದಲ ಪುಟದಿಂದ) ಶಿರಾಡಿ ಘಾಟ್ ರಸ್ತೆ ಜುಲೈ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣ ಗೊಳ್ಳಲಿದ್ದು, ಸಾರಿಗೆ ಸಂಪರ್ಕಕ್ಕೆ ಅನುಕೂಲ ಮಾಡಲಾಗು ವದು. ಸೋಮವಾರಪೇಟೆ-ಸುಬ್ರಮಣ್ಯ ಮಾರ್ಗದ ರಸ್ತೆಯನ್ನು ಕೈಗೆತ್ತಿಕೊಳ್ಳಲಾಗುವದು ಎಂದು ವಿವರಿಸಿದರು.

ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಕಾಮಗಾರಿ ಪೂರ್ಣಗೊಳಿಸ ಲಾಗುವದು ಎಂದು ನುಡಿದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಳೆದ 25 ವರ್ಷಗಳಲ್ಲಿಯೇ ಈ ಬಾರಿ ಒಂದು ವಾರದಲ್ಲಿ ಯಥೇಚ್ಚ ಮಳೆಯಾಗಿದೆ. ಇದರಿಂದಾಗಿ ರಸ್ತೆಗಳು, ಸೇತುವೆಗಳು, ಮನೆಗಳು ಕುಸಿದಿವೆ, ಬೆಳೆ ಹಾನಿಯಾಗಿದೆ ಎಂದು ವಿವರಿಸಿದರು.

ಪೆರುಂಬಾಡಿ-ಮಾಕುಟ್ಟ ರಸ್ತೆ ಮಾರ್ಗ ಸುಮಾರು 60 ಕಡೆಗಳಲ್ಲಿ ಭೂ ಕುಸಿದಿದೆ. ರಸ್ತೆ ಹದಗೆಟ್ಟಿದೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗಳು ರೂ. 4 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಿದ್ದಾರೆ. ನಷ್ಟವಾಗಿರುವದು ಇಷ್ಟೇನಾ ಎಂದು ಬೋಪಯ್ಯ ಪ್ರಶ್ನಿಸಿದರು.

ಪೆರುಂಬಾಡಿ-ಮಾಕುಟ್ಟ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು. ಸುಮಾರು ರೂ. 40 ಕೋಟಿ ಪೆರುಂಬಾಡಿ-ಮಾಕುಟ್ಟ ರಸ್ತೆಗೆ ಬೇಕಿದೆ ಎಂದ ಶಾಸಕರು, ಮಡಿಕೇರಿ-ಸಂಪಾಜೆ ರಸ್ತೆಯ ಎರಡು ಬದಿ ಕಾಡು ಕಡಿಯಬೇಕು. ಸಂಪಾಜೆ ಮಾರ್ಗ ರಸ್ತೆಯೇ ಕಾಣುವದಿಲ್ಲ, ಇದನ್ನು ಸರಿಪಡಿಸುವ ಕಾರ್ಯ ಮಾಡಬೇಕು ಎಂದು ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಯಿಂದ ರಸ್ತೆಗಳು ಹದಗೆಡು ವದರಿಂದ ರಸ್ತೆಗಳ ಅಭಿವೃದ್ಧಿಗಾಗಿ ‘ವಿಶೇಷ ಪ್ಯಾಕೇಜ್’ ಪ್ರಕಟಿಸಬೇಕು ಎಂದು ಕೆ.ಜಿ. ಬೋಪಯ್ಯ ಅವರು ಇದೇ ಸಂದರ್ಭ ಸಚಿವರಲ್ಲಿ ಮನವಿ ಮಾಡಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ರಸ್ತೆಗಳು ಹದಗೆಟ್ಟಿದ್ದು, ಸರಿಪಡಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಚೆನ್ನರಾಯಪಟ್ಟಣ, ಅರಕಲಗೂಡು, ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ ಮತ್ತು ವೀರಾಜಪೇಟೆ ಮಾರ್ಗದ ದ್ವಿಪಥ ರಸ್ತೆ ನಿರ್ಮಾಣಕ್ಕೆ ಈ ಹಿಂದೆಯೇ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಈ ಕಾಮಗಾರಿ ತ್ವರಿತವಾಗಿ ಆರಂಭಿಸಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ, ಅತಿವೃಷ್ಟಿಯಿಂದ ಪೆರುಂಬಾಡಿ-ಮಾಕುಟ್ಟ ರಸ್ತೆ ಕುಸಿದಿರುವದನ್ನು ನೇರವಾಗಿ ವೀಕ್ಷಣೆ ಮಾಡಿದಾಗ ಮಾತ್ರ ಪರಿಸ್ಥಿತಿ ತಿಳಿಯಲಿದೆ. ಒಂದು ಬಾರಿ ಸ್ಥಳಕ್ಕೆ ಭೇಟಿ ನೀಡಬೇಕಾಗಿ ಸಚಿವರಲ್ಲಿ ಮನವಿ ಮಾಡಿದರು.

ಸದಸ್ಯೆ ವೀಣಾ ಅಚ್ಚಯ್ಯ ಅವರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ನದಿ, ಕಾಲುವೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಸಂಪರ್ಕಕ್ಕೆ ತುಂಬಾ ತೊಂದರೆಯಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಮರದ ಪಾಲದ ಮೂಲಕ ನದಿ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಡೆಗಳಲ್ಲಿ ತೂಗು ಸೇತುವೆ ನಿರ್ಮಾಣ ಮಾಡಬೇಕು ಎಂದು ಸಚಿವರ ಗಮನಕ್ಕೆ ತಂದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ರಸ್ತೆಗಳನ್ನು ಸರಿಪಡಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಬಗ್ಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಇಂಜಿನಿಯರ್ ವಿನಯ ಕುಮಾರ್ ಪೆರುಂಬಾಡಿ-ಮಾಕುಟ್ಟ ರಸ್ತೆ ದುರಸ್ತಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಲೋಕೋಪ ಯೋಗಿ ಇಲಾಖೆಯ ಇಂಜಿನಿಯರ್‍ಗಳು, ವಿವಿಧ ಇಲಾಖೆ ಅಧಿಕಾರಿ ಇದ್ದರು.